ಬ್ಲಾಕ್ ಅಧ್ಯಕ್ಷರ ನೇಮಕಾತಿ ತಡೆ ತೆರವಿಗೆ ಒತ್ತಾಯ : ಸುಳ್ಯ ಕಾಂಗ್ರೆಸ್ ಸಭೆಯಲ್ಲಿ ಬೇಡಿಕೆ

Published on

ಸುಳ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು ಭೇಟಿ ಹಾಗೂ ವಿವಿಧ ಫಲಾನುಭವಿಗಳ ಸಮಾವೇಶದ ಪೂರ್ವಭಾವಿಯಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ನಡೆಯಿತು.

ಸುಳ್ಯ ಬ್ಲಾಕ್ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರ ನೇಮಕ ಮಾಡಲಾಗಿದ್ದರೂ ಬಳಿಕ ತಾತ್ಕಾಲಿಕ ತಡೆ ನೀಡಲಾಗಿದೆ. ಈ ತಡೆಯನ್ನು ಕೂಡಲೇ ತೆರವು ಮಾಡಬೇಕು. ಅಧ್ಯಕ್ಷರ ನೇಮಕ ಮಾಡದಿದ್ದರೆ ಪಕ್ಷದಲ್ಲಿ ತಟಸ್ಥರಾಗುವುದಾಗಿ ಕೆಲವು ಮುಖಂಡರು ಹಾಗೂ ಕಾರ್ಯಕರ್ತರು ಹೇಳಿದರು.

ಸುಳ್ಯ ತಾಲೂಕಿನ ವಿವಿಧ ಕಾಮಗಾರಿಗಳು, ಮಂಡಳಿಗಳ ನೇಮಕ ಹಾಗೂ ಪಕ್ಷದ ಆಂತರಿಕ ಹುದ್ದೆಗಳಿಗೆ ಆಯ್ಕೆಯಾದವರನ್ನು ಮತ್ತೆ ತಡೆ ತಂದು ನಿಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕಾರ್ಯಕರ್ತರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ.ಮುಸ್ತಾ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಪ್ರಮುಖರಾದ ಸರಸ್ವತಿ ಕಾಮತ್, ಎಸ್.ಸಂಶುದ್ದೀನ್, ಇಕ್ಬಾಲ್ ಎಲಿಮಲೆ, ಮಹಮ್ಮದ್ ಕುಂಞಿ ಗೂನಡ್ಕ, ಬೆಟ್ಟ ರಾಜಾರಾಮ್ ಭಟ್, ಕೆ.ಪಿ.ಜಾನಿ, ಇಬ್ರಾಹಿಂ ಕಲ್ಲುಗುಂಡಿ, ಸುರೇಶ ಎಂ.ಎಚ್., ರಾಜು ಪಂಡಿತ್, ಶಾಫಿ ಕುತ್ತಮೊಟ್ಟೆ ನಂದರಾಜ ಸಂಕೇಶ್, ಅಬ್ದುಲ್ ಗಫೂರ್ ಕಲ್ಮಡ್ಕ, ಶಶಿಧರ ಎಂ.ಜೆ., ಶ್ರೀಹರಿ ಕುಕ್ಕುಡೇಲು ಮುತ್ತಪ್ಪ ಪೂಜಾರಿ ಮತ್ತಿತರರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ ವಂದಿಸಿದರು.

ಹೆಸರು ಬದಲಾವಣೆಗೆ ಅಸಮಾಧಾನ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೇಮಕ ಸಂದರ್ಭ ಪಟ್ಟಿಯಲ್ಲಿ ಮೊದಲು ಹೆಸರಿದ್ದ ಪ್ರಮುಖರನ್ನು ಬದಲಾವಣೆ ಮಾಡಿದ್ದಕ್ಕೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದು, ಚರ್ಚೆಗೆ ಗ್ರಾಸವಾಯಿತು. ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎನ್.ಜಯಪ್ರಕಾಶ್ ರೈ ಮೊದಲು ವೈರಲ್ ಆದ ಪಟ್ಟಿಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ನನ್ನ ಹೆಸರು ಇತ್ತು. ತದನಂತರ ಬದಲಾವಣೆ ಮಾಡಿ ಬೇರೆಯವರನ್ನು ಸೇರ್ಪಡೆ ಮಾಡಿರುವುದು ಬೇಸರ ತಂದಿದೆ. ನನ್ನ ಹೆಸರನ್ನು ಬದಲಾವಣೆ ಮಾಡಲು ಕಾರಣ ಏನು ಎಂದು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net