'ಮೇರಿ' ಟ್ರೇಲರ್​ ಬಿಡುಗಡೆ … ಫೆಬ್ರವರಿ 24ಕ್ಕೆ ಚಿತ್ರ ತೆರೆಗೆ

Mary 1
Published on

ಬೆಂಗಳೂರು: ಅದಿತಿ ಪ್ರಭುದೇವ ಅಭಿನಯದ ‘ಆನ’ ಚಿತ್ರದ ಮೂಲಕ ನಿರ್ದೇಶಕರಾದವರು ಮನೋಜ್ ಪಿ ನಡಲುಮನೆ. ಆ ಚಿತ್ರದ ನಂತರ ಅವರು ಸದ್ದಿಲ್ಲದೆ ಇನ್ನೊಂದು ಚಿತ್ರವನ್ನು ಮಾಡಿ ಮುಗಿಸಿದ್ದಾರೆ. 'ಮೇರಿ' ಹೆಸರಿನ ಈ ಚಿತ್ರದ ಟ್ರೇಲರ್​ ಇತ್ತೀಚೆಗೆ ಬಿಡುಡೆಯಾಗಿದೆ.

ಪಶ್ಚಿಮ ಘಟ್ಟದ ಗ್ರಾಮಾಂತರ ಠಾಣೆಯಲ್ಲಿ ನಡೆಯುವ ಒಂದು ಕಥೆಯೇ 'ಮೇರಿ' ಚಿತ್ರದ ಹೈಲೈಟ್​. ಈ ಚಿತ್ರದ ಕುರಿತು ಮಾತನಾಡುವ ಮನೋಜ್, 'ಇದೊಂದು ಥ್ರಿಲ್ಲರ್​ ಚಿತ್ರ. ಪೊಲೀಸ್ ಠಾಣೆಯಲ್ಲಿ ನಡೆಯುವ ಘಟನೆಯ ಸುತ್ತ ಈ ಚಿತ್ರ ಸುತ್ತುತ್ತದೆ. ಚಿಕ್ಕಮಗಳೂರು ಜಿಲ್ಲೆಯ ಕಾಡು ಮಧ್ಯದಲ್ಲಿರುವ ಒಂದು ಗ್ರಾಮದ ಪೊಲೀಸ್ ಠಾಣೆಗೆ ಹೊಸದಾಗಿ ಅಪಾಯಿಂಟ್ ಆದ ಎಸ್ಐ ಮುಂದೆ ಒಂದು ಹುಡುಗಿ ತನ್ನ ಮೇಲೆ ರೇಪ್ ಆಗಿದೆ ಎಂದು ಹೇಳುತ್ತಾರೆ. ಆ ದಿನ ಏನೆಲ್ಲಾ ನಡೆಯುತ್ತದೆ ಎನ್ನುವುದೇ ಚಿತ್ರದ ಕಥೆ' ಎನ್ನುತ್ತಾರೆ ಮನೋಜ್​.

'ಮೇರಿ' ಚಿತ್ರದಲ್ಲಿ ವಿಕಾಶ್ ಉತ್ತಯ್ಯ, ಅನೂಷ ಕೃಷ್ಣ, ಚೇತನ್ ವಿಕ್ಕಿ, ತೇಜಸ್ವಿನಿ ಶರ್ಮಾ, ಸಂದೀಪ್ ನೀನಾಸಂ, ಭಾರ್ಗವ್ ವೆಂಕಟೇಶ್, ಸುಶಾಂತ್, ದೀಪಕ್ ಗೌಡ ಹೀಗೆ ಸಾಕಷ್ಟು ಜನ ಚಿತ್ರದಲ್ಲಿ ನಟಿಸಿದ್ದಾರೆ.

ವಿಕಾಶ್ ಉತ್ತಯ್ಯ ಈ ಚಿತ್ರದಲ್ಲಿ ಎಸ್.ಐ ಪಾತ್ರ ಮಾಡಿದ್ದಾರಂತೆ. 'ಎರಡನೆಯ ಲಾಕ್​ಡೌನ್​ನಲ್ಲಿ ಮನೋಜ್ ಈ ಚಿತ್ರದ ಸ್ಕ್ರಿಪ್ಟ್ ರೆಡಿ ಮಾಡಿದ್ದರು. ತುಂಬಾ ವಿಭಿನ್ನವಾಗಿ ಸಿನಿಮಾ ಮೂಡಿ ಬಂದಿದೆ' ಎಂದರೆ, 'ನನ್ನ ಪಾತ್ರ ಏನು ಎಂದು ಸಿನಿಮಾ ನೋಡಿ. ಬಹಳ ವಿಭಿನ್ನವಾಗಿ ಮೂಡಿ ಬಂದಿದೆ' ಎಂದು ಹೇಳಿದರು. ಇನ್ನು, ಅನೂಷ ಕೃಷ್ಣ ಕಥೆ ಕೇಳಿ ಒಂದು ಪಾತ್ರವನ್ನು ತಾವೇ ಮಾಡಬೇಕು ಎಂದು ಹಠ ಮಾಡಿದರಂತೆ.

'ಮೇರಿ' ಚಿತ್ರವನ್ನು ರನ್ವಿತ್ ಶಿವಕುಮಾರ್ ಎನ್ನುವವರು ನಿರ್ಮಿಸಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ಸೂರಜ್ ಜೋಯ್ಸ್ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net