ಹರಿಪ್ರಸಾದ್ ನಂದಳಿಕೆ ಕಾರ್ಕಳ
ಹೆದ್ದಾರಿ ಬದಿಬಾಗಿದ ಗಿಡಗಂಟಿಗಳಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಹಲವು ಬಾರಿ ಅಪಘಾತಗಳೂ ಸಂಭವಿಸಿದೆ. ಇದನ್ನು ಅರಿತ ಯುವಕರ ತಂಡವೊಂದು ರಸ್ತೆ ಬದಿಯ ಪೊದೆಗಳನ್ನು ತೆರವು ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ನಂದಳಿಕೆ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಕೆದಿಂಜೆ ತನಕ 2.ಕಿ.ಮಿ ವ್ಯಾಪ್ತಿಯ ಹೆದ್ದಾರಿ ತಿರುವಿನಿಂದ ಕೂಡಿದ್ದು, ಇಲ್ಲಿ ದಟ್ಟ ಪೊದೆ ಬೆಳೆದು ವಾಹನ ಸವಾರರಿಗೆ ತೊಂದರೆಯಾಗಿತ್ತು. ಹಲವು ಬಾರಿ ಅಪಘಾತಗಳೂ ಆಗಿದ್ದು, ಪೊದೆಯಿಂದಾಗಿ ಎದುರಿನ ವಾಹನಕ್ಕೆ ಸೈಡ್ ನೀಡುವುದೇ ದೊಡ್ಡ ಸಮಸ್ಯೆಯಾಗಿತ್ತು. ಕೆದಿಂಜೆಯ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಶ್ರಮದಾನ ಮಾಡಿ ಪೊದೆ ತೆಗೆದು ಸ್ವಚ್ಛಗೊಳಿಸುವ ಮೂಲಕ ವಾಹನ ಸವಾರರಿಗೆ ಅನುಕೂಲ ಮಾಡಿದ್ದಾರೆ.
ಚರಂಡಿ ಸ್ವಚ್ಛತೆ: ಬೆಳ್ಮಣ್ ಹಾಗೂ ಕೆದಿಂಜೆ ಭಾಗದಲ್ಲಿ ಮಳೆ ಸುರಿಯುತ್ತಲೇ ಇದ್ದು, ಮಳೆ ನೀರು ಹರಿದು ಹೋಗಲು ಇಲ್ಲಿ ಸೂಕ್ತ ಚರಂಡಿ ವ್ಯವಸ್ಥೆಗಳೇ ಇಲ್ಲ. ಮಳೆ ನೀರು ರಸ್ತೆಯಲ್ಲೇ ಹರಿಯುವುದರಿಂದ ರಸ್ತೆ ಮೇಲೆಯೇ ಕೆಸರು, ಕಲ್ಲು ಶೇಖರಣೆಯಾಗುತ್ತಿತ್ತು. ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬೀಳಲು ಇದು ಪ್ರಮುಖ ಕಾರಣವಾಗಿತ್ತು. ಇದೇ ಯುವಕರ ತಂಡ ಹೆದ್ದಾರಿ ಬದಿಯ ಚರಂಡಿ ಹೂಳು ತೆಗೆದು ಮಳೆ ನೀರು ಹರಿಯುವಂತೆ ಮಾಡಿದರು. ಜತೆಗೆ ಚರಂಡಿಗಳಿಲ್ಲದ ಕಡೆ ಜೆಸಿಬಿ ಬಳಸಿ ಚರಂಡಿ ನಿರ್ಮಿಸಿದ್ದಾರೆ.
ಗ್ರಾಮಸಭೆಯಲ್ಲಿ ಪ್ರಸ್ತಾಪ
ಮಾರ್ಗಗಳಲ್ಲಿ ಪೊದೆ ಬೆಳೆದು ಅಪಘಾತಗಳಿಗೆ ಕಾರಣವಾಗುವ ಕುರಿತು ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಿದ್ದು, ಎಚ್ಚೆತ್ತ ಕೆದಿಂಜೆಯ ಬಿಜೆಪಿ ಯುವಮೋರ್ಚಾ ಯುವಕರ ತಂಡ ಕಾರ್ಯಪ್ರವೃತ್ತವಾಗಿದೆ. ನಂದಳಿಕೆ ಗ್ರಾ.ಪಂ. ಮಾಜಿ ಅಧ್ಯಕ್ಷ ನಿತ್ಯಾನಂದ ಅಮೀನ್, ಉದ್ಯಮಿ ಸೂರ್ಯಕಾಂತ್ ಶೆಟ್ಟಿ, ಗ್ರಾ.ಪಂ. ಸದಸ್ಯ ಸುಧಾಕರ್, ಗ್ರಾಮಸ್ಥರಾದ ಅರ್ಜುನ್, ಮಗೇಶ್, ರಾಮು ಹಾಗೂ ಯುವ ಮೋರ್ಚಾದ ಕಾರ್ಯಕರ್ತರು ಶ್ರಮದಾನದಲ್ಲಿ ಭಾಗವಹಿಸಿದ್ದಾರೆ.
ಈ ಭಾಗದಲ್ಲಿ ಮಳೆಯಿಂದಾಗಿ ರಸ್ತೆಯಲ್ಲೆ ನೀರು ಹರಿಯುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿತ್ತು. ನಮ್ಮ ಯುವಕರ ತಂಡ ಶ್ರಮದಾನದ ಮೂಲಕ ಚರಂಡಿ ನಿರ್ವಹಣೆ ಜತೆಗೆ ಗಿಡಗಂಟಿಗಳನ್ನು ತೆರವುಗೊಳಿಸಿದ್ದೇವೆ.
-ಧೀರಜ್ ಎಸ್, ಯುವ ಮೋರ್ಚಾ ಅಧ್ಯಕ್ಷ, ಕೆದಿಂಜೆ
ಗ್ರಾಮ ಪಂಚಾಯಿತಿ ಹಾಗೂ ಇಲಾಖೆ ಮಾಡಬೇಕಾದ ಕೆಲಸವನ್ನು ಯುವಕರ ತಂಡ ಮಾಡಿದೆ. ನಿಜಕ್ಕೂ ಶ್ಲಾಘನೀಯ. ಸಾಕಷ್ಟು ಅಪಘಾತಗಳು ಈ ಭಾಗದಲ್ಲಿ ಪದೇ ಪದೇ ನಡೆಯುತ್ತಿತ್ತು. ಇದೀಗ ಎಲ್ಲದಕ್ಕೂ ಮುಕ್ತಿ ಸಿಕ್ಕಂತಾಗಿದೆ.
-ಸುರೇಶ್ ಕುಮಾರ್, ಗ್ರಾಮಸ್ಥ