VIDEO| ಟಿಕೆಟ್​ ಕೊಳ್ಳುತ್ತಿದ್ದವನ ಮುಖಕ್ಕೆ ಉಗಿದಿದ್ದ ಕರೊನಾ ಸೋಂಕಿತ ಕೆಲವೇ ಸಮಯದಲ್ಲಿ ರೈಲಿನಲ್ಲೇ ಶವವಾಗಿ ಪತ್ತೆ!

Anan
Published on

ಬ್ಯಾಂಕಾಕ್​: ರೈಲು ಟಿಕೆಟ್​ ಕೊಳ್ಳಲು ಕ್ಯೂನಲ್ಲಿ ನಿಂತಿದ್ದ ವೇಳೆ ವ್ಯಕ್ತಿಯೊಬ್ಬನ ಮುಖಕ್ಕೆ ಉಗಿದಿದ್ದ ಕರೊನಾ ಸೋಂಕಿತ ರೈಲಿನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಥಾಯ್ಲೆಂಡ್​ನಲ್ಲಿ ನಡೆದಿದೆ.

ಅನಾನ್​ ಸಾಹೋಹ್​(56) ಮೃತ ಪ್ರಯಾಣಿಕ. ಸೋಮವಾರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಿಪರೀತ ಕೆಮ್ಮು ಮತ್ತು ವಾಂತಿ ಮಾಡಿಕೊಂಡು ಕುಸಿದುಬಿದ್ದು ಸಾವಿಗೀಡಾಗಿದ್ದಾನೆ.

ಘಟನೆ ನಡೆದ ಬಳಿಕ ಆರೋಗ್ಯ ಅಧಿಕಾರಿಗಳು ಬ್ಯಾಂಕಾಕ್​ನ ರೈಲ್ವೆ ನಿಲ್ದಾಣದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಯಂತ್ರದಲ್ಲಿ ರೈಲ್ವೆ ಟಿಕೆಟ್​ ಖರೀದಿ ಮಾಡುತ್ತಿದ್ದ ವ್ಯಕ್ತಿಯ ಮುಖಕ್ಕೆ ಅನಾನ್​ ಉಗಿದಿರುವುದು ಪತ್ತೆಯಾಗಿದೆ. ಇದೀಗ ಅಧಿಕಾರಿಗಳು ಉಗಿಸಿಕೊಂಡ ವ್ಯಕ್ತಿಯ ಪತ್ತೆಗೆ ಮುಂದಾಗಿದ್ದು, ಆತನಿಂದ ಮತ್ತಷ್ಟು ವ್ಯಕ್ತಿಗೆ ಸೋಂಕು ಹರಡದಂತೆ ತಡೆಯಲು ಹರಸಾಹಸ ಪಡುತ್ತಿದ್ದಾರೆ.

ಅನಾನ್​ ಊರುಗೋಲು ಸಹಾಯದಿಂದ ರೈಲು ನಿಲ್ದಾಣದಲ್ಲಿ ತಿರುಗಾಡುತ್ತಿದ್ದ. ಈತ ಇತ್ತೀಚೆಗಷ್ಟೇ ಪಾಕಿಸ್ತಾನದಿಂದ ಹಿಂತಿರುಗಿ ಬ್ಯಾಂಕಾಕ್​ನಿಂದ ನಾರತಿವತ್​ಗೆ ಪ್ರಯಾಣ ಬೆಳೆಸಿದ್ದ. ಬ್ಯಾಂಕಾಕ್​ನ ಬ್ಯಾಂಗ್​ ಸ್ಯೂ ನಿಲ್ದಾಣದಲ್ಲಿ ಅಪರಿಚಿತ ಪ್ರಯಾಣಿಕನೊಬ್ಬನಿಗೆ ಅನಾನ್​ ಉಗಿದಿದ್ದ. ಬಳಿಕ ರೈಲಿನಲ್ಲೇ ಶವವಾಗಿ ಪತ್ತೆಯಾಗಿದ್ದಾನೆ.

ಬಳಿಕ ಆರೋಗ್ಯ ಅಧಿಕಾರಿಗಳು ಆತನ ಶವಪರೀಕ್ಷೆ ನಡೆಸಿದಾಗ ಆತನಲ್ಲಿ ಕೋವಿಡ್​-19 ಪಾಸಿಟಿವ್​ ಇದ್ದಿದ್ದು ಖಚಿತವಾಗಿದೆ. ಅಲ್ಲದೆ, ಆತ ಮಧುಮೇಹ ಕಾಯಿಲೆಯನ್ನು ಸಹ ಹೊಂದಿದ್ದ. ಅನಾನ್​ ಸಾವಿನಿಂದ ಥಾಯ್ಲೆಂಡ್​ ಕಂಗಾಲಾಗಿದೆ. ಆತ ಉಗುಳಿದ ವ್ಯಕ್ತಿ ಮತ್ತು ಪ್ಯಾಸೆಂಜರ್​ ರೈಲಿನ ಸಹ ಪ್ರಯಾಣಿಕರ ಪತ್ತೆಗೆ ಆರೋಗ್ಯ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net