'ಲಂಕಾಸುರ'ನ ಜತೆಗೆ 'ಮಾಡರ್ನ್ ಮಹಾಲಕ್ಷ್ಮೀ' … ಹಾಡು ಬಿಡುಗಡೆ ಮಾಡಿದ ಕನಸಿನ ರಾಣಿ

Lankasura - Modern Mahalakshmi 1
Published on

ಬೆಂಗಳೂರು: ವಿನೋದ್ ಪ್ರಭಾಕರ್ ಹೊಡೆದಾಡುವುದನ್ನು ಹಲವು ಚಿತ್ರಗಳಲ್ಲಿ ನೋಡಿರಬಹುದು. ಆದರೆ, ಅವರು ಡ್ಯಾನ್ಸ್ ಮಾಡಿದ್ದು ಕಡಿಮೆಯೇ. ಈಗ 'ಲಂಕಾಸುರ' ಚಿತ್ರದ 'ಮಾಡರ್ನ್​ ಮಹಾಲಕ್ಷ್ಮೀ' ಎಂಬ ಹಾಡಿನಲ್ಲಿ ವಿನೋದ್​ ಡ್ಯಾನ್ಸ್​ ಮಾಡುವುದನ್ನು ನೋಡಬಹುದು.

'ಲಂಕಾಸುರ' ಚಿತ್ರವು ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಾಗಲೇ ಚಿತ್ರದ ಹಾಡು ಮತ್ತು ಟೀಸರ್​ ಬಿಡುಗಡೆಯಾಗಿದೆ. ಈಗ 'ಮಾಡರ್ನ್ ಮಹಾಲಕ್ಷ್ಮೀ' ಎಂಬ ಇನ್ನೊಂದು ಹಾಡನ್ನು ಮಾಲಾಶ್ರೀ, ಶನಿವಾರ ಬಿಡುಗಡೆ ಮಾಡಿದ್ದಾರೆ. ಅವರ ಜತೆಗೆ ಶ್ರೀನಗರ ಕಿಟ್ಟಿ ಮತ್ತು ಶ್ರುತಿ ಸಹ ಇದ್ದಿದ್ದು ವಿಶೇಷ. ಈ ಹಾಡನ್ನು 'ಬಹದ್ದೂರ್​' ಚೇತನ್​ ಬರೆದರೆ, ವಿಜೇತ್​ ಕೃಷ್ಣ ಹಾಡಿದ್ದಾರೆ. ಯೂಟ್ಯೂಬ್​ನ ಎ2 ಮ್ಯೂಸಿಕ್​ ಚಾನಲ್​ನಲ್ಲಿ ಈ ಹಾಡು ಬಿಡುಗಡೆಯಾಗಿದೆ.

ಹಾಡು ಬಿಡುಗಡೆ ಮಾಡಿ ಮಾತನಾಡಿದ ಮಾಲಾಶ್ರೀ, 'ನಾನು ವಿನೋದ್ ಪ್ರಭಾಕರ್ ಅವರ ದೊಡ್ಡ ಅಭಿಮಾನಿ. ಅವರು ಮಾಡುವ ಸಾಹಸ ಸನ್ನಿವೇಶಗಳು ನನಗೆ ತುಂಬಾ ಇಷ್ಟ. ಚಿತ್ರ ಭರ್ಜರಿ ಯಶಸ್ಸು ಕಾಣಲಿ' ಎಂದು ಹಾರೈಸಿದರು.

ಈ ಚಿತ್ರದ ಕುರಿತು ಮಾತನಾಡಿದ ವಿನೋದ್​, 'ಕರೊನ ಬರುವ ಮುಂಚೆ ರಾಘವ ಮುನಿಸ್ವಾಮಿ ಅವರು ನನಗೆ ಅಡ್ವಾನ್ಸ್ ನೀಡಿ 'ಲಂಕಾಸುರ' ಚಿತ್ರ ಆರಂಭಿಸಿದ್ದರು. ಆನಂತರ ಕಾರಣಾಂತರದಿಂದ ನಾವೇ ಟೈಗರ್ ಟಾಕೀಸ್ ಸಂಸ್ಥೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದೆವು. ನನ್ನ ಇಡೀ ಚಿತ್ರತಂಡದ ಸಹಕಾರ ಮರೆಯಲು ಸಾಧ್ಯವಿಲ್ಲ‌. ಎಲ್ಲರೂ ಇಷ್ಟಪಡುವ ಚಿತ್ರ ಮಾಡಿದ್ದೇವೆ‌. ನೋಡಿ ಪ್ರೋತ್ಸಾಹ ನೀಡಿ' ಎಂದರು.

'ಲಂಕಾಸುರ' ಚಿತ್ರವನ್ನು ಟೈಗರ್ ಟಾಕೀಸ್ ಮೂಲಕ ನಿಶಾ ವಿನೋದ್ ಪ್ರಭಾಕರ್ ನಿರ್ಮಿಸಿದ್ದು, ಪ್ರಮೋದ್​ ಕುಮಾರ್​ ನಿರ್ದೇಶನ ಮಾಡಿದ್ದಾರೆ. ಸುಜ್ಞಾನ್ ಛಾಯಾಗ್ರಹಣ ಮತ್ತು ವಿಜೇತ್​ ಕೃಷ್ಣ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net