ಶಸ್ತ್ರಚಿಕಿತ್ಸೆ ಬಳಿಕ ಮಹಿಳೆಯ ಹೊಟ್ಟೆಯಲ್ಲಿ ಬಟ್ಟೆ ಬಿಟ್ಟ ವೈದ್ಯ, ತನಿಖೆಗೆ ಆದೇಶ..

operation
ಸಾಂದರ್ಭಿಕ ಚಿತ್ರ
Published on

ಭಾಗಲ್ಪುರ: ಹೆರಿಗೆಗೆಂದು ತೆರಳಿದ್ದ ಮಹಿಳೆಯ ಹೊಟ್ಟೆಯಲ್ಲಿ ಬಟ್ಟೆಯನ್ನು ಬಿಟ್ಟು ಹೊಲಿಗೆ ಹಾಕಿರುವ ಘಟನೆ ಬಿಹಾರದ ಭಾಗಲ್ಪುರದಲ್ಲಿ ನಡೆದಿದೆ.

ಇದನ್ನೂ ಓದಿ: ಪತ್ನಿಯೂ ಸೇರಿದಂತೆ ಆಕೆಯ ಕುಟುಂಬಸ್ಥರ ಮೇ ಹಲ್ಲೆ ನಡೆಸಿ, 2ನೇ ಅಂತಸ್ತಿನಿಂದ ಜಿಗಿದ ಭೂಪ.. 

ಭಾಗಲ್ಪುರದ ನಾಥನಗರದ ನಿವಾಸಿ ಪ್ರಿಯಾಂಕಾ ಕುಮಾರಿ ಫೆಬ್ರವರಿಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಮಗುವಿಗೆ ಜನ್ಮ ನೀಡಿದ್ದರು. ನಾಲ್ಕು ತಿಂಗಳ ನಂತರ, ಆಕೆ ತೀವ್ರವಾದ ನೋವನ್ನು ಅನುಭವಿಸಿದ್ದು, ಆ ಬಳಿಕ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್​ ಮಾಡಿಸಿದ್ದಳು. ಈ ವೇಳೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವಳ ಹೊಟ್ಟೆಯ ಪ್ರದೇಶದಲ್ಲಿ ಉಳಿದಿರುವ ಬಟ್ಟೆಯಿಂದಾಗಿ ಅವಳ ಕರುಳುಗಳು ಉಬ್ಬಿವೆ ಎಂದು ತಿಳಿದು ಬಂದಿದೆ.

ನಂತರ ಖಾಸಗಿ ಆಸ್ಪತ್ರೆಯಲ್ಲಿ ಮತ್ತೊಂದು ಶಸ್ತ್ರಚಿಕಿತ್ಸೆಯನ್ನು ನಡೆಸಿ ಆಕೆಯ ಹೊಟ್ಟೆಯಲ್ಲಿದ್ದ ಬಟ್ಟೆಯನ್ನು ತೆಗೆಯಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಬ್ರತ್ ಕುಮಾರ್ ಸೇನ್ ಅವರು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಉದಯ್ ನಾರಾಯಣ ಸಿಂಗ್​ಗೆ ಪತ್ರ ಬರೆದು ಈ ಸಂಬಂಧ ಸಮಿತಿಯನ್ನು ರಚಿಸಿ ತನಿಖೆಯನ್ನು ಆರಂಭಿಸುವಂತೆ ಸೂಚಿಸಿದ್ದಾರೆ. ಅಲ್ಲದೇ. ಏಳು ದಿನಗಳೊಳಗೆ ವರದಿ ಸಲ್ಲಿಸುವಂತೆ ಸೇನ್​ ಸೂಚಿಸಿದ್ದಾರೆ.

ಕುಟುಂಬದ ಆರ್ಥಿಕ ಸಂಕಷ್ಟ:
ವೈದ್ಯರ ನಿರ್ಲಕ್ಷ್ಯವು ಪ್ರಿಯಾಂಕಾಳ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ಚಿಕಿತ್ಸೆಯ ವೆಚ್ಚವನ್ನು ಭರಿಸುವುದು ಕಷ್ಟಕರವಾಗಿದೆ. ಇಡೀ ಕುಟುಂಬ ಸಾಲದ ಸುಳಿಯಲ್ಲಿ ಸಿಲುಕಿದ್ದು, ಕಳೆದ ನಾಲ್ಕು ತಿಂಗಳಿನಿಂದ ಈಗಾಗಲೇ ಲಕ್ಷಗಟ್ಟಲೆ ಖರ್ಚು ಮಾಡಿದೆ ಎಂದು ಆಕೆಯ ಪತಿ ಚಂದನ್​ ಹೇಳಿದ್ದಾರೆ. ಅಲ್ಲದೇ, ಸರಕಾರದಿಂದ ಪರಿಹಾರ ಹಾಗೂ ನ್ಯಾಯ ದೊರಕಿಸಿಕೊಡಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದು, ವೈದ್ಯರು ಆಕೆಗೆ ಕಾಯಿಲೆಯ ಸಂಪೂರ್ಣ ಚಿಕಿತ್ಸೆಗಾಗಿ ಇನ್ನೂ ಎರಡು ತಿಂಗಳು ದಾಖಲಾಗುವಂತೆ ಸಲಹೆ ನೀಡುತ್ತಿದ್ದಾರೆ. ಕಳೆದ 4 ತಿಂಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಈಗ ಹೆಚ್ಚಿನ ಚಿಕಿತ್ಸೆ ಪಡೆಯುವುದು ಕಷ್ಟ ಎನಿಸುತ್ತಿದೆ. ಪತ್ನಿಯ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಪತಿ ಚಂದನ್ ಜಿಲ್ಲಾ ಮ್ಯಾಜಿಸ್ಟ್ರೇಟ್​ಗೆ ಮನವಿ ಮಾಡಿದ್ದಾನೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net