

ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಮುಂಭಾಗ ನೂತನ ವಿಜಯಗೋಪುರ ನಿರ್ಮಾಣಗೊಳ್ಳಲಿದ್ದು ಅದರ ನಿರ್ಮಾಣ ಕಾರ್ಯದಲ್ಲಿ ಭಕ್ತರು ಪಾಲ್ಗೊಳ್ಳಲು ಅನುಕೂಲವಾಗುವಂತೆ ಸೇವಾರೂಪದಲ್ಲಿ ಇಟ್ಟಿಗೆ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಅದರ ಜವಾಬ್ದಾರಿಯನ್ನು ಉಜಿರೆಯ ಮಹಿಳೆಯರಿಗೆ ನೀಡಲಾಗಿದ್ದು ಅದಕ್ಕಾಗಿ ಮಾತೃಶಕ್ತಿ ಶಿಲಾ ಸಂಚಯನ ಸಮಿತಿ ರಚಿಸಲಾಗಿದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ಕೃಷ್ಣ ಪಡುವೆಟ್ನಾಯ ಹೇಳಿದರು.
ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಗ್ರಾಮದ ಮಹಿಳೆಯರನ್ನು ಒಗ್ಗೂಡಿಸಿ ನಿಧಿ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಗ್ರಾಮದ ಮಹಿಳೆಯರ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಶ್ರೀ ಜನಾರ್ದನ ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಬ್ರಹ್ಮಕಲಶೋತ್ಸವ ಹಾಗೂ ರಾಜಗೋಪುರ ನಿರ್ಮಾಣ ಕಾರ್ಯದಲ್ಲಿ ಮಹಿಳೆಯರ ಮಾತೃಶಕ್ತಿಯ ಸೇವೆ ನಿರಂತರವಾಗಿರಲಿ ಎಂದರು.
ಮಾತೃಶಕ್ತಿ ಶಿಲಾ ಸಂಚಯನ ಸಮಿತಿ ಸಂಚಾಲಕ ಮಂಜುನಾಥ ಶೆಟ್ಟಿ ನಿಡಿಗಲ್ ಮಾತನಾಡಿ, ಉಜಿರೆ ಗ್ರಾಮದ 13 ವಾರ್ಡ್ಗಳಲ್ಲಿ ಆಯಾ ವಾರ್ಡ್ನ ಸದಸ್ಯರಲ್ಲಿ ಸಂಚಾಲಕರು ಹಾಗೂ ಸಹಸಂಚಾಲಕರನ್ನು ನೇಮಿಸಿ ಅವರಿಗೆ 250 ರೂ.ನ 10 ರಶೀದಿಯ ಕೂಪನ್ ಪುಸ್ತಕ ನೀಡಲಾಗುತ್ತದೆ. ಅದನ್ನು ಅವರು ತಮಗೆ ಪರಿಚಯದವರಿಗೆ ನೀಡಿ ಧನ ಸಂಗ್ರಹ ಕಾರ್ಯದಲ್ಲಿ ನೆರವಾಗಬೇಕು ಎಂದರು.
ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾಕಿರಣ್ ಕಾರಂತ್ ನೇತೃತ್ವದಲ್ಲಿ ಗ್ರಾಮದ 13 ವಾರ್ಡ್ಗಳಲ್ಲಿ ಸಂಚಾಲಕರನ್ನು ನಿಯುಕ್ತಿಗೊಳಿಸಿ ಅವರಿಗೆ ಮಾಹಿತಿ ನೀಡಲಾಯಿತು. ಮಹಿಳಾ ಸಮಿತಿ ಅಧ್ಯಕ್ಷೆ ಜಯಶ್ರೀ ಪ್ರಕಾಶ್ ಅಪ್ರಮೇಯ ಮತ್ತು ಮಾತೃಶಕ್ತಿ ಶಿಲಾ ಸಂಚಯನ ಸಮಿತಿ ಸಂಚಾಲಕಿ ವನಿತಾ ವಿ.ಶೆಟ್ಟಿ, ಸಹಕೋಶಾಧಿಕಾರಿ ಸಂಜೀವ ಶೆಟ್ಟಿ ಕುಂಟಿನಿ ಉಪಸ್ಥಿತರಿದ್ದರು. ಜತೆಕಾರ್ಯದರ್ಶಿ ರವೀಂದ್ರ ಶೆಟ್ಟಿ ಬಳಂಜ ಕಾರ್ಯಕ್ರಮ ನಿರೂಪಿಸಿದರು. ವನಿತಾ ವಿ.ಶೆಟ್ಟಿ ವಂದಿಸಿದರು.