ಮಿಸ್​ ಇಂಡಿಯಾ ಫೈನಲಿಸ್ಟ್​ ಈಗ ಯುಪಿಎಸ್ಸಿ ಸಾಧಕಿ: ಮಾಡೆಲಿಂಗ್​ ಚೆಲುವೆಯ ಯಶಸ್ಸಿನ ಕತೆ ಇದು!

Aishwarya Sheoran
Published on

ನವದೆಹಲಿ: ಮಂಗಳವಾರ ಮಧ್ಯಾಹ್ನ ಪ್ರಕಟವಾದ 2019ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯಲ್ಲಿ ಪ್ರಚಂಡ ಯಶಸ್ಸು ಸಾಧಿಸಿದ ಸಾಧಕರ ಯಶೋಗಾಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಓರ್ವ ಸಾಧಕಿಯ ಸಾಧನೆ ವಿಶೇಷ ಕಾರಣದಿಂದ ಇದೀಗ ನೆಟ್ಟಿಗರ ಮನ ಸೆಳೆದಿದೆ.

ಯುಪಿಎಸ್​ಸಿ ಸಾಧಕಿಯ ಹೆಸರು ಐಶ್ವರ್ಯಾ ಶಿಯೊರನ್​. ನಿನ್ನೆ ಪ್ರಕಟವಾದ ಫಲಿತಾಂಶದಲ್ಲಿ 93ನೇ ರ್ಯಾಂಕ್​ ಪಡೆದು ಮಿಂಚಿದ್ದಾರೆ. ವಿಶೇಷವೆಂದರೆ ಐಶ್ವರ್ಯಾ ಓರ್ವ ಮಾಡೆಲ್​. 2016ರ ಮಿಸ್​ ಇಂಡಿಯಾ ಸ್ಪರ್ಧೆಯ ಫೈನಲಿಸ್ಟ್​ ಆಗಿದ್ದರು.

ಇದೀಗ ಐಶ್ವರ್ಯ ಯುಪಿಎಸ್​ಸಿಯಲ್ಲಿ ಸಾಧನೆ ಮಾಡಿರುವುದನ್ನು ಸ್ವತಃ ಮಿಸ್​ ಇಂಡಿಯಾ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದೆ. 2015ರ ದೆಹಲಿ ಫ್ರಶ್​ಫೇಸ್ ವಿನ್ನರ್​,​ 2016ರ ದೆಹಲಿ ಕ್ಯಾಂಪಸ್​ ಪ್ರಿನ್ಸೆಸ್​​ ಹಾಗೂ 2016ರ ಫೆಮಿನಾ ಮಿಸ್​ ಇಂಡಿಯಾ ಫೈನಲಿಸ್ಟ್​ ಐಶ್ವರ್ಯಾ ಶಿಯೊರನ್​ 2019ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯಲ್ಲಿ 93ನೇ ರ್ಯಾಂಕ್​ ಪಡೆದಿದ್ದಾರೆ. ಈ ಸಾಧನೆ ಮಾಡಿದ ಅವರಿಗೆ ಬಹುದೊಡ್ಡ ಅಭಿನಂದನೆಗಳು ಎಂದು ಮಿಸ್​ ಇಂಡಿಯಾ ಟ್ವೀಟ್​ ಮಾಡಿದೆ.

ವಾಸ್ತವವಾಗಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವುದು ಐಶ್ವರ್ಯಾರ ಬಹುದೊಡ್ಡ ಕನಸು ಕೂಡ ಆಗಿತ್ತು. ಇದೀಗ ತಮ್ಮ ಕನಸನ್ನು ಐಶ್ವರ್ಯಾ ನನಸು ಮಾಡಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ.

ಐಶ್ವರ್ಯಾರ ಯಶೋಗಾಥೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸುತ್ತಿದ್ದಂತೆ ಅನೇಕ ನೆಟ್ಟಿಗರು ಐಶ್ವರ್ಯಾರಿಗೆ ಶುಭಾಶಯಗಳ ಸುರಿಮಳೆಗೈದಿದ್ದಾರೆ. ಐಶ್ವರ್ಯಾ ಅವರು ಸೌಂದರ್ಯ ಹಾಗೂ ಬುದ್ಧಿವಂತಿಕೆಗೆ ನಿಜವಾದ ಉದಾಹರಣೆ ಎಂದು ಕೊಂಡಾಡಿದ್ದಾರೆ.

ಅಂದಹಾಗೆ ಐಶ್ವರ್ಯಾ ಅವರ ತಂದೆ ಕರ್ನಲ್​ ಅಜಯ್​ ಕುಮಾರ್​ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರೀಮ್​ ನಗರದ ಎನ್​ಸಿಸಿ ತೆಲಂಗಾಣ ಬೆಟಾಲಿಯನ್​ನ ಕಮಾಂಡಿಂಗ್​ ಅಧಿಕಾರಿ ದೇಶ ಸೇವೆಯಲ್ಲಿ ನಿರತರಾಗಿದ್ದಾರೆ. ಇದೀಗ ಮಗಳು ಸಹ ನಾಗರಿಕ ಸೇವಾ ಮೂಲಕ ಜನರ ಸೇವೆ ಮಾಡಲು ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net