

ಭೋಪಾಲ್: ಮಾಸ್ಕ್ ಸರಿಯಾಗಿ ಧರಿಸದಿದ್ದರೆ ದಂಡ ವಿಧಿಸಬೇಕು ಅಥವಾ ಎಚ್ಚರಿಕೆ ನೀಡಬೇಕು. ಆದರೆ, ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದ್ದೇ ಬೇರೆ. ಮಾಸ್ಕ್ ಸರಿಯಾಗಿ ಧರಿಸದ ವ್ಯಕ್ತಿಯೊಬ್ಬನನ್ನು ಪೊಲೀಸರಿಬ್ಬರು ಹಿಗ್ಗಾಮುಗ್ಗಾ ಥಳಿಸಿ ಕ್ರೌರ್ಯತೆ ಮರೆದಿದ್ದಾರೆ.
ಆಟೋ ಚಾಲಕ ಕೃಷ್ಣ ಕೀಯೆರ್ (35) ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ತಂದೆಯನ್ನು ಭೇಟಿ ಮಾಡಲು ತೆರಳಿದ್ದರು. ಈ ವೇಳೆ ಮಾಸ್ಕ್ ಅನ್ನು ಸರಿಯಾಗಿ ಧರಿಸದೇ ಮೂಗಿನ ಕೆಳಗೆ ಜಾರಿಸಿಕೊಂಡಿದ್ದನ್ನು ಮಾರ್ಗ ಮಧ್ಯೆ ಪೊಲೀಸರು ಗಮನಿಸಿ ಅವರನ್ನು ತಡೆದಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಬರುವಂತೆ ಹೇಳಿದ್ದಾರೆ. ಆದರೆ, ಕೃಷ್ಣ ಅವರು ಠಾಣೆಗೆ ಬರಲು ನಿರಾಕರಿಸಿದಾಗ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ದೃಶ್ಯವನ್ನು ದಾರಿಹೋಕರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕೃಷ್ಣ ಅವರನ್ನು ನೆಲಕ್ಕೆ ಬೀಳಿಸಿ ಪೊಲೀಸರು ಕಾಲಿನಿಂದ ಜಾಡಿಸಿ ಒದೆಯುತ್ತಿರುವ ದೃಶ್ಯವಿದೆ. ಈ ವೇಳೆ ಕೃಷ್ಣ ಅವರು ನೋವಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಒದ್ದಾಡಿದರು. ಇದೇ ವೇಳೆ ಕೃಷ್ಣ ಜತೆ ಬಂದಿದ್ದ ಅವರ ಮಗ, ತಂದೆಗೆ ಪೊಲೀಸರು ಥಳಿಸುವುದನ್ನು ನೋಡಿ ಸಹಾಯಕ್ಕಾಗಿ ಕೂಗಿಕೊಂಡ ದೃಶ್ಯ ಮನಕಲಕುವಂತಿದೆ.
ಈ ಘಟನೆ ಹಾಡಹಗಲಲ್ಲೇ ನಡುರಸ್ತೆಯಲ್ಲೇ ನಡೆದಿದೆ. ಆದರೆ, ಯಾವೊಬ್ಬ ಸಾರ್ವಜನಿಕರು ಸಹ ಕೃಷ್ಣ ಅವರ ರಕ್ಷಣೆಗೆ ಮುಂದಾಗಲಿಲ್ಲ. ಬದಲಾಗಿ ಫೋಟೋ ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳುವುದರಲ್ಲಿ ಬಿಜಿಯಾಗಿದ್ದರು.
ಹಲ್ಲೆ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ಕಮಲ್ ಪ್ರಜಾಪತ್ ಮತ್ತು ಧರ್ಮೇಂದ್ರ ಜತ್ ಎಂದು ಗುರುತಿಸಲಾಗಿದೆ. ಆದರೆ, ಈವರೆಗೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಯಾವಾಗ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಯ್ತೋ ಆ ಬಳಿಕ ಇಬ್ಬರನ್ನು ಅಮಾನತ್ತು ಮಾಡಲಾಗಿದೆ.
ಕರೊನಾ ತಡೆಗಟ್ಟಲು ಮಾಸ್ಕ್ ಕಡ್ಡಾಯ ಎಂಬುದು ಎಲ್ಲರಿಗೂ ತಿಳಿದಿದೆ. ಅದರಲ್ಲೂ ದೇಶದಲ್ಲಿ ಎರಡನೇ ಅಲೆ ಇದೆ. ಈ ಸಮಯದಲ್ಲಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ಹಾಗಂತ ಮಾಸ್ಕ್ ಸರಿಯಾಗಿ ಧರಿಸದಿದ್ದರೆ ದಂಡ ವಿಧಿಸಬೇಕು. ಅದನ್ನು ಬಿಟ್ಟು ಹಿಗ್ಗಾಮುಗ್ಗಾ ಥಳಿಸುವುದೆಂದರೆ ಅದು ಮೃಗತ್ವಕ್ಕಿಂತ ಕಡೆ ಎನ್ನಬಹುದು. (ಏಜೆನ್ಸೀಸ್)