43 ದಿನಗಳಾದರೂ ನಂದಿಲ್ಲ ಅಸ್ಸಾಂ ತೈಲ ಬಾವಿ ಬೆಂಕಿ; ಮತ್ತೆ ಭಾರಿ ಸ್ಫೋಟ; ಕಂಗೆಟ್ಟ ಸ್ಥಳೀಯರು ಮಾಡಿದ್ದೇನು?

Oil well
Published on

ಗುವಾಹತಿ: ಭಾರತೀಯ ತೈಲ ನಿಗಮದ ಅಧೀನದಲ್ಲಿರುವ ತೀನ್​ಸುಕಿಯಾ ಜಿಲ್ಲೆಯ ಬಾಗ್​ಜಾನ್​ ಪ್ರದೇಶದ ನೈಸರ್ಗಿಕ ಅನಿಲ ತೈಲ ಬಾವಿಯಲ್ಲಿ ಕಾಣಿಸಿಕೊಂಡಿರುವ ಬೆಂಕಿ 43 ದಿನಗಳಾದರೂ ನಂದಿಲ್ಲ.

ಜೂನ್​ 9ರಿಂದ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನಂದಿಸುವ ಪ್ರಯತ್ನದಲ್ಲಿ ತೊಡಗಿದ್ದ ಮೂವರು ವಿದೇಶಿ ತಜ್ಞರು ಬುಧವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ.

ಸ್ಥಳೀಯರಿಂದ ದಿಗ್ಬಂಧನ: ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಆರು ವಿದೇಶಿ ತಜ್ಞರು ಸೇರಿ 200ಕ್ಕೂ ಅಧಿಕ ಸಿಬ್ಬಂದಿಗೆ ಸ್ಥಳೀಯರು ದಿಗ್ಬಂಧನ ವಿಧಿಸಿದ್ದಾರೆ. ಹೀಗಾಗಿ ಇವರೆಲ್ಲ ಭಾರಿ ಮಳೆಯಲ್ಲಿಯೇ 18 ತಾಸು ಕಳೆಯಬೇಕಾಯಿತು.

ಬೆಂಕಿಯಿಂದಾಗಿ 9,000ಕ್ಕೂ ಜನರನ್ನು ಸ್ಥಳಾಂತರಿಸಿ ನಿರಾಶ್ರಿತರ ಕೇಂದ್ರದಲ್ಲಿ ಇರಿಸಲಾಗಿದೆ. ಈ ಪೈಕಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನಿಗೆ 2 ಕೋಟಿ ರೂ. ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು ಹೊರ ಹೋಗದಂತೆ ಎಲ್ಲ ರಸ್ತೆಗಳನ್ನು ಬಂದ್​ ಮಾಡಿದ್ದರು. ಜತೆಗೆ ತೈಲ ನಿಗಮದ ಎಂಡಿಯನ್ನೇ ಬಂಧಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಬೆಂಕಿ ನಂದಿಸಲೆಂದೇ ಆರು ವಿದೇಶಿಯರನ್ನು ಕರೆಯಲಾಗಿದೆ. ಸಿಂಗಾಪುರ್​ನ ಮೂವರು, ಅಮೆರಿಕದ ಇಬ್ಬರು ಹಾಗೂ ಕೆನಡಾದ ಒಬ್ಬ ತಜ್ಞ ಇದರಲ್ಲಿದ್ದಾರೆ. ಬೆಂಕಿ ತಹಬಂದಿಗೆ ಬಾರದ ಕಾರಣ ಪರಿಹಾರ ಕಾರ್ಯದಿಂದ ಹಿಂದಕ್ಕೆ ಸರಿಯಲು ಇವರು ನಿರ್ಧರಿಸಿದ್ದರು ಎಂದು ಹೇಳಲಾಗಿದೆ. ಇದರ ಮಧ್ಯದಲ್ಲಿಯೇ ಮೂವರು ಗಾಯಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ನಾಲ್ಕು ವಾರಗಳಲ್ಲಿ ಬೆಂಕಿ ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಲಾಗಿತ್ತು. ಇದೀಗ ಎಂಟು ವಾರಗಳಾಗುತ್ತ ಬಂದರೂ ಬೆಂಕಿ ನಂದಿಲ್ಲ. ಯಾವಾಗ ಕಾರ್ಯಚರಣೆ ಯಶಸ್ವಿಯಾಗುತ್ತೆ ಎಂಬುದು ಗೊತ್ತಾಗುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net