ದೇಶಾದ್ಯಂತ 50 ವೈದ್ಯಕೀಯ ಸಿಬ್ಬಂದಿಗೆ ಕರೊನಾ ಸೋಂಕು: 2 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

Corona
Published on

ನವದೆಹಲಿ: ದೇಶಾದ್ಯಂತ ಇರುವ ವೈದ್ಯಕೀಯ ಸಿಬ್ಬಂದಿಯಲ್ಲಿ ಸುಮಾರು 50 ಮಂದಿಗೆ ಕರೊನಾ ವೈರಸ್ ಪಾಸಿಟಿವ್ ಫಲಿತಾಂಶ ಕಂಡುಬಂದಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.​​

ವೈದ್ಯರು, ನರ್ಸ್​ಗಳು ಮತ್ತು ಅರೆವೈದ್ಯರು ಸೇರಿದಂತೆ 50 ಮಂದಿಗೆ ಕರೊನಾ ಸೋಂಕು ತಗುಲಿದೆ. ದಿನನಿತ್ಯ ಕರೊನಾ ವಿರುದ್ಧ ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯರಿಗೆ ಸೋಂಕು ತಗುಲಿರುವುದು ವಿಷಾದಕರ ಸಂಗತಿಯಾಗಿದೆ.

ನಿನ್ನೆಯಷ್ಟೇ ಅಮೆರಿಕದ ನೆಬ್ರಸ್ಕಾ ವಿಶ್ವವಿದ್ಯಾಲಯದ ಸಂಶೋಧಕರು ವರದಿಯೊಂದನ್ನು ನೀಡಿದ್ದರು. ಸೋಂಕಿತ ರೋಗಿಯ ಕೊಠಡಿಯಲ್ಲಿ ಕರೊನಾ ವೈರಸ್​ ಗಾಳಿಯಲ್ಲೂ ಹರಡುವ ಸಾಧ್ಯತೆ ಇದೆ. ಅಲ್ಲದೆ, ವೈರಸ್​ ಗಾಳಿಯಲ್ಲಿ ಒಂದು ತಾಸು ಇರಲಿದೆ ಎಂದು ಎಚ್ಚರಿಕೆ ನೀಡಿದ್ದರು. ಇದು ವೈದ್ಯಕೀಯ ಸಿಬ್ಬಂದಿಗೆ ಹೆಚ್ಚು ಪರಿಣಾಮ ಬೀರಲಿದೆ. ಹೀಗಾಗಿ ಅವರು ಮುಂಜಾಗ್ರತೆ ವಹಿಸುವುದು ಸೂಕ್ತ ಎಂದು ಸಲಹೆ ನೀಡಿದ್ದರು.

ಜಾಗತಿಕವಾಗಿ ಕೆಲ ವೈದ್ಯರು ಕರೊನಾಗೆ ಬಲಿಯಾಗಿರುವ ಉದಾಹರಣೆಗಳು ಇವೆ. ಹೀಗಾಗಿ ವೈದ್ಯರು ಮತ್ತಷ್ಟು ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಕೂಡ ವೈದ್ಯರ ಸುರಕ್ಷತೆ ಕಡೆ ಗಮನ ಹರಿಸಬೇಕಾಗಿದೆ.

ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ 2 ಸಾವಿರ ದಾಟಿದ್ದು, ಈವರೆಗೆ 50 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net