More

    ಮುಗಿಯಿತು ವನವಾಸ ಇಂದು ಶಿಲಾನ್ಯಾಸ

    ಕೋಟ್ಯಂತರ ರಾಮಭಕ್ತರು ಎದುರುನೋಡುತ್ತಿದ್ದ ಸುದಿನ ಕೊನೆಗೂ ಬಂದಿದೆ. ಶ್ರೀರಾಮ ಮಂದಿರ ಶಿಲಾನ್ಯಾಸಕ್ಕೆ ಅಯೋಧ್ಯೆ ಸಜ್ಜುಗೊಂಡಿದೆ. ಇನ್ನು ಮೂರೂವರೆ ವರ್ಷದಲ್ಲಿ ಭವ್ಯ ರಾಮ ಮಂದಿರ ತಲೆ ಎತ್ತಲಿದೆ. ಅಯೋಧ್ಯೆ ಜತೆಗೆ ಇಡೀ ದೇಶ ಸಂಭ್ರಮಿಸುತ್ತಿದೆ. ಮಂದಿರದ ನೀಲಿನಕ್ಷೆಯನ್ನು ಟ್ರಸ್ಟ್ ಬಿಡುಗಡೆ ಮಾಡಿದೆ. ಶಿಲಾನ್ಯಾಸ ಮುಗಿಯುತ್ತಿದ್ದಂತೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. 70 ಎಕರೆ ಪ್ರದೇಶದಲ್ಲಿ ಮಂದಿರ, ಕಾರಿಡಾರ್, ಶ್ರೀರಾಮನ ಕುರಿತ ಮ್ಯೂಸಿಯಂ ಕೂಡ ನಿರ್ವಣವಾಗಲಿದೆ.

    ಅಯೋಧ್ಯೆ ಭವ್ಯ ರಾಮ ಮಂದಿರದ ನೀಲಿನಕ್ಷೆ, ಗ್ರಾಫಿಕ್ಸ್ ಚಿತ್ರಗಳನ್ನು ಟ್ರಸ್ಟ್ ಮಂಗಳವಾರ ಬಿಡುಗಡೆ ಮಾಡಿದೆ. 161 ಅಡಿ ಎತ್ತರದ ಕಟ್ಟಡ ಇದಾಗಿರಲಿದೆ. ಐದು ಮಂಟಪ ಹಾಗೂ ಒಂದು ಮುಖ್ಯ ಗೋಪುರ ಇರಲಿದೆ. ಅಯೋಧ್ಯೆಯ ಬಹುತೇಕ ಪ್ರದೇಶಗಳಿಂದ ಮಂದಿರದ ಗೋಪುರ ಕಾಣಲಿದೆ. 1989ರಲ್ಲಿ ವಿಶ್ವ ಹಿಂದು ಪರಿಷತ್ ರಚಿಸಿದ್ದ ನಕ್ಷೆಯಲ್ಲಿ ತುಸು ಬದಲಾವಣೆಗಳನ್ನು ಮಾಡಲಾಗಿದೆ. ಸುಮಾರು ಮೂರೂವರೆ ವರ್ಷದಲ್ಲಿ ಮಂದಿರ ನಿರ್ಮಾಣ ಪೂರ್ಣಗೊಳ್ಳಲಿದೆ. ಒಟ್ಟೂ 70 ಎಕರೆ ಜಾಗವನ್ನು ಮಂದಿರಕ್ಕಾಗಿ ನೀಡಲಾಗಿದೆ. ಇದರಲ್ಲಿ ಮೂರು ಎಕರೆಯಲ್ಲಿ ಮಂದಿರ ನಿರ್ವಣವಾಗಲಿದೆ. ಪ್ರತಿದಿನ ಒಂದು ಲಕ್ಷ ಜನರು ಮಂದಿರಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಮಂದಿರದ ನೀಲಿನಕ್ಷೆ ತಯಾರಿಸಲಾಗಿದೆ.

    ವಿಶ್ವ ಹಿಂದು ಪರಿಷತ್ ರಚಿಸಿದ್ದ ನಕ್ಷೆಯಲ್ಲಿ ಮೂರು ಗೋಪುರ ಇತ್ತು. ಈಗ ಇದನ್ನು 5ಕ್ಕೆ ಹೆಚ್ಚಿಸಲಾಗಿದೆ. ಸಿಂಹದ್ವಾರ, ರಂಗ ಮಂಟಪ, ನೃತ್ಯ ಮಂಡಲ, ಪೂಜಾಕಕ್ಷೆ, ಗರ್ಭಗುಡಿಯ ಮೇಲ್ಭಾಗದಲ್ಲಿ ಈ ಗೋಪುರಗಳು ಇರಲಿದೆ. 318 ಪಿಲ್ಲರ್​ಗಳು ಇರಲಿವೆ. ಶಿಲಾನ್ಯಾಸ ಮುಗಿಯುತ್ತಿದ್ದಂತೆ ಬೃಹತ್ ಯಂತ್ರೋಪಕರಣಗಳ ಮೂಲಕ ಕಾಮಗಾರಿ ಆರಂಭವಾಗಲಿದೆ. ಮಂದಿರ ನಿರ್ವಣವಾಗುವ ಸ್ಥಳದ 200 ಅಡಿ ಆಳದಲ್ಲಿ ಮಣ್ಣಿನ ಗುಣಮಟ್ಟ ಪರೀಕ್ಷೆ ಮಾಡಲಾಗುತ್ತದೆ. ಮಂದಿರದ ಭಾರವನ್ನು ತಡೆಯುವ ಸಾಮರ್ಥ್ಯ ಇದೆಯೇ ಎಂಬುದನ್ನು ಖಚಿತಪಡಿಸಿಕೊಂಡು ಕಾಮಗಾರಿ ಮುಂದುವರಿಸಲಾಗುತ್ತದೆ. ಮಂದಿರ ನಿರ್ವಣಕ್ಕೆ 1.75 ಲಕ್ಷ ಚದರ ಅಡಿಯ ಕಲ್ಲುಗಳು ಬೇಕು ಎಂದು ಅಂದಾಜಿಸಲಾಗಿದೆ. ಕರಸೇವಕಪುರಂನಲ್ಲಿ ಈಗಾಗಲೇ ಕಲ್ಲಿನ ಕೆತ್ತನೆ ಇನ್ನಿತರ ಕಾರ್ಯ ನಡೆಯುತ್ತಿದೆ. ಒಂದು ಅಂತಸ್ತು ನಿರ್ಮಾಣ ಮಾಡುವಷ್ಟು ಕಲ್ಲು, ಕೆತ್ತನೆಗಳು ಇವೆ. ಇನ್ನು ಎರಡು ಅಂತಸ್ತುಗಳ ನಿರ್ವಣಕ್ಕೆ ಕಲ್ಲುಗಳನ್ನು ತರಬೇಕಿದೆ. ವಿಶಾಲ ಮಂದಿರದ ಅಡಿಪಾಯ ನಿರ್ವಿುಸಲು ಸುಮಾರು ನಾಲ್ಕು ತಿಂಗಳು ಬೇಕು ಎಂದು ಅಂದಾಜಿಸಲಾಗಿದೆ. ನಾಗರ ಶೈಲಿಯ ಅಷ್ಟಕೋನ ಮಂದಿರ ಇದಾಗಿದೆ. ಮುಖ್ಯ ಮಂದಿರದ ಸುತ್ತಮುತ್ತ ಸೀತಾ, ಲಕ್ಷಣ, ಭರತ, ಗಣಪತಿಯ ಮಂದಿರ ಇರಲಿದೆ. ಮೂರು ಕಿ.ಮೀ ವ್ಯಾಪ್ತಿಯಲ್ಲಿ ಕಾರಿಡಾರ್ ನಿರ್ಮಾಣ ಮಾಡಲಾಗುತ್ತದೆ.

    # ಸಮಾರಂಭದಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ನೆನಪಿನ ಕಾಣಿಕೆ ರೂಪದಲ್ಲಿ ಬೆಳ್ಳಿಯ ನಾಣ್ಯ ನೀಡಲಾಗುತ್ತದೆ. ಇದರಲ್ಲಿ ಶ್ರೀರಾಮನ ಚಿತ್ರ, ರಾಮ ಮಂದಿರ ಟ್ರಸ್ಟ್​ನ ಚಿಹ್ನೆ ಇರಲಿದೆ

    # ಕರೊನಾ ಭೀತಿ ಹಿನ್ನೆಲೆಯಲ್ಲಿ ಅಯೋಧ್ಯೆಯ ಎಲ್ಲ ದೇವಾಲಯಗಳಲ್ಲಿ ಸೋಂಕು ನಿವಾರಕ ಸಿಂಪಡಿಸಲಾಗಿದೆ

    # ಸರಯೂ ನದಿ ದಡದಲ್ಲಿ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ

    # ಸಾರ್ವಜನಿಕರು ಶಿಲಾನ್ಯಾಸ ಸ್ಥಳಕ್ಕೆ ಬರಬಾರದು. ಮನೆಯಲ್ಲೇ ದೀಪ ಹಚ್ಚಿ, ಧ್ವಜ ಹಾರಿಸಿ ಎಂದು ರಾಮ ಮಂದಿರ ಟ್ರಸ್ಟ್ ಮನವಿ ಮಾಡಿದೆ.

    ಖಾಕಿ ಕೋಟೆಯಲ್ಲಿ ಅಯೋಧ್ಯೆ

    ಅಯೋಧ್ಯೆಯ ಐತಿಹಾಸಿಕ ಕಾರ್ಯಕ್ರಮಕ್ಕೆ ಅಭೂತಪೂರ್ವ ಭದ್ರತೆ ಒದಗಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಹಿತ ಅತಿ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಕಾರಣ ಇಡೀ ಪಟ್ಟಣದ ಮೇಲೆ ಭದ್ರತಾಪಡೆಗಳು ಹದ್ದಿನ ಕಣ್ಣಿಟ್ಟಿವೆ. ಅಯೋಧ್ಯೆಯನ್ನು ಸಂರ್ಪಸುವ ಎಲ್ಲ ರಸ್ತೆಗಳನ್ನು ಸೀಲ್ ಮಾಡಲಾಗಿದೆ. ಶಿಲಾನ್ಯಾಸಕ್ಕೆ ಆಹ್ವಾನಿತರ ಹೊರತಾಗಿ ಹೊರಗಿನ ವ್ಯಕ್ತಿಗಳಿಗೆ ಪ್ರವೇಶ ಇರುವುದಿಲ್ಲ. ರಾಮ ಜನ್ಮಭೂಮಿ ಪ್ರದೇಶದ ಸುತ್ತಲಿನ 20 ಕಿ.ಮೀ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ಕೈಗೊಳ್ಳಲಾಗಿದೆ. ಸ್ಥಳೀಯ ನಿವಾಸಿಗಳು ಮನೆಯಿಂದ ಹೊರ ಹೋಗುವ ವೇಳೆ ಗುರುತಿನಪತ್ರ ಇಟ್ಟುಕೊಳ್ಳುವುದು ಕಡ್ಡಾಯ ಮಾಡಲಾಗಿದೆ. ನಾಲ್ಕು ಕಿಮೀ ವ್ಯಾಪ್ತಿಯಲ್ಲಿನ ಜನರು ಕೆಲ ಗಂಟೆಗಳ ಗೃಹ ಬಂಧನಕ್ಕೆ ಒಳಪಡಲಿದ್ದಾರೆ. ಶಿಲಾನ್ಯಾಸ ಕಾರ್ಯಕ್ರಮ ವೇಳೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಭದ್ರತೆ ಏರ್ಪಡಿಸಲಾಗಿದೆ. ರಾಮ ಜನ್ಮಭೂಮಿ ಸುತ್ತಮುತ್ತ 5000 ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 75 ಚೆಕ್ ಪೋಸ್ಟ್ ನಿರ್ವಣಗೊಂಡಿವೆ.

    32 ಸೆಕೆಂಡುಗಳ ಪ್ರಕ್ರಿಯೆ

    ಬುಧವಾರ ಮಧ್ಯಾಹ್ನ 12:44:08 ರಿಂದ 12:44:40ರ ತನಕ ಭೂಮಿ ಪೂಜೆಯ ಮುಹೂರ್ತ ನಿಗದಿ ಆಗಿದೆ. ಅಂದರೆ 32 ಸೆಕೆಂಡುಗಳ ಪ್ರಕ್ರಿಯೆ ನಡೆಯಲಿದೆ. ಈ ಅವಧಿಯಲ್ಲಿ ಪ್ರಧಾನಿ ಮೋದಿ ಬೆಳ್ಳಿಯ ಇಟ್ಟಿಗೆಯನ್ನು ರಾಮ ಜನ್ಮಸ್ಥಳದಲ್ಲಿ ನೆಲೆಗೊಳಿಸುವ ಮೂಲಕ ಅಡಿಗಲ್ಲು ಹಾಕಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಮುಖ್ಯಸ್ಥ ನೃತ್ಯಗೋಪಾಲ್ ದಾಸ್ ಮತ್ತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಇರಲಿದ್ದಾರೆ. 175 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಭೂಮಿಪೂಜೆ ವೇಳೆ ಅರ್ಚಕರು 3 ನಿಮಿಷ ವೈದಿಕ ಪಠಣ ಮಾಡಲಿದ್ದು, ಅಲ್ಲಿ ಪ್ರಧಾನಿ ಮೋದಿ ಅವರ ಆರೋಗ್ಯ ರಕ್ಷಣೆಗೆ ಹಾಗೂ ಕರೊನಾ ವೈರಸ್​ನಿಂದ ದೇಶ ಮುಕ್ತವಾಗಲಿ ಎಂದು ಪ್ರಾರ್ಥನೆ ಮಾಡಲಾಗುತ್ತದೆ. ಅಯೋಧ್ಯೆಯಲ್ಲಿ ಆಗಸ್ಟ್ ಮೂರರಿಂದಲೇ ವಿವಿಧ ಮಂದಿರಗಳಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.

    48 ಕ್ಯಾಮರಾ, ನೇರ ಪ್ರಸಾರ

    ಅಯೋಧ್ಯೆಯ ಪ್ರಮುಖ ಬೀದಿಗಳು, ಶಿಲಾನ್ಯಾಸ ಸ್ಥಳ ಸೇರಿ ಪ್ರಮುಖ ಪ್ರದೇಶಗಳಲ್ಲಿ 48 ಹೈಟೆಕ್ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದೆ. ಡಿಡಿ ವಾಹಿನಿಯಲ್ಲಿ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಬಹುದಾಗಿದೆ. ಪಟ್ಟಣದ ಪ್ರಮುಖ ಪ್ರದೇಶಗಳಲ್ಲಿ ದೊಡ್ಡ ಪರದೆಯ ಮೇಲೆ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts