

ಆಂಧ್ರಪ್ರದೇಶ: ಪವನ್ ಕಡಿಯಾಲ ನಿರ್ದೇಶನದಲ್ಲಿ ಹೊಸಬರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ ಕಡಿಮೆ ಬಜೆಟ್ ಚಿತ್ರ 'ಮಟ್ಟಿ ಕಥೆ' ಇದೀಗ ಒಟಿಟಿ ಪ್ರವೇಶಿಸಲು ಸಜ್ಜಾಗಿದೆ.
ಈ ಹಿಂದೆ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡಿದ್ದ ಈ ಚಿತ್ರವು ಇಂಡೋ-ಫ್ರೆಂಚ್ ಇಂಟರ್‌ನ್ಯಾಶನಲ್ ಫೆಸ್ಟಿವಲ್ 2023 ರಲ್ಲಿ 9 ಪ್ರಶಸ್ತಿಗಳನ್ನು ಬಾಚಿಕೊಂಡಿತು. ವಿಮರ್ಶಕರ ಮೆಚ್ಚುಗೆ ಪಡೆದುಕೊಂಡ ಮಟ್ಟಿ ಕಥಾ ಇದೇ ಸೆಪ್ಟೆಂಬರ್ 22, 2023 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಗಳಿಸಿತು. ಇದೀಗ ಈ ಚಲನಚಿತ್ರವು ಮತ್ತೊಮ್ಮೆ ಸುದ್ದಿಯಾಗಿದ್ದು, ಒಟಿಟಿಗೆ ಲಗ್ಗೆಯಿಡಲಿದೆ.
ಚಿತ್ರವು ತೆಲುಗು ಒಟಿಟಿ ಪ್ಲಾಟ್‌ಫಾರ್ಮ್ ಆದ 'ಆಹಾ'ದಲ್ಲಿ ಇದೇ ಅಕ್ಟೋಬರ್ 13 ರಂದು ಡಿಜಿಟಲ್ ಸ್ಟ್ರೀಮಿಂಗ್ಗೆ ಲಭ್ಯವಾಗಲಿದೆ. ಅಪ್ಪಿ ರೆಡ್ಡಿ ನಿರ್ಮಾಣದ ಈ ಸಿನಿಮಾದಲ್ಲಿ ಅಜೇಯ ವೇದ್, ಮಾಯಾ, ಕನಕವ್ವ, ದಯಾನಂದ ರೆಡ್ಡಿ, ಸುಧಾಕರ್ ರೆಡ್ಡಿ, ಬಲ್ವೀರ್ ಸಿಂಗ್, ಅಕ್ಷಯ್ ಸಾಯಿ, ರಾಜು ಆಲೂರಿ, ರುಚಿತಾ, ಬತ್ತುಲ ತೇಜ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ,(ಏಜೆನ್ಸೀಸ್).