

ಬೈಂದೂರು: ಗೋಳಿಹೊಳೆ, ಹೇರೂರು, ಕೊಲ್ಲೂರಿನಲ್ಲಿ ಗೋಮಾಳದ ಜಾಗ ಗುರುತಾಗಿದ್ದು, ಆದಷ್ಟು ಬೇಗ ನರೇಗಾ ಯೋಜನೆಯಡಿಯಲ್ಲಿ ಕಾಮಗಾರಿ ಆರಂಭಿಸುವಂತೆ ಹಾಗೂ ಉಳಿದಿರುವ ಗೋಮಾಳಗಳ ಸರ್ವೇ ಕಾರ್ಯ ಆದಷ್ಟು ಬೇಗ ಮುಗಿಸಿ, ಕಾಮಗಾರಿ ಆರಂಭಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕ ಗುರುರಾಜ್ ಗಂಟಿಹೊಳಿ ಸೂಚನೆ ನೀಡಿದರು.
ಮಂಗಳವಾರ ಬೈಂದೂರು ತಾಪಂ ಸಭಾಂಗಣದಲ್ಲಿ ಬೈಂದೂರು ತಾಲೂಕು ವ್ಯಾಪ್ತಿಯ ಎಲ್ಲ ಗ್ರಾಪಂ ಅಧ್ಯಕ್ಷರು, ಪಿಡಿಒಗಳೊಂದಿಗೆ ಹಾಗೂ ಕಂದಾಯ, ಸರ್ವೇ, ಅರಣ್ಯ, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳೊಂದಿಗಿನ ಜಂಟಿ ಸಭೆಯಲ್ಲಿ ಅವರು ಮಾತನಾಡಿದರು. ಯಾವೆಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಸ್ಮಶಾನ ಇಲ್ಲ ಮತ್ತು ಸ್ಮಶಾನ ಜಾಗ ಗ್ರಾಪಂ ಹೆಸರಲ್ಲಿ ಇಲ್ಲ ಎಂಬುದರ ಮಾಹಿತಿ ಪಡೆದುಕೊಂಡು, ಸ್ಮಶಾನ ಭೂಮಿಗಳನ್ನು ಇದುವರೆಗೂ ಗ್ರಾಪಂ ಹೆಸರಿಗೆ ಪಹಣಿ ಮಾಡಿಸದೇ ಇದ್ದಲ್ಲಿ ಅಂಥ ಗ್ರಾಪಂ ಮಾಹಿತಿ ಪಡೆದು ತಹಸೀಲ್ದಾರ್ ಅವರ ಗಮನಕ್ಕೆ ತಂದು ಪಹಣಿ ಮಾಡಿಸಬೇಕು ಮತ್ತು ಈ ಎಲ್ಲ ಮಾಹಿತಿ ಕ್ರೋಢಿಕರಿಸಿ ಶಾಸಕರ ಕಚೇರಿಗೆ ಒದಗಿಸಬೇಕು.
ನರೇಗಾ ಯೋಜನೆಯಡಿ ಸ್ಮಶಾನ ಅಭಿವೃದ್ಧಿ ಪಡಿಸಲು ಅವಕಾಶಗಳಿವೆಯೇ ಎಂಬುದನ್ನು ಅಧಿಕಾರಿಗಳು ತಿಳಿದುಕೊಂಡು ಕಾರ್ಯಪ್ರವೃತ್ತರಾಗಬೇಕು ಮತ್ತು ಈಗಾಗಲೇ ಇರುವ ಸ್ಮಶಾನಗಳಲ್ಲಿ ಮೂಲಸೌಕರ್ಯ ಸಮರ್ಪಕವಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿ, ವ್ಯವಸ್ಥೆ ಇಲ್ಲದ ಕಡೆ ಸರಿಯಾದ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇತ್ತೀಚಿಗೆ ಕಂದಾಯ ಇಲಾಖೆಯಿಂದ ಲ್ಯಾಂಡ್ ಬೀಟ್ ತಂತ್ರಾಂಶದ ಮೂಲಕ ಗ್ರಾಮ ವ್ಯಾಪ್ತಿಯಲ್ಲಿರುವ ಎಲ್ಲ ಸರ್ಕಾರಿ ಕೆರೆಗಳ ಸಮೀಕ್ಷೆ ಪೂರ್ಣಗೊಂಡಿದ್ದು, ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲ ಸರ್ಕಾರಿ ಕೆರೆಗಳ ಮಾಹಿತಿ ಲಭ್ಯ ವಿಲ್ಲದೇ ಇದ್ದಲ್ಲಿ ಪಂಚಾಯಿತಿ ಆಡಳಿತ ವಿಎಒಗಳಿಂದ ಪಡೆದು ಕೊಳ್ಳುವಂತೆ ಸೂಚಿಸಿದರು. ಸಾಕಷ್ಟು ಸರ್ಕಾರಿ ಕೆರೆಗಳು ಸೂಕ್ತ ನಿರ್ವಹಣೆ ಇಲ್ಲದೇ ಸೊರಗಿವೆ. ಹೂಳು ತುಂಬಿ ಕೊಂಡಿವೆ ಹಾಗೂ ಒತ್ತುವರಿ ಆಗಿವೆ. ಈ ಹಿಂದೆ ಕೃಷಿ ಉದ್ದೇಶಕ್ಕೆ ಕೆರೆ ಹಾಗೂ ಮದಗಗಳ ನೀರು ಉಪಯೋಗಿಸಲಾಗುತ್ತಿತ್ತು. ಆದರೆ ಪ್ರಸ್ತುತ ಕೆರೆ ಹಾಗೂ ಕೆರೆಯಂಚಿನ ಪ್ರದೇಶ ಕಲುಷಿತಗೊಂಡಿವೆ. ಹೀಗಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲ ಸರ್ಕಾರಿ ಕೆರೆಗಳ ಅಭಿವೃದ್ಧಿಗೆ ಕ್ರಮವಹಿಸಬೇಕು ಎಂದರು. ತಹಸೀಲ್ದಾರ್ ಪ್ರದೀಪ್ ಆರ್., ತಾಪಂ ಇಒ ಎನ್.ಭಾರತಿ, ತಾಲೂಕು ಪಶುವೈದ್ಯಾಧಿಕಾರಿ ನಾಗರಾಜ ಮರವಂತೆ, ಕೊಲ್ಲೂರು ದೇವಳ ಇಒ ಪ್ರಶಾಂತ ಶೆಟ್ಟಿ ಹಾಗೂ ಇಲಾಖಾಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಇದ್ದರು.
ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಕನಿಷ್ಠ 2 ಕೆರೆ ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಕ್ರಮವಾಗಬೇಕು. ಈ ಉದ್ದೇಶಕ್ಕಾಗಿ ಸ್ಥಳೀಯ ನರೇಗಾ ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳಬೇಕು. ನರೇಗಾ ಕೂಲಿ ಕಾರ್ಮಿಕರ ಲಭ್ಯತೆ ಇಲ್ಲದಿದ್ದರೆ ಸ್ಥಳೀಯ ಯುವಕ ಯುವತಿ ಸಂಘಟನೆಗಳ ಸಹಕಾರ ಅಥವಾ ಸಂಜೀವಿನಿ ಸಂಘದ ಸದ್ಯಸರ ಸಹಕಾರ ಕೋರುವಂತೆ ಶಾಸಕ ಗಂಟಿಹೊಳಿ ಸೂಚನೆ ನೀಡಿದರು.