ಕುಂದಾಪುರ: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮೂರು ವರ್ಷಗಳಿಂದ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯ ಜಮೆ ಮಾಡದೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ಸಿಐಟಿಯು) ಕರೆ ನೀಡಿರುವ ಹಿನ್ನೆಲೆ ಶೈಕ್ಷಣಿಕ ಧನಸಹಾಯ ಬಿಡುಗಡೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಕಾರ್ಮಿಕರ ಮಕ್ಕಳು ಕುಂದಾಪುರ ಶಾಸಕರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ 2021-22 ಹಾಗೂ 2022-23 ಸಾಲಿನಲ್ಲಿ ಕೊಡಬೇಕಾದ ಶೈಕ್ಷಣಿಕ ಧನಸಹಾಯ ಬಿಡುಗಡೆಗೆ ಹಲವು ರೀತಿಯ ಹೋರಾಟ ನಮ್ಮ ಸಂಘದಿಂದ ನಡೆಸಲಾಗಿದೆ. ಈ ಬಗ್ಗೆ ಮಂಡಳಿ ಹಾಗೂ ಕಾರ್ಮಿಕ ಸಚಿವರು ನಮ್ಮ ಸಂಘಟನೆ ಜತೆ ಮಾತುಕತೆ ನಡೆಸಿ ಬಿಡುಗಡೆ ಮಾಡುವುದಾಗಿ ನೀಡಿದ ಭರವಸೆ ಇನ್ನೂ ಈಡೇರಿಲ್ಲ. ಕಾರ್ಮಿಕ ಸಚಿವರು ಬೋಗಸ್ ಕಾರ್ಡ್ ನೆಪವೊಡ್ಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯುಂಟು ಮಾಡುತ್ತಿದ್ದಾರೆ. ಕುಂದಾಪುರ ಶಾಸಕರು ಧನಸಹಾಯ ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಸಿಐಟಿಯು ಅಧ್ಯಕ್ಷ ಸುರೇಶ ಕಲ್ಲಾಗರ ಆಗ್ರಹಿಸಿದರು.
ವಿದ್ಯಾರ್ಥಿಗಳಾದ ಪಲ್ಲವಿ, ಶ್ರೇಯಲ್ ಎಸ್., ಸಮೀರ್, ಭೂಮಿಕ ಕೆ.ಪೂಜಾರಿ, ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ ವಿ., ಕೃಷ್ಣ ಪೂಜಾರಿ, ಶಶಿಕಾಂತ್ ಎಸ್.ಕೆ., ವಿಜೇಂದ್ರ ಕೋಣಿ, ಸುಧೀರ್ ಪೂಜಾರಿ ಮೊದಲಾದವರಿದ್ದರು. ಕಟ್ಟಡ ಕಾರ್ಮಿಕರ ಮಕ್ಕಳು ಗ್ರಾಮೀಣ ಪ್ರದೇಶವಾದ ಗುಲ್ವಾಡಿ, ಸಳ್ವಾಡಿ ಕಾಳಾವಾರ ಹಾಗೂ ಆಲೂರು ಗ್ರಾಮಗಳಲ್ಲಿ ಗ್ರಾಪಂ ಎದುರು ಪ್ರತಿಭಟಿಸಿ ಪಂಚಾಯಿತಿ ಅಧ್ಯಕ್ಷರ ಮೂಲಕ ಮನವಿ ಸಲ್ಲಿಸಿದರು. ಅಣ್ಣಪ್ಪ ಅಬ್ಬಿಗುಡ್ಡಿ, ರೆಹೆಮಾನ್, ರಾಮಚಂದ್ರ ನಾವಡ, ರಘುರಾಮ ಆಚಾರ್ಯ ಮೊದಲಾದವರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.