ವಾರಾಹಿ ಯೋಜನೆಗೆ ಮುಕ್ತಿ

varahi
ಬೈಂದೂರು ಆಡಳಿತದ ಸೌಧದಲ್ಲಿ ಗುರುವಾರ ಶಾಸಕ ಗುರುರಾಜ ಗಂಟಿಹೊಳೆ ನೇತೃತ್ವದಲ್ಲಿ ವಾರಾಹಿ ಬಲದಂಡೆ, ಕಸ್ತೂರಿ ರಂಗನ್ ವರದಿ ಹಾಗೂ ಸಿಆರ್‌ಝಡ್ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳ ಸಭೆ ನಡೆಯಿತು
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

30 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವಾರಾಹಿ ಬಲದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸುವುದು ಹಾಗೂ ಇಲ್ಲಿನ ನೀರು ಬೈಂದೂರು ಕ್ಷೇತ್ರದ ಶಿರೂರಿನಿಂದ ಯಡಮೊಗೆಯ ತನಕವೂ ಹರಿಸಲು ಯೋಜನೆ ಕೈಗೊಳ್ಳಬೇಕಾದ ಅಗತ್ಯತೆ ಇದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಬೈಂದೂರಿನ ಆಡಳಿತದ ಸೌಧದಲ್ಲಿ ವಾರಾಹಿ ಬಲದಂಡೆ, ಕಸ್ತೂರಿ ರಂಗನ್ ವರದಿ ಹಾಗೂ ಸಿಆರ್‌ಝಡ್ ಸಮಸ್ಯೆಗಳ ಪರಿಹಾರಕ್ಕೆ ಹೋರಾಟದ ಪೂರ್ವಭಾವಿಯಾಗಿ ಗುರುವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಕೆಪಿಸಿ ಪ್ರಾಜೆಕ್ಟ್ ಹೆಡ್ ಮಹೇಶ್ ಮಾತನಾಡಿ, ಕೆಪಿಸಿ ಯೋಜನೆ ಆರಂಭವಾಗದಲೇ ಅರಣ್ಯ ಇಲಾಖೆ ಬದಲಿ ಭೂಮಿ ನೀಡಿ ಯೋಜನೆ ಕಾರ್ಯಗತಗೊಳಿಸಲಾಗಿತ್ತು. ಆದಾಗ್ಯೂ ಅರಣ್ಯ ಇಲಾಖೆ ಕೆಪಿಸಿ ಯೋಜನೆ ಇರುವ ಪ್ರದೇಶವನ್ನು ವಿರಹಿತಗೊಳಿಸದೆ ಯೋಜನೆ ಕಾರ್ಯರೂಪಗೊಳಸಲು ಅಡ್ಡಿಪಡಿಸುತ್ತಿದೆ ಎಂದರು.

ಕಸ್ತೂರಿರಂಗನ್ ಯೋಜನೆ ಬೈಂದೂರು ಕ್ಷೇತ್ರದ ಮಲೆನಾಡು ಪ್ರದೇಶದ ಬಹುತೇಕ ಗ್ರಾಮಗಳನ್ನು ಒಳಗೊಂಡಿದ್ದು, ಯೋಜನೆ ಜಾರಿ ಬಗ್ಗೆ ಮಾಹಿತಿ ಒದಗಿಸುವಂತೆ ಸಾರ್ವಜನಿಕರು ಆಗ್ರಹಿಸಿದರು.

ವಾರಾಹಿ ಸಹಾಯಕ ಇಂಜಿನಿಯರ್ ಕಿರಣ್, ವಾರಾಹಿ ಯೋಜನೆ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ರಾಮಲಿಂಗ ಸಿಆರ್‌ಝಡ್ ಬಗ್ಗೆ ಮಾಹಿತಿ ನೀಡಿದರು. ತಹಸೀಲ್ದಾರ್ ಪ್ರದೀಪ್ ಎಂ, ಕೊಲ್ಲೂರು ವನ್ಯಜೀವಿ ವಿಭಾಗದ ಆರ್‌ಎಫ್‌ಒ ಕಿರಣ್ ಬಾಬು, ಬೈಂದೂರು ಆರ್‌ಎಫ್‌ಒ ಸಂದೇಶ್, ಕುಂದಾಪುರ ಆರ್‌ಎಫ್‌ಒ ರಾಘವೇಂದ್ರ ನಾಯ್ಕ, ಸಿದ್ದಾಪುರ ಆರ್‌ಎಫ್‌ಒ ಜಿವಿ ನಾಯಕ್, ಶಂಕರನಾರಾಯಣ ಆರ್‌ಎಫ್‌ಒ ಜ್ಯೋತಿ ಉಪಸ್ಥಿತರಿದ್ದರು.

10 ಕಿ.ಮೀ ಅತಿ ಸೂಕ್ಷ್ಮ ವಲಯ

ಅರಣ್ಯ ಇಲಾಖೆಯಿಂದ ಅಡ್ಡಿ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ವನ್ಯಜೀವಿ ವಿಭಾಗದ ಎಸಿಎಫ್ ದಿನೇಶ್, ಸರ್ಕಾರಿ ಯೋಜನೆಗಳಿಗೆ ಅರಣ್ಯ ಇಲಾಖೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿಲ್ಲ. ಸರ್ಕಾರದ ಕಾನೂನು ರೀತಿಯಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದೆ. ವಾರಾಹಿ ಹಾಗೂ ಕೆಪಿಸಿ ಯೋಜನೆಗಳ ಕಾರ್ಯರೂಪಕ್ಕೆ ಅಡ್ಡಿಯಾಗಿದ್ದರೇ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಗುವುದು. ಅಭಯಾರಣ್ಯದಿಂದ ಗರಿಷ್ಠ 10 ಕಿ.ಮೀ ತನಕ ಅತಿಸೂಕ್ಷ್ಮ ವಲಯವೆಂದು ಅರಣ್ಯ ಇಲಾಖೆ ಗುರುತಿಸಿದ್ದರೂ, ಜನವಸತಿ ಪ್ರದೇಶವನ್ನು ಗಮನಿಸಿಕೊಂಡು ಕೆಲವೆಡೆ ವ್ಯಾಪ್ತಿಯ ಮಿತಿ ಕಡಿಮೆಗೊಳಿಸಲಾಗಿದೆ. ಕಸ್ತೂರಿರಂಗನ್ ಯೋಜನೆಯಲ್ಲಿ ಅತಿಸೂಕ್ಷ್ಮ ಪ್ರದೇಶವೆಂದು ಇಡಿ ಗ್ರಾಮವನ್ನೇ ಗುರುತಿಸಿದ್ದು, ಈ ಬಗ್ಗೆ ಪರಿಸರ ಇಲಾಖೆ ಅಧಿಕಾರಿಗಳೇ ಸ್ಪಷ್ಟೀಕರಣ ನೀಡಬೇಕು ಎಂದರು.

ವಾರಾಹಿ ಯೋಜನೆಯಿಂದ ಹಲವು ಗ್ರಾಮಗಳು ಪೂರ್ಣ ವಂಚಿತ, ಭಾಗಶಃ ವಂಚಿತ ಹಾಗೂ ಸಂತ್ರಸ್ಥ ಗ್ರಾಮಗಳಾಗಿದ್ದು, ಎಲ್ಲ ಭಾಗಕ್ಕೂ ನೀರು ದೊರೆಕಿಸಿಕೊಡುವ ಅಗತ್ಯವಿದೆ. ಯೋಜನೆ ನನೆಗುದಿಗೆ ಬೀಳಲು ಅರಣ್ಯ ಇಲಾಖೆಯ ತಾಂತ್ರಿಕ ತೊಂದರೆಗಳೇ ಕಾರಣ ಎನ್ನಲಾಗುತ್ತಿದೆ. ಆದರೆ ಅದಕ್ಕೆ ಸ್ಪಷ್ಟ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. 30 ವರ್ಷಗಳಿಂದ ಕಾರಣ ಹೇಳಿಕೊಂಡು ನನೆಗುದಿಗೆ ಬಿದ್ದಿರುವ ಯೋಜನೆ ಕಾರ್ಯರೂಪಕ್ಕೆ ತರಲು ಹೋರಾಟವೇ ಸೂಕ್ತ ಎಂಬ ಭಾವನೆ ಜನರಲ್ಲಿದೆ-ಗುರುರಾಜ ಗಂಟಿಹೊಳೆ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net