ಗುರುದ್ವಾರ ಕೆಡವಿ ಮಸೀದಿ ನಿರ್ಮಾಣ: ಪಾಕ್‌ ನಡೆಗೆ ಭಾರತದ ಪ್ರಬಲ ವಿರೋಧ

gurudwara
Published on

ಲಾಹೋರ್‌: ಸದಾ ಒಂದಿಲ್ಲೊಂದು ಕುತಂತ್ರ ಬುದ್ಧಿಯನ್ನು ತೋರಿಸುತ್ತಿರುವ ಪಾಕಿಸ್ತಾನ ಇದೀಗ ಲಾಹೋರ್‌ನಲ್ಲಿರುವ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತಿಸಲು ಮುಂದಾಗಿದೆ!

ಪಾಕಿಸ್ತಾನದಲ್ಲಿರುವ ನೂರಾರು ಗುರುದ್ವಾರಗಳನ್ನು ಕೆಡವಿ ಇದಾಗಲೇ ಮಸೀದಿ ನಿರ್ಮಾಣ ಮಾಡಿರುವ ಪಾಕಿಸ್ತಾನದ ನಡೆಗೆ ಭಾರತದಿಂದ ಪ್ರಬಲ ವಿರೋಧ ವ್ಯಕ್ತವಾಗಿದೆ.

ಲಾಹೋರ್‌ ನೌಲಾಕಾ ಬಜಾರ್‌ನಲ್ಲಿರುವ ಶಾಹಿದಿ ಆಸ್ಥಾನ್‌ ಗುರುದ್ವಾರವು ಭಾಯಿ ತರು ಸಿಂಗ್‌ಜಿ ಅವರ ಸಮಾಧಿ ಇರುವ ಪುಣ್ಯಸ್ಥಳವಾಗಿದ್ದು, ಇದನ್ನು ಕೆಡವಿ ಮಸೀದಿ ನಿರ್ಮಿಸಲು ಸನ್ನದ್ಧವಾಗಿದ್ದು, ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ ತಿಳಿಸಿದ್ದಾರೆ.

ಸಿಖ್‌ ಯುವತಿಯರನ್ನು ಅಪಹರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸುವುದು ಇಲ್ಲಿ ಮಾಮೂಲಾಗಿಬಿಟ್ಟಿದೆ. ಅಷ್ಟೇ ಅಲ್ಲದೇ ಗುರುದ್ವಾರಗಳನ್ನು ಆಕ್ರಮಿಸಿಕೊಂಡು ಅಲ್ಲಿ ಭೂಮಾಫಿಯಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇದೀಗ ಭಾಯಿ ತರು ಸಿಂಗ್‌ಜಿ ಅವರ ಸಮಾಧಿಯನ್ನು ಕೆಡುವುತ್ತಿರುವುದು ತುಂಬಾ ನೋವಿನ ಸಂಗತಿ. ಈ ಬಗ್ಗೆ ಸಿಖ್‌ ಸಮುದಾಯದವರು ತುಂಬಾ ನೋವಿನಲ್ಲಿ ಇರುವುದಾಗಿ ಅನುರಾಗ್‌ ಹೇಳುತ್ತಾರೆ.

1745ರಲ್ಲಿ ಭಾಯಿ ತರು ಸಿಂಗ್‌ಜಿ ಅವರು ಇಲ್ಲಿ ಸಮಾಧಿಯಾಗಿದ್ದಾರೆ. ಶತಮಾನಗಳಿಂದ ಇಲ್ಲಿ ಎಲ್ಲಾ ಸಿಖ್‌ ಧರ್ಮಿಯರು ಪೂಜೆ ಸಲ್ಲಿಸುತ್ತಿದ್ದಾರೆ. ದೇವರು ಎಂದು ಪ್ರಾರ್ಥಿಸುತ್ತಾರೆ. ಇಂಥ ಪುಣ್ಯಸ್ಥಳದಲ್ಲಿ ಪಾಕ್‌ನ ವರ್ತನೆ ಖಂಡನಾರ್ಹ ಎಂದಿದೆ ಭಾರತ.

ಪಾಕಿಸ್ತಾನದಲ್ಲಿ ಹಿಂದೂಗಳಾಗಿರುವ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಲೆ ಇದೆ. ಇದೇ ಕಾರಣಕ್ಕೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಕುಸಿಯುತ್ತಿದೆ. ಭಾರತ ಕೂಡ ಅಲ್ಲಿನ ಅಲ್ಪಸಂಖ್ಯಾತರಿಗೆ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಅವರಿಗೆ ಪೌರತ್ವ ನೀಡುವುದಾಗಿ ಘೋಷಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net