ಪ್ರಾಕೃತಿಕ ವಿಕೋಪ ಮುಂಜಾಗ್ರತೆಗೆ ಅಧಿಕಾರಿಗಳ ಸಭೆ

officers
ತಾಲೂಕು ಮಟ್ಟದ ಅಧಿಕಾರಿಗಳ ಸಭೆ ತಾಲೂಕು ಕಚೇರಿಯಲ್ಲಿ ನಡೆಯಿತು
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಮಳೆಗಾಲದಲ್ಲಿ ಉಂಟಾಗಬಹುದಾದ ಪ್ರಾಕೃತಿಕ ವಿಕೋಪಗಳ ಮುಂಜಾಗ್ರತಾ ಕ್ರಮಗಳ ಬಗ್ಗೆ ಹಾಗೂ ತುರ್ತು ಕ್ರಮವಹಿಸುವ ಬಗ್ಗೆ ಪೂರ್ವಭಾವಿಯಾಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ತಾಲೂಕು ಕಚೇರಿಯಲ್ಲಿ ಸೋಮವಾರ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಕಳ ತಹಸೀಲ್ದಾರ್ ನರಸಪ್ಪ ಮಾತನಾಡಿ, ಮಳೆಗಾಲ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ತಾಲೂಕಿನ ಎಲ್ಲ ಇಲಾಖೆ ಸನ್ನದ್ಧರಾಗಿರಬೇಕು. ಮಳೆಗಾಲದ ಸಂದರ್ಭ ಸಿಡಿಲಿನ ರಕ್ಷಣೆಗೆ ಜಾಗೃತಿ, ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ, ಜೀವಹಾನಿ ತಡೆಯಲು ಮಳೆಗಾಲದ ಮುನ್ನೆಚ್ಚರಿಕೆ ವಹಿಸುವುದು. ಗ್ರಾಪಂ ವ್ಯಾಪ್ತಿಯಲ್ಲಿನ ಓವರ್‌ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವುದು ಒಳಚರಂಡಿಗಳಲ್ಲಿ ತುಂಬಿರುವ ಹೂಳಿನ ತೆರವು ಹಾಗೂ ಮಳೆಯ ನೀರು ಸರಾಗವಾಗಿ ಹರಿಯಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರಲ್ಲಿ ಅರಿವು

ಮಳೆಗಾಲದಲ್ಲಿ ಸಿಡಿಲು ಬಡಿದು ಉಂಟಾಗಬಹುದಾದ ಹಾನಿಯ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮ ಮತ್ತು ಸಣ್ಣ ಹೊಂಡಗಳಲ್ಲಿ ರಸ್ತೆ ಮನೆ ಬದಿಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿರುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪುರಸಭೆ, ಗ್ರಾಪಂನಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ತಿಳಿಸಿದರು.

ತಾಲೂಕು ಕಚೇರಿಯಲ್ಲಿ ತುರ್ತು ವಿಪತ್ತು ನಿರ್ವಹಣೆಗಾಗಿ ಕಂಟ್ರೋಲ್ ರೂಂ ತೆರೆಯಲಾಗಿದ್ದು 247 ಸೇವೆ ನೀಡಲಾಗುತ್ತದೆ. ಪ್ರಾಕೃತಿಕ ವಿಕೋಪ ತುರ್ತು ಸಂದರ್ಭ ಅಧಿಕಾರಿಗಳಿಂದ ಅಥವಾ ಸಾರ್ವಜನಿಕರಿಂದ ಯಾವುದೇ ಕರೆಗಳು ಬಂದರೂ ಸ್ವೀಕರಿಸಿ ತಕ್ಷಣ ಅದಕ್ಕೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಸೂಚಿಸಿದರು. ತೋಟಗಾರಿಕಾ ಬೆಳೆ ಹಾನಿ ಉಂಟಾದಲ್ಲಿ ಪರಿಹಾರ ಪಾವತಿಗೆ ಜರೂರು ತಾಂತ್ರಿಕ ವರದಿ ನೀಡುವಂತೆ ಸೂಚಿಸಲಾಯಿತು.

ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಪುರಸಭೆ ಮುಖ್ಯಧಿಕಾರಿ ರೂಪಾ ಟಿ.ಶೆಟ್ಟಿ ಉಪಸ್ಥಿತರಿದ್ದರು. ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಉಪಸ್ಥಿತರಿದ್ದರು. ಅಪಾಯಕಾರಿ ಮರಗಳ ತೆರವು ರಸ್ತೆಬದಿ ವಾಹನಗಳು ಹಾಗೂ ವಿದ್ಯುತ್ ತಂತಿಗಳಿಗೆ ಬೀಳಬಹುದಾದ ಅಪಾಯಕಾರಿ ಮರದ ರೆಂಬೆ- ಕೊಂಬೆ ಹಾಗೂ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ತಿಳಿಸಿದರು. ಆರೋಗ್ಯ ಇಲಾಖೆ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ಕೈಗೊಳ್ಳುವುದು ಹಾಗೂ ಆರೋಗ್ಯ ಇಲಾಖೆಗೆ ಸಂಬಂಧಿಸಿ ಪ್ರತ್ಯೇಕ ಕಂಟ್ರೋಲ್ ರೂಂ ತೆರೆಯುವಂತೆ ಸೂಚಿಸಲಾಯಿತು. ತುರ್ತು ಸಂದರ್ಭ ಆಂಬುಲೆನ್ಸ್ ಹಾಗೂ ಇತರೆ ವೈದ್ಯಕೀಯ ಸೇವೆ ನೀಡಲು ತಿಳಿಸಲಾಯಿತು. ಡೆಂೆ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವಂತೆ ಆರೋಗ್ಯ ಇಲಾಖಾಧಿಕಾರಿಗೆ ತಹಸೀಲ್ದಾರ್ ಸೂಚಿಸಿದರು.

ಪಾಲಕರಿಗೆ ಸೂಚನೆ ಶಾಲಾ ಮಕ್ಕಳು ಸುರಕ್ಷಿತವಾಗಿ ಶಾಲೆ, ಕಾಲೇಜು, ಮನೆ ತಲುಪಲು ಪಾಲಕರೇ ಸಂಪೂರ್ಣ ಜಾಗೃತಿ ವಹಿಸುವುದು, ಮಕ್ಕಳ ಸುರಕ್ಷತೆ ಬಗ್ಗೆ ಶಾಲಾ ಮಟ್ಟದಲ್ಲಿ ಪಾಲಕರಿಗೆ ಸೂಚನೆ ನೀಡುವುದು. ಹಳೆಯ ವಿದ್ಯುತ್ ಕಂಬಗಳಿದ್ದಲ್ಲಿ ವಿದ್ಯುತ್ ಕಂಬ ಮಣ್ಣಿನಿಂದ ಸಡಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದಲ್ಲಿ ಅದನ್ನು ಕೂಡಲೇ ಬದಲಿಸಿ ಅಥವಾ ದುರಸ್ತಿಗೊಳಿಸುವುದು, ಮಳೆಗಾಲದಲ್ಲಿ ಸಿಡಿಲು ಬಡಿದು ಅಥವಾ ಇನ್ನಿತರ ಪ್ರಾಕೃತಿಕ ವಿಕೋಪದಿಂದ ಜಾನುವಾರುಗಳ ಅಸಹಜ ಸಾವು ಸಂಭವಿಸಿದರೆ ಮರಣೋತ್ತರ ವರದಿ ವಿಳಂಬ ಮಾಡದೇ ಕೂಡಲೇ ಒದಗಿಸುವಂತೆ ತಿಳಿಸಲಾಯಿತು. ಗೃಹರಕ್ಷಕ ದಳದವರು ದಿನದ 247 ಗಂಟೆ ಸೇವೆ ನೀಡಲು ಸಿದ್ಧರಿರುವಂತೆ ಸೂಚಿಸಲಾಯಿತು.

ಕಲ್ಲು ಕ್ವಾರಿಗೆ ಬೇಲಿ ಹಾಕಲು ಸೂಚನೆ

ಇತ್ತೀಚೆಗೆ ತಾಲೂಕಿನಲ್ಲಿ ಕಲ್ಲುಕೋರೆಗಳು ಮಳೆಗಾಲದಲ್ಲಿ ನೀರು ನಿಂತು ಕೆರೆಯಾಗಿ ಮಾರ್ಪಾಡುತ್ತಿದ್ದು, ಕಲ್ಲು ಕ್ವಾರಿಗೆ ತಡೆ ಬೇಲಿಯ ಅಗತ್ಯವಿದೆ ಎನ್ನುವ ಕುರಿತಾದ ವಿಜಯವಾಣಿ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ತಹಸೀಲ್ದಾರ್ ಮಾತನಾಡಿ, ಗಣಿ ಪ್ರದೇಶಗಳಲ್ಲಿ ಕಲ್ಲುಗಳನ್ನು ತೆಗೆದ ಹೊಂಡದಲ್ಲಿ ಸಂಗ್ರಹವಾಗುವ ನೀರಿನಲ್ಲಿ ಜನರು ಈಜಲು ಹೋಗಿ ಜೀವ ಹಾನಿ ಉಂಟಾಗುವ ಸಂಭವವಿರುತ್ತದೆ. ಗ್ರಾಪಂ ವ್ಯಾಪ್ತಿಯಲ್ಲಿ ಕಲ್ಲು ಕ್ವಾರಿಗಳ ಸುತ್ತ ಕಬ್ಬಿಣದ ತಂತಿ ಬೇಲಿ ಹಾಕಿ, ಎಚ್ಚರಿಕೆ ನೀಡುವ ಸೂಚನ ಫಲಕ ಅಳವಡಿಸಲು ಸಂಬಂಧಪಟ್ಟ ಗಣಿ ಮಾಲೀಕರಿಗೆ ತಿಳಿಸಲು ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ಪುರಸಭಾ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೂ ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net