

ಬೆಂಗಳೂರು: ಸ್ಪೀಕರ್ ಯುಟಿ ಖಾದರ್ ನೇತೃತ್ವದ ಸಭೆಯಲ್ಲಿ ಬಿಜೆಪಿಯ 18 ಶಾಸಕರ ಅಮಾನತು ವಾಪಸ್ ಪಡೆಯಲಾಗಿದೆ.
ಹನಿಟ್ರ್ಯಾಪ್ ಮತ್ತು ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ವಿಚಾರವಾಗಿ ವಿಧಾನಸಭೆಯಲ್ಲಿ ಚರ್ಚೆ ವೇಳೆ ಭಾರೀ ಗಲಾಟೆ ನಡೆದಿತ್ತು. ಆ ವೇಳೆ ಬಿಜೆಪಿ ಶಾಸಕರು ಸ್ಪೀಕರ್ ಯು.ಟಿ ಖಾದರ್ ಅವರ ಮೇಲೆ ಪೇಪರ್ ತೂರಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮೂಲಕ ಪೀಠಕ್ಕೆ ಅಗೌರವ ತೋರಿದ ಆರೋಪದ ಮೇಲೆ ಬಿಜೆಪಿಯ 18 ಶಾಸಕರನ್ನು 6 ತಿಂಗಳು ಕಾಲ ಅಮಾನತು ಮಾಡಿ ಖಾದರ್ ಆದೇಶಿಸಿದ್ದರು. ಆದರೆ, ಇದೀಗ ಶಾಸಕ ಅಮಾನತು ಆದೇಶವನ್ನು ಹಿಂಪಡೆಯಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಈ ಬಗ್ಗೆ ಅಶೋಕ್ ಮಾತನಾಡಿದ್ದು, ಸ್ಪೀಕರ್ ಅವರು ನಾಳೆ ಹಜ್ ಯಾತ್ರೆಗೆ ಹೋಗಲಿದ್ದಾರೆ. ಹಾಗಾಗಿ ನಾಳೆಯೊಳಗೆ ಅಮಾನತು ಆದೇಶ ವಾಪಸ್ ಪಡೆದ ಬಗ್ಗೆ ಅಧಿಕೃತ ಆದೇಶ ಹೊರಬೀಳಬಹುದು ಎಂದು ಆರ್. ಅಶೋಕ್ ಹೇಳಿದ್ದಾರೆ.
ಬಿಜೆಪಿಯ 18 ಶಾಸಕರ ಅಮಾನತು ಹಿಂಪಡೆಯುವ ಸಂಬಂಧ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಿತು. ಸಭೆಯಲ್ಲಿ, ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಆರ್. ಅಶೋಕ್, ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹಾಜರಿದ್ದರು