ಮಟ್ಟಿ ಜೋಗಿಮಠದಲ್ಲಿ ವಾರ್ಷಿಕ ಜಾತ್ರಾರಂಭ : 27ರವರೆಗೆ ಮಹಾಶಿವರಾತ್ರಿ ಉತ್ಸವ

New Project (3)
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಮಳಲಿ ಮಟ್ಟಿಯ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ(ಜೋಗಿಮಠ) ಸೋಮವಾರ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮಹಾಶಿವರಾತ್ರಿ ಉತ್ಸವ ಆರಂಭಗೊಂಡಿದ್ದು, ಫೆ.27ರವರೆಗೆ ಉತ್ಸವ ನಡೆಯಲಿದೆ.

ಕದ್ರಿ ಜೋಗಿಮಠದ ಶ್ರೀ ಯೋಗಿರಾಜ ನಿರ್ಮಲನಾಥ ಮಹಾರಾಜ್ ಅವರ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಕದ್ರಿ ದೇರೆಬೈಲು ವಿಠಲದಾಸ ತಂತ್ರಿ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಮಟ್ಟಿಯ ಪ್ರಧಾನ ಅರ್ಚಕ ಉಮೇಶ್‌ನಾಥ್ ಕದ್ರಿ ಹಾಗೂ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಗಂಗಾಧರ ಜೋಗಿ ಉಪಸ್ಥಿತಿಯಲ್ಲಿ ಸೋಮವಾರ ಬೆಳಗ್ಗೆ ಶತರುದ್ರಾಭಿಷೇಕ ಹಾಗೂ ಮಹಾರುದ್ರಯಾಗ ನಡೆಯಿತು.

ಮಳಲಿ ಮಟ್ಟಿ ಶ್ರೀ ಕಾಲಭೈರವ ಮಂಜುನಾಥೇಶ್ವರ ಭಜನಾ ಮಂಡಳಿ ಮತ್ತು ಶ್ರೀ ಕಾಲಭೈರವ ಮಂಜುನಾಥೇಶ್ವರ ಮಕ್ಕಳ ಭಜನಾ ಮಂಡಳಿಯಿಂದ ಭಜನೆ, ಮಧ್ಯಾಹ್ನ ಮಳಲಿ ಬ್ರಹ್ಮಲಿಂಗೇಶ್ವರ ಯಕ್ಷಗಾನ ಮಂಡಳಿಯವರಿಂದ ದಕ್ಷಯಜ್ಞ ಯಕ್ಷಗಾನ ತಾಳಮದ್ದಳೆ ಜರುಗಿತು. ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ಮಹಾಪೂಜೆ, ಉತ್ಸವಬಲಿ, ಬಟ್ಟಲು ಕಾಣಿಕೆ ನೆರವೇರಿತು.

ಸಾನ್ನಿಧ್ಯದ ಕಲ್ಲುರ್ಟಿ ದೈವದ ಹೊಸ ಬಿಂಬ ಪ್ರತಿಷ್ಠಾಪನೆ ಮಾಡಲಾಯಿತು. ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು, ಮಳಲಿ- ಮಟ್ಟಿ ನೂರಾರು ಭಕ್ತರು ಇದ್ದರು. ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಿತು.

ಉತ್ಸವ ಮೂರ್ತಿಗೆ ಬೆಳ್ಳಿ ಪ್ರಭಾವಳಿ

ಗಂಗಾಧರ ಜೋಗಿ, ವೇದಾ ಗಂಗಾಧರ ಜೋಗಿ ಮತ್ತು ಮಕ್ಕಳಾದ ಮನೀಶ್, ವಿನೀಶ್ ಹಾಗೂ ಮಟ್ಟಿಯ ಭೈರವ್ ನಾಸಿಕ್ ಅವರು ಶ್ರೀ ದೇವರ ಉತ್ಸವ ಮೂರ್ತಿಗೆ ಬೆಳ್ಳಿ ಪ್ರಭಾವಳಿ ಅರ್ಪಿಸಿದರು. ಗಂಗಾಧರ ಜೋಗಿ, ಮನೀಶ್ ಅವರು ಹಸಿರು ಕೊಡೆ ಅರ್ಪಿಸಿದರು. ಕೊಲ್ಲಮೊಗರುವಿನ ಸುಷ್ಮಿತಾ ಕಿಶೋರ್ ಮತ್ತು ಮಕ್ಕಳು ಹಾಗೂ ಮಟ್ಟಿಯ ಶ್ಯಾಮಲಾ ರಾಮಚಂದ್ರ ಜೋಗಿ ಮತ್ತು ಮಕ್ಕಳು ದೇವರಿಗೆ 2 ಬೆಳ್ಳಿ ಚಾಮರ ಅರ್ಪಿಸಿದರು. ಮಳಲಿ ಕುಕ್ಕರಿಯ ಆಶಿಸ್‌ದಾಸ್ ಅವರು ಸಾನ್ನಿಧ್ಯದ ಶ್ರೀ ಧೂಮಾವತಿ ದೈವಕ್ಕೆ ಬೆಳ್ಳಿ ಖಡ್ಸಲೆ ಮತ್ತು ಸೊಂಟ ಪಟ್ಟಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net