ಕಲ್ಲಣಬೆಗೆ ಭಾರಿ ಡಿಮ್ಯಾಂಡ್

Mashroom
Published on

-ಹರಿಪ್ರಸಾದ್ ನಂದಳಿಕೆ ಕಾರ್ಕಳ

ಮಳೆಗಾಲ ಆರಂಭವಾಗುತ್ತಿದ್ದಂತೆ ತುಳುನಾಡಿನಾದ್ಯಂತ ಕಲ್ಲಣಬೆಗೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಕಾಡು ಪ್ರದೇಶದಲ್ಲಿ ಪೊದೆಗಳಲ್ಲಿ ಮಣ್ಣ ಅಡಿಯಲ್ಲಿ ಸಿಗುವ ಕಲ್ಲಣಬೆಗೆ ಇದೀಗ ನಗರದ ಮಾರುಕಟ್ಟೆಯಲ್ಲೂ ಬೇಡಿಕೆ ಇದ್ದರೂ ಬೇಡಿಕೆಯಷ್ಟು ಅಣಬೆಗಳು ಸಿಗುತ್ತಿಲ್ಲ.

ಮಲೆನಾಡ ತಪ್ಪಲಿನ ಭಾಗಗಳಲ್ಲಿ ಗುಡುಗಿನೊಡನೆ ಬರುವ ಮೊದಲ ಮುಂಗಾರು ಮಳೆಯ ಸಂದರ್ಭದಲ್ಲಿ ಕಲ್ಲಣಬೆ ನೆಲದೊಳಗೆ ಮೊಳಕೆಯೊಡೆಯುವುದು ವಾಡಿಕೆ. ಈ ಬಾರಿ ಮುಂಗಾರು ಮಳೆ ತಡವಾಗಿ ಆರಂಭವಾದ ಹಿನ್ನೆಲೆಯಲ್ಲಿ ಕಲ್ಲಣ ಕೂಡ ತಡವಾಗಿ ಮೊಳಕೆಯೊಡೆದಿದೆ.

ಹಳ್ಳಿಗಳಲ್ಲಿ ಅಣಬೆ ಪ್ರಿಯರು ಚೂಪಾದ ಕಟ್ಟಿಗೆ, ಕತ್ತಿ ಹಾಗೂ ಚೀಲವನ್ನು ಹಿಡಿದುಕೊಂಡು ಹಳ್ಳಿಗಳಲ್ಲಿ ಪೊದೆಯ ಬದಿಗಳಲ್ಲಿ ಜೌಗು ಮಣ್ಣಿನ ಪ್ರದೇಶಗಳಲ್ಲಿ ಕಲ್ಲಣಬೆ ಹುಡುಕುವ ದೃಶ್ಯ ಸಾಮಾನ್ಯ. ರಜಾ ಸಮಯದಲ್ಲಿ ವಿದ್ಯಾರ್ಥಿಗಳು ಕೂಡ ಅಣಬೆ ಹೆಕ್ಕಲು ಹೋಗುತ್ತಾರೆ. ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಅಣಬೆ ಸಿಗದೆ ಜನ ನಿರಾಶೆಗೊಂಡಿದ್ದಾರೆ. ಕಾರ್ಕಳ ತಾಲೂಕಿನ ಬೋಳ, ನಿಟ್ಟೆ, ಎಳ್ಳಾರೆ, ಶಿರ್ಲಾಲು, ಕೆರ್ವಾಶೆ, ಬೆಳ್ಮಣ್, ಮಿಯ್ಯರು, ಹೊಸ್ಮಾರು ,ಈದು ಬಜಗೋಳಿ ಕಡೆಗಳಲ್ಲಿ ಹಳ್ಳಿಯ ಜನರು ಕಾಡಿನ ಅಂಚಿನ ಭಾಗಗಳಲ್ಲಿ ಗುಂಪಾಗಿ ಸೇರಿಕೊಂಡು ಹುಡುಕುತ್ತಾ ಸಾಗುತ್ತಿರುವುದು ಕಂಡುಬರುತ್ತಿದೆ. ಆದರೂ ಕಲ್ಲಣಬೆ ಅಲ್ಲೊಂದು ಇಲ್ಲೊಂದು ಮಾತ್ರ ದೊರಕುತ್ತಿದೆ.

ದುಬಾರಿ ಬೆಲೆ

ಕಳೆದ ಬಾರಿ ಕಲ್ಲಣಬೆ ಒಂದು ಸೇರಿಗೆ ಗ್ರಾಮೀಣ ಭಾಗದಲ್ಲಿ 600-800 ರೂಪಾಯಿಗೆ ಮಾರಾಟವಾಗಿದ್ದು, ನಗರ ಪ್ರದೇಶದಲ್ಲಿ 1000 ರೂ. ತನಕ ಬೆಲೆಯಿತ್ತು. ಆದರೆ ಈ ಬಾರಿ ಮಳೆ ತಡವಾದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಕಲ್ಲಣಬೆ ಸಿಗದೆ ನಗರದ ಮಾರುಕಟ್ಟೆಯಲ್ಲಿ ಒಂದು ಸೇರಿಗೆ 1000 ದಿಂದ 1500 ರೂ. ವರೆಗೆ ಮಾರಾಟವಾಗುತ್ತಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಜನರು ಅಣಬೆಯನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಸೆಖೆ ಏರುಪೇರಿನಿಂದಾಗಿ ನಿರೀಕ್ಷಿತ ಇಳುವರಿಯಿಲ್ಲ ಎನ್ನುವುದು ಗ್ರಾಮೀಣ ಭಾಗದ ಜನರ ಮಾತು.

Mashroom 2

ಕಳೆದ ಎರಡು ವರ್ಷಗಳಲ್ಲಿ ಬೇಸಗೆಯಲ್ಲೇ ಸಾಕಷ್ಟು ಮಳೆ ಸುರಿದಿದ್ದರಿಂದ ಮಳೆಗಾಲ ಶುರುವಾಗುವ ಮೊದಲೇ ಕಲ್ಲಣಬೆ ಮಾರುಕಟ್ಟೆ ಪ್ರವೇಶಿಸಿತ್ತು. ಕರಾವಳಿ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯೆ ಸುರಿದಿಲ್ಲ. ಭೂಮಿ ತಂಪಾದರೆ ಮಾತ್ರ ಕಲ್ಲಣಬೆ ಹುಟ್ಟುತ್ತದೆ. ಈ ಬಾರಿ ಹಾಗಾಗಿಲ್ಲ. ಎಲ್ಲಿ ನೋಡಿದರೂ ಕಲ್ಲಣಬೆ ಕಣ್ಣಿಗೆ ಗೋಚರಿಸುತ್ತಿಲ್ಲ. ಹೀಗಾಗಿ ಬೇಡಿಕೆ ಇದ್ದರೂ ಪೂರೈಕೆ ಮಾಡಲು ಆಗುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕಲ್ಲಣಬೆ ರುಚಿಯನ್ನು ಸವಿದಿರುವ ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಮುಂಬಯಿ, ಬೆಂಗಳೂರು ಮತ್ತಿತರ ನಗರಗಳಲ್ಲಿ ವಾಸಿಸುವ ಜನರು 2000 ರೂ. ನೀಡಿ ಬುಕ್ಕಿಂಗ್ ಮಾಡಲು ಸಿದ್ಧರಾಗಿದ್ದಾರೆ. ಬುಕ್ಕಿಂಗ್ ಮಾಡಿದರೂ ಕಲ್ಲಣಬೆ ಸಿಗುತ್ತಿಲ್ಲ.

ಸೇವಿಸುವಾಗ ಎಚ್ಚರಿಕೆ ಅಗತ್ಯ

ಬಿಳಿ ಬಣ್ಣದ ಕಲ್ಲಣಬೆಯನ್ನು ಸೇವಿಸಬಹುದು. ಅದರೆ ತಿಳಿ ಕಂದು ಬಣ್ಣದಲ್ಲಿರುವ ಕಲ್ಲಣಬೆ ವಿಷಕಾರಿಯಾಗಬಹುದು. ಸೇವಿಸುವ ಮುನ್ನ ಎಚ್ಚರಿಕೆ ವಹಿಸುವುದು ಅಗತ್ಯ. ಬೇರೆ ಅಣಬೆಯನ್ನು ಸೇವಿಸುವಾಗಲೂ ಎಚ್ಚರಿಕೆ ಅಗತ್ಯ. ಕೆಲವೊಂದು ವಿಷಕಾರಿ ಅಣಬೆಗಳಿರುವುದರಿಂದ ಸರಿಯಾಗಿ ಎಚ್ಚರಿಕೆಯಿಂದ ಅಣಬೆಯನ್ನು ಸೇವಿಸಬೇಕಾಗುತ್ತದೆ.

ಹೊರ ಜಿಲ್ಲೆ, ಹೊರರಾಜ್ಯದ ಜನ ಕಲ್ಲಣಬೆಯ ಸವಿಯುಂಡು ಇದೀಗ ಬುಕ್ಕಿಂಗ್ ಮಾಡಲು ಮುಂದಾಗಿದ್ದಾರೆ. ಆದರೆ ಲಭ್ಯತೆ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಬುಕ್ಕಿಂಗ್ ಮಾಡುವುದಿಲ್ಲ.ಕಲ್ಲಣಬೆಗೆ ಬಹಳ ಡಿಮ್ಯಾಂಡ್ ಇದೆ.-ಮಹಾವೀರ ಜೈನ್, ವ್ಯಾಪಾರಿ

ಈ ಬಾರಿ ಕಳೆದ ಒಂದು ವಾರದಲ್ಲಿ ಒಂದು ಬಾರಿ ಮಾತ್ರ ಕಲ್ಲಣಬೆ ಮಾರಾಟಕ್ಕೆ ಬಂದಿದೆ. ಸೇರೊಂದಕ್ಕೆ 1500 ರೂ. ಬೆಲೆಗೆ ಮಾರಾಟವಾಗಿದೆ. ಲಭ್ಯತೆ ಹೆಚ್ಚಾದರೆ ದ ಇಳಿಯಬಹುದು. ಬೇಡಿಕೆ ಹೆಚ್ಚಿದ್ದರೆ ದರ ಏರಿಕೆ ಕಾಣುತ್ತದೆ. ಬೇಡಿಕೆಯಷ್ಟು ದೊರಕುತ್ತಿಲ್ಲ.-ಪ್ರಮೋದ್ ಹೆಗ್ಡೆ ವ್ಯಾಪಾರಸ್ಥರು

ಪ್ರತಿ ವರ್ಷ ಮುಂಗಾರು ಆರಂಭವಾಗುತ್ತಿದ್ದಂತೆ ಕಲ್ಲಣಬೆ ಸಿಗುತ್ತಿತ್ತು. ಆದರೆ ಈ ಬಾರಿ ಬೇಡಿಕೆಯಿದ್ದರೂ ಕಲ್ಲಣಬೆ ಸಿಗುತ್ತಿಲ್ಲ. ಗ್ರಾಮೀಣ ಭಾಗದ ಜನರಿಗಿಂತ ಪಟ್ಟಣದ ಜನ ಹೆಚ್ಚಾಗಿ ಕಲ್ಲಣಬೆಯನ್ನು ಕೇಳುತ್ತಿದ್ದಾರೆ.-ನಿಕಿತ್ ಎಳ್ಳಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net