

ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮಂಗಳವಾರ ಹುಚ್ಚಾಟ ನಡೆಸಿದ ಯುವಕ ಬುಧವಾರ ಮತ್ತೆ ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ನಮಿಸಿ ತೆರಳಿದ್ದಾನೆ. ಬುಧವಾರ ಕದ್ರಿ ದೇವಸ್ಥಾನಕ್ಕೆ ಆಗಮಿಸಿದ ಉಳ್ಳಾಲ ಧರ್ಮನಗರ ನಿವಾಸಿ ಸುಧಾಕರ ಆಚಾರ್ಯ ಪ್ರಾಂಗಣಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದಾನೆ. ಹಿಂದಿನ ದಿನದ ಆತನ ಹುಚ್ಚಾಟ ನೋಡಿದ್ದ ದೇವಸ್ಥಾನದ ಮಂದಿ ಆತನ ಚಲನವಲನ ಬಗ್ಗೆ ನಿಗಾ ಇರಿಸಿದ್ದರು. ದೇವಸ್ಥಾನದಲ್ಲಿ ತೀರ್ಥ ಪ್ರಸಾದ ಸ್ವೀಕರಿಸಿ, ತಂಟೆ ತಕರಾರು ಮಾಡದೆ ವಾಪಸಾಗಿದ್ದಾನೆ.
ಮಂಗಳವಾರ ತನ್ನ ಸಹೋದರನ ಬೈಕ್‌ನಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದ ಸುಧಾಕರ ಬೈಕ್ ಅನ್ನು ನೇರವಾಗಿ ದೇವಸ್ಥಾನದ ಅಂಗಣಕ್ಕೆ ತಂದು ಅಲ್ಲಿಂದ ದೇವಸ್ಥಾನದ ಒಳಗೆ ಪ್ರವೇಶಿಸಿ ರಂಪಾಟ ನಡೆಸಿದ್ದನು. ಅಣ್ಣಪ್ಪ ಸ್ವಾಮಿಯ ಗುಡಿಯನ್ನು ಅಪವಿತ್ರಗೊಳಿಸಿದ್ದಾಗಿ ದೇವಸ್ಥಾನದವರು ಆರೋಪಿಸಿದ್ದರು. ಬಳಿಕ ಆತನನ್ನು ಕಟ್ಟಿಹಾಕಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಪೊಲೀಸರು ಆತನ ಹೆತ್ತವರನ್ನು ಕರೆಸಿ ವಿಚಾರಣೆ ನಡೆಸಿದ್ದರು. ಆತನಿಗೆ ಮಾನಸಿಕ ಕಾಯಿಲೆ ಇದ್ದು, ಔಷಧ ಸೇವಿಸುತ್ತಿರುವುದನ್ನು ಖಚಿತಪಡಿಸಿದ್ದರು. ಬಳಿಕ ಠಾಣಾ ಜಾಮೀನಿನಲ್ಲಿ ಆತನನ್ನು ಬಿಡುಗಡೆಗೊಳಿಸಲಾಗಿತ್ತು.