

ಪಡುಬಿದ್ರಿ: ಕಾಪು ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಬಹುತೇಕ ಎಲ್ಲ ರಸ್ತೆ, ಮನೆ ಮತ್ತು ಬೆಳೆ ಹಾನಿಯಾಗಿದ್ದು, ಸ್ಥಳೀಯಾಡಳಿತ ವ್ಯವಸ್ಥೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡು, ಸರ್ಕಾರದ ಪ್ರಕೃತಿ ವಿಕೋಪ ನಿಧಿಯಿಂದ ಸೂಕ್ತ ಪರಿಹಾರ ದೊರಕಿಸಿಕೊಡುವ ಕಾರ್ಯ ಕೈಗೊಂಡಿದ್ದರೂ, ಕ್ಷೇತ್ರದ ಶಾಸಕರು ಇಷ್ಟರವರೆಗೆ ಯಾವುದೇ ಅಭಿವೃದ್ಧಿ ಕಾಮಗಾರಿ ಬಗ್ಗೆ ಆಸಕ್ತಿ ವಹಿಸದೆ ನಿರ್ಲಕ್ಷೃ ತೋರಿರುವುದು ವಿಷಾದನೀಯ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಟೀಕಿಸಿದರು.
ಕಾಪು ರಾಜೀವ್ ಭವನದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿರುವ ಶಾಸಕರು ಯಾವುದೇ ಅಭಿವೃದ್ಧಿ ಯೋಜನೆ ಅಥವಾ ಕಾಮಗಾರಿ ಬಗ್ಗೆ ಮಾತೆತ್ತಿದರೆ ಅನುದಾನದ ಕೊರತೆ ಸಬೂಬು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಹಾಸ್ಯಾಸ್ಪದ. ಬಿಜೆಪಿ ಸರ್ಕಾರ ಆಡಳಿತಾವಾಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ನಡೆದಿರುವ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಗರಣ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹಗರಣ, ನಂದಿಕೂರು ಸುಜ್ಲಾನ್ ಕೈಗಾರಿಕಾ ವಲಯದಲ್ಲಿ ನಡೆದಿರುವ ಅವ್ಯವಹಾರ ಎಲ್ಲವನ್ನು ತನಿಖೆಗೊಳಪಡಿಸಿ, ಅಕ್ರಮವೆಸಗಿದವರನ್ನು ಶಿಕ್ಷೆಗೊಳಪಡಿಸುವುದು ಶತಸಿದ್ಧ ಎಂದರು.
ಕಟಪಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಗೆ ನೂತನವಾಗಿ ನೇಮಕಗೊಂಡ ಮಹೇಶ್ ಪೂಜಾರಿ ಅವರಿಗೆ ನೇಮಕಾತಿ ಆದೇಶ ನೀಡಿ ಅಭಿನಂದಿಸಲಾಯಿತು. ಕಾಪು ದಿವಾಕರ್ ಶೆಟ್ಟಿ, ಶಿವಾಜಿ ಸುವರ್ಣ ಬೆಳ್ಳೆ, ವಿಕ್ರಂ ಕಾಪು, ಶರ್ಫುದ್ದೀನ್ ಶೇಖ್, ಗೀತಾ ವಾಗ್ಲೇ, ವಿನಯ್ ಬಲ್ಲಾಳ್, ಪ್ರಶಾಂತ್ ಜತ್ತನ್ನ, ರಾಜೇಶ್ ರಾವ್, ಹಸನಬ್ಬ ಶೇಖ್, ನವೀನ್ ಎನ್.ಶೆಟ್ಟಿ, ರಮೀಜ್ ಹುಸೇನ್, ಕೆ.ಎಚ್.ಉಸ್ಮಾನ್, ಅಶೋಕ್ ನಾಯರಿ ಉಪಸ್ಥಿತರಿದ್ದರು. ಬ್ಲಾಕ್ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್ ಸ್ವಾಗತಿಸಿ, ಸುನೀಲ್ ಡಿ.ಬಂಗೇರ ವಂದಿಸಿದರು.