ಸುಳ್ಯ: ಮಾತೃಭಾಷೆಯಲ್ಲೇ ಶಿಕ್ಷಣ ದೊರೆತರೆ ವ್ಯಕ್ತಿಯ ಸರ್ವಾಂಗೀಣ ವಿಕಾಸ ಸಾಧ್ಯವಾಗುವ ಕಾರಣ ಮಗುವಿಗೆ ಕನಿಷ್ಠ ಐದನೇ ತರಗತಿಯವರೆಗೆ ಕನ್ನಡ ಭಾಷೆಯಲ್ಲೇ ಶಿಕ್ಷಣ ದೊರೆಯುವಂತಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಮಂಗಳವಾರ ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ ಮಾತನಾಡಿ, ಕನ್ನಡ ಅನ್ನದ ಭಾಷೆ ಅಲ್ಲ, ಇಂಗ್ಲಿಷ್ ಅನ್ನದ ಭಾಷೆ ಎಂಬ ಮಾತಿದ್ದರೂ ಇಂಗ್ಲಿಷ್‌ನಲ್ಲಿ ಕಲಿತಿರುವ ಶೇ.47 ಮಂದಿಗೆ ಕೆಲಸವೇ ಸಿಗುತ್ತಿಲ್ಲ ಎಂಬ ವರದಿ ನಮ ್ಮಮುಂದಿದೆ. ನಮ್ಮ ಮಕ್ಕಳ ಬಾಲ್ಯದ ವಿಕಸನಕ್ಕೆ ಮಾತೃಭಾಷೆ ಶಿಕ್ಷಣ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಕನ್ನಡವನ್ನು ಕರ್ನಾಟಕದಲ್ಲಿ ಬಲಿಷ್ಠಗೊಳಿಸುವುದು ಪ್ರಾಧಿಕಾರದ ಉದ್ದೇಶ. ಆ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಸರ್ಕಾರ ನೀಡಿದ ಆದೇಶ ಅನುಷ್ಠಾನಕ್ಕೆ ಬಂದಿದೆಯೇ ಎಂದು ನೋಡುವುದು ಪ್ರಾಧಿಕಾರದ ಜವಾಬ್ದಾರಿಯಾಗಿದೆ. ಸರ್ಕಾರದ ಆದೇಶ ಅಧಿಕಾರಿಗಳು ಅನುಷ್ಠಾನಕ್ಕೆ ತಾರದೆ ಇದ್ದಾಗ ಅವರಿಗೆ ತಿಳಿಸಿ ಅನುಷ್ಠಾನ ಮಾಡುವಂತೆ ಮಾಡುವುದು ನಮ್ಮ ಕೆಲಸ ಎಂದು ತಿಳಿಸಿದರು.
ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಸ್ವಾಗತಿಸಿದರು. ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು, ನಿವೃತ್ತ ಪ್ರಾಂಶುಪಾಲ ಪೂವಪ್ಪ ಕಣಿಯೂರು, ಪ್ರೆಸ್‌ಕ್ಲಬ್ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೆಟ್ಟಿ, ಪತ್ರಕರ್ತರು ಇದ್ದರು.