ಬೆಂಗಳೂರು: ಪಶ್ಚಿಮಘಟ್ಟದ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಶ್ರೀ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಭಕ್ತರಿಗೆ ಹೆಚ್ಚಿನ ಅನುಕೂಲತೆ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸಾರಿಗೆ ಖಾತೆಯನ್ನು ಹೊಂದಿರುವ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಇಲಾಖೆ ಸಭೆ ನಡೆದು, ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲು ಉದ್ದೇಶಿತ ಮಾಸ್ಟರ್‌ಪ್ಲ್ಯಾನ್ ಬಗ್ಗೆ ಚರ್ಚಿಸಿ ಒಪ್ಪಿಗೆ ನೀಡಿದೆ.
ಸ್ಥಳೀಯ ಸಂಸ್ಕೃತಿ ಹಾಗೂ ದೇವಾಲಯದ ವಿನ್ಯಾಸಕ್ಕೆ ಸರಿ ಹೊಂದುವಂತೆ ದೇವಸ್ಥಾನದ ಸುತ್ತುಪೌಳಿ ಮರು ವಿನ್ಯಾಸಗೊಳಿಸಿ ಅನುಮತಿ ಪಡೆದು ನಿರ್ಮಾಣ, ಇದಕ್ಕಾಗಿ ತುಳಸಿ ತೋಟದಲ್ಲಿ ಸ್ಥಳ ಗುರುತಿಸಲಾಗಿದೆ.
ಆಶ್ಲೇಷಬಲಿ ಹಾಗೂ ಪೂಜಾ ಮಂದಿರ ಕಟ್ಟಡದ ವಿನ್ಯಾಸ, ಸ್ಥಳೀಯ ಸಂಸ್ಕೃತಿಗೆ ಅನುಗುಣವಾಗಿ ದೇವಾಲಯದ ಸಮಿತಿಯಿಂದ ಅಂದಾಜು ವೆಚ್ಚ, ನಕ್ಷೆ ತಯಾರಿಸಬೇಕು. ಸ್ವಯಂ ಮುಂದೆ ಬರುವ ದಾನಿಗಳಿಗೆ ಸಮಗ್ರ ಅಭಿವೃದ್ಧಿ ಪರವಾನಗಿ ನೀಡುವುದು. ಇಲ್ಲವಾದರೆ ದೇವಸ್ಥಾನದಿಂದಲೇ ಈ ವೆಚ್ಚ ಭರಿಸಲು ಸಭೆ ಸಮ್ಮತಿಸಿದೆ.
ಈಗಿರುವ ದಾಸೋಹ ಕಟ್ಟಡ ಸಾಕು ಎಂದಾದರೆ ಅದನ್ನು ಉಳಿಸಿಕೊಳ್ಳುವುದು. ಭಕ್ತರ ಸಂದಣಿಗೆ ತಕ್ಕಂತೆ ಕಟ್ಟಡ ವಿಸ್ತರಣೆ ಇಲ್ಲವೇ ಹೊಸದಾಗಿ ದೊಡ್ಡ ದಾಸೋಹ ಭವನ ನಿರ್ಮಿಸಲು ವಿಸ್ತೃತವಾದ ಅಂದಾಜು ವೆಚ್ಚದ ವರದಿ ನಕ್ಷೆ ಸಹಿತ ಸಲ್ಲಿಸಲು ಸಭೆ ಸೂಚಿಸಿತು.
ನಾಲ್ಕು ಸಂಕೀರ್ಣಗಳು
ಮೂಲ ಸವಲತ್ತುಳ್ಳ ನಾಲ್ಕು ಸರತಿ ಸಾಲು ಸಂಕೀರ್ಣಗಳು, 50 ಕೊಠಡಿಗಳನ್ನು ಹೊಂದಿರುವ ಛತ್ರ, ಹೆಚ್ಚುತ್ತಿರುವ ಯಾತ್ರಾರ್ಥಿಗಳ ವಸತಿ ವ್ಯವಸ್ಥೆಗೆ ತಲಾ 200 ಕೊಠಡಿಗಳಿರುವ ಒಟ್ಟು ನಾಲ್ಕು ಸಂಕೀರ್ಣಗಳ ನಿರ್ಮಾಣಕ್ಕೆ ಸಭೆ ತೀರ್ಮಾನಿಸಿತು.
ಸ್ಥಳೀಯ ಸಂಸ್ಕೃತಿ, ದೇವಾಲಯದ ವಿನ್ಯಾಸಕ್ಕೆ ಅನುರೂಪವಾದ ಉತ್ತಮ ರಥ ಬೀದಿ ನಿರ್ಮಿಸಿ ಅಕ್ಕಪಕ್ಕದಲ್ಲಿ ಭಕ್ತರು ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸುವುದು. ತಲಾ 24 ಶೌಚಗೃಹ, 16 ಸ್ನಾನಗೃಹಗಳಿರುವ ಒಟ್ಟು ನಾಲ್ಕು ಬ್ಲಾಕ್‌ಗಳ ನಿರ್ಮಿಸಬೇಕು.
ದೇವಾಲಯಕ್ಕೆ ಬರುವ ಮಾರ್ಗದ ಸೂಕ್ತ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮತ್ತು ಭಕ್ತರ ಸ್ವಂತ ವಾಹನಗಳ ನಿಲುಗಡೆಗೆ ಬೇಕಾದ ಜಮೀನು ಖರೀದಿಸಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದರು.
ಇದೇ ಸಭೆಯಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿ ಪರಿಣಾಮಕಾರಿ, ತ್ವರಿತ ಅನುಷ್ಠಾನಕ್ಕೆ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಮೇಲ್ವಿಚಾರಣೆ ಸಮಿತಿ ರಚಿಸಲಾಯಿತು.