ಬೈರುತ್​ನಲ್ಲಿ ಭೀಕರ ಸ್ಪೋಟ: 78 ಸಾವು, ಸಾವಿರಾರು ಜನರಿಗೆ ಗಾಯ

Bairut blast
Published on

ಬೈರುತ್​: ಲೆಬನಾನ್​ನ ರಾಜಧಾನಿ ಬೈರುತ್​ನಲ್ಲಿ ನಿನ್ನೆ ರಾತ್ರಿ ಶಕ್ತಿಶಾಲಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 78 ಜನ ಮೃತಪಟ್ಟಿದ್ದು, 4,000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ 3.5 ತೀವ್ರತೆಯ ಭೂಕಂಪನ ಸೃಷ್ಟಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಂಟ್ರಲ್​ ಬೈರುತ್​ನ ಬಂದರು ಉಗ್ರಾಣದಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ಪ್ರತಿಕ್ರಿಯೆ ನೀಡಿರುವ ಲೆಬನಾನ್ ಪ್ರೆಸಿಡೆಂಟ್ ಮೈಕೆಲ್ ಔನ್​, ಬಂದರಿನಲ್ಲಿ ಯಾವುದೇ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳದೆ 2,750 ಟನ್ ಅಮೋನಿಯಂ ನೈಟ್ರೇಟನ್ನು ದಾಸ್ತಾನು ಇರಿಸಲಾಗಿತ್ತು. ಆರು ವರ್ಷಗಳಿಂದ ಇಂತಹ ದಾಸ್ತಾನು ವ್ಯವಸ್ಥೆ ಅಲ್ಲಿತ್ತು. ಇದು ಅರಿವಿಗೆ ಬಾರದೇ ಹೋದುದು ದುರದೃಷ್ಟಕರ ಎಂದು ಹೇಳಿದ್ದಾರೆ. ಅಲ್ಲದೆ, ಎರಡು ವಾರ ಕಾಲ ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

ಅಲ್ಲಿನ ಸ್ಥಳೀಯ ಕಾಲಮಾನ ಸಂಜೆ 6 ಗಂಟೆಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ಭಾರಿ ಗಾತ್ರದ ಧೂಮ ಅಣಬೆಯಂತೆ ಮೇಲೆದ್ದುದು ಕಂಡುಬಂದಿತ್ತು. ಅದಾಗಿ ಕೇಸರಿ ಬಣ್ಣದ ಜ್ವಾಲೆಗಳು ಆಗಸಕ್ಕೆ ಚಿಮ್ಮುತ್ತಿದ್ದ ದೃಶ್ಯ ಕಂಡಿತ್ತು. ರಾತ್ರಿ ಇಡೀ ಬೈರುತ್​ನಲ್ಲಿ ಆ್ಯಂಬುಲೆನ್ಸ್ ಸೈರನ್​ಗಳದ್ದೇ ಸದ್ದು ಹೆಚ್ಚಾಗಿತ್ತು. ಬೆಂಕಿ ನಂದಿಸುವ ಕೆಲಸ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net