

ಹೈದರಾಬಾದ್: ಶ್ರೀಶೈಲಂನಲ್ಲಿರುವ ತೆಲಂಗಾಣದ ಪವರ್ ಸ್ಟೇಷನ್ ಒಂದರಲ್ಲಿ ಗುರುವಾರ ತಡರಾತ್ರಿ ಭಾರಿ ಬೆಂಕಿ ಅನಾಹುತ ಸಂಭವಿಸಿದೆ. ಕೆಲವರು ಅಲ್ಲಿ ಸಿಲುಕಿಕೊಂಡಿರುವ ಶಂಕೆ ಇದ್ದು, ರಕ್ಷಣಾ ಪರಿಹಾರ ಕಾರ್ಯ ನಡೆದಿದೆ. ಆರಂಭಿಕ ಮಾಹಿತಿಗಳ ಪ್ರಕಾರ ಶಾರ್ಟ್ ಸರ್ಕೀಟ್ ಸಂಭವಿಸಿದ ಕಾರಣ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ತೆಲಂಗಾಣದ ನಾಗರಕುರ್ನೂಲ್ ಜಿಲ್ಲೆಯ ಶ್ರೀಶೈಲಂನಲ್ಲಿರುವ ಟಿಎಸ್ ಗೆನ್ಕೋ ಹೈಡೆಲ್ ಪವರ್ ಸ್ಟೇಷನ್ನಲ್ಲಿ ಈ ದುರಂತ ಸಂಭವಿಸಿದೆ. ಅಗ್ನಿ ದುರಂತ ಸಂಭವಿಸಿದ ವೇಳೆ ಅಲ್ಲಿ 17 ಜನರಿದ್ದರು ಎಂದು ಹೇಳಲಾಗುತ್ತಿದ್ದು, ಅವರ ಪೈಕಿ 10 ಜನ ಸ್ಥಳದಿಂದ ಸುರಕ್ಷಿತವಾಗಿ ಸುರಂಗದ ಮೂಲಕ ಹೊರಬಿದ್ದಿದ್ದಾರೆ. ಟಿಎಸ್ ಗೆನ್ಕೋ ಕಂಪನಿಯ ಆರು ನೌಕರರು ಮತ್ತು ಖಾಸಗಿ ಕಂಪನಿಯ ಮೂರು ನೌಕರರು ಅಲ್ಲಿ ಸಿಲುಕಿಕೊಂಡಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಸಿಲುಕಿದ್ದವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ತೆಲಂಗಾಣ ಸಚಿವ ಜಗದೀಶ ರೆಡ್ಡಿ ಮತ್ತು ಟಿಎಸ್ ಗೆನ್ಕೋ ಕಂಪನಿಯ ಸಿಎಂಡಿ ಪ್ರಭಾಕರ ರಾವ್ ಸ್ಥಳಕ್ಕೆ ತಲುಪಿದ್ದು ರಕ್ಷಣಾ ಕಾರ್ಯದ ಉಸ್ತುವಾರಿ ಗಮನಿಸುತ್ತಿದ್ದಾರೆ. (ಏಜೆನ್ಸೀಸ್)