

| ದ್ವಾರಕಾನಾಥ್ ಎಲ್. ಬೆಂಗಳೂರು
ಕರೊನಾ ಕಾಟದಿಂದಾಗಿ ಪ್ರಮುಖ ಮಾರುಕಟ್ಟೆಗಳು ಬಂದ್ ಆದ ಪರಿಣಾಮ ತೊಂದರೆಗೀಡಾದ ಹಣ್ಣು, ತರಕಾರಿ ಸಗಟು ವ್ಯಾಪಾರಿಗಳು ಹಾಗೂ ಆಟೋ ಚಾಲಕರು ಈಗ ಬದಲಾದ ಸ್ವರೂಪದಲ್ಲಿ ಹೊಸ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಪ್ರಮುಖ ಬಡಾವಣೆಗಳ ಹೊಸ ಜಾಗವನ್ನೇ ಮಾರುಕಟ್ಟೆ ಮಾಡಿಕೊಂಡಿರುವ ಸಗಟು ವ್ಯಾಪಾರಿಗಳು ಹೂವು, ಹಣ್ಣು, ತರಕಾರಿ ಮಾರಾಟ ಮಾಡುವ ಕಾಯಕ ಕಂಡುಕೊಂಡಿದ್ದಾರೆ. ಇವರ ಜತೆಗೆ ದುಡಿಮೆ ಇಲ್ಲದೆ ಪರಿತಪಿಸುತ್ತಿದ್ದ ಸಾವಿರಾರು ಆಟೋ ಚಾಲಕರು ಆಟೋವನ್ನು ತರಕಾರಿ ಮಾರಾಟ ಮಾಡುವುದಕ್ಕೆ ಅನುಕೂಲವಾಗುವಂತೆ ಪರಿವರ್ತಿಸಿಕೊಂಡು ಜೀವನೋಪಾಯ ಕಂಡುಕೊಂಡಿದ್ದಾರೆ.
ಜೀವನಕ್ಕೊಂದು ಕೆಲಸ: ಕರೊನಾ ತಡೆಗಾಗಿ ಸರ್ಕಾರ ವಿಧಿಸಿರುವ ಅನೇಕ ನಿರ್ಬಂಧಗಳು ಉದ್ಯಮಗಳಿಗೆ ಆಘಾತ ನೀಡಿದರೂ ವೈದ್ಯಕೀಯ ಸೌಲಭ್ಯ, ಕಿರಾಣಿ ಅಂಗಡಿ ಹಾಗೂ ಹಣ್ಣು ತರಕಾರಿ ವ್ಯಾಪಾರಕ್ಕೆ ತೊಡಕಾಗಿಲ್ಲ. ಹೆಚ್ಚಿನ ಕೌಶಲ, ಬಂಡವಾಳ ಅಗತ್ಯವಿಲ್ಲದ, ನಾಗರಿಕರಿಗೆ ಅತ್ಯಗತ್ಯವಾದ ಈ ಕ್ಷೇತ್ರ ಸಾವಿರಾರು ಜನರ ಬದುಕಿಗೆ ಆಶ್ರಯ ಕಲ್ಪಿಸಿದೆ. ಕರೊನಾ ಪ್ರಕರಣ ಹೆಚ್ಚಳ ಕಾರಣಕ್ಕೆ ಕೃಷ್ಣರಾಜೇಂದ್ರ ಮಾರುಕಟ್ಟೆ, ಕಲಾಸಿಪಾಳ್ಯ ಹಣ್ಣಿನ ಮಾರುಕಟ್ಟೆ ಬಂದ್ ಆಗಿವೆ. ಕೆಲವರಷ್ಟೇ ಹೊಸೂರು ರಸ್ತೆಯ ಸಿಂಗೇನ ಅಗ್ರಹಾರ ಮಾರುಕಟ್ಟೆಗೆ ವ್ಯಾಪಾರ ಮಾಡಲು ಹೋಗಿದ್ದಾರೆ.
ಅಲ್ಲೂ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಅನೇಕ ಸಗಟು ತರಕಾರಿ, ಹಣ್ಣು, ಹೂವು ವ್ಯಾಪಾರಿಗಳೂ ಚಿಲ್ಲರೆ ವ್ಯಾಪಾರಕ್ಕೆ ಮುಂದಾಗಿದ್ದಾರೆ.
ರಸ್ತೆ ರಸ್ತೆಯೂ ಮಾರುಕಟ್ಟೆ: ಹೂವು, ಹಣ್ಣು,ತರಕಾರಿ ಸಗಟು ಮಾರಾಟಕ್ಕೆಂದು ಪ್ರತ್ಯೇಕ ಮಾರುಕಟ್ಟೆ ನಿರ್ವಿುಸಲಾಗಿದ್ದರೂ ರೈತರು ಬೆಳೆದ ಹೂವು, ಉತ್ಪನ್ನಗಳು ಮಾರುಕಟ್ಟೆಗೆ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ವರ್ತಕರು ಮನೆಯ ಬಳಿ ಮಳಿಗೆಗಳನ್ನೇ ಬಾಡಿಗೆ ಪಡೆದು ಹೂವು, ಹಣ್ಣು, ತರಕಾರಿ ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲವರು ಬೀದಿ ಬದಿಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆ. ಈ ಹಿಂದೆ ಒಬ್ಬಿಬ್ಬರು ಸಣ್ಣ ಪ್ರಮಾಣದಲ್ಲಿ ತರಕಾರಿ ಮಾರುತ್ತಿದ್ದ ಸ್ಥಳಗಳಲ್ಲಿ 25-30 ವ್ಯಾಪಾರಿಗಳು ಗಾಡಿಗಳಲ್ಲಿ, ನೆಲದ ಮೇಲೆ, ಆಟೊಗಳಲ್ಲಿ ವ್ಯಾಪಾರ ಆರಂಭವಾಗಿದೆ. ಗಿರಿನಗರ, ಆವಲಹಳ್ಳಿ ಮುಖ್ಯರಸ್ತೆ, ಶಾಂತಿನಗರ, ಮೈಸೂರು ರಸ್ತೆ, ಮಾಗಡಿರಸ್ತೆ, ಯಲಹಂಕರಸ್ತೆ, ಮಹಾಲಕ್ಷ್ಮಿಲೇಔಟ್, ತುಮಕೂರು ರಸ್ತೆ ಸೇರಿ ಬಹುತೇಕ ಪ್ರದೇಶಗಳಲ್ಲಿ ಈ ರೀತಿಯ ವ್ಯಾಪಾರಗಳು ಕಂಡುಬರುತ್ತಿವೆ. ಶ್ರಾವಣ ಮಾಸದಿಂದ ಸಾಲು ಸಾಲು ಹಬ್ಬಗಳು ಆರಂಭವಾಗಲಿವೆ. ಆದರೆ ಕರೊನಾ ಸೋಂಕಿನಿಂದ ಬಂದ್ ಆಗಿರುವ ಮಾರುಕಟ್ಟೆ ಪುನರಾರಂಭ ಆಗುವುದು ಅನುಮಾನ.
ಕರೊನಾ ಹೆಚ್ಚಾಗುತ್ತಿದ್ದರೂ ಅದರ ಜತೆಗೆ ಜೀವನ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಲಾಕ್ಡೌನ್ನಿಂದಾಗಿ ಜನರಿಗೂ ದೂರದ ಮಾರುಕಟ್ಟೆಗೆ ತೆರಳಲು ಸಾಧ್ಯವಿಲ್ಲದ ಕಾರಣ ಮನೆಯ ಹತ್ತಿರ ಹೊಸ ಮಾರುಕಟ್ಟೆಗಳು ನಿರ್ವಣವಾಗಿವೆ. ಅನೇಕರ ಜೀವನಕ್ಕೆ ಸಹಕಾರಿಯಾಗಿವೆ. | ದಿನೇಶ್ ಹೂವಿನ ಸಗಟು ವ್ಯಾಪಾರಿ
ಆಟೋಗಳ ರೂಪಾಂತರ
ಬೆಂಗಳೂರಿನಲ್ಲಿ 50 ಸಾವಿರಕ್ಕೂ ಹೆಚ್ಚು ಪ್ರಯಾಣಿಕ ಆಟೋಗಳು 2 ಲಕ್ಷಕ್ಕೂ ಹೆಚ್ಚು ಜನರ ಜೀವನೋಪಾಯಕ್ಕೆ ದಾರಿಯಾಗಿದ್ದವು. ಆದರೆ ಲಾಕ್ಡೌನ್ನಿಂದಾಗಿ ಆಟೋ ಸಂಚಾರ ಸಂಪೂರ್ಣ ಸ್ಥಗಿತವಾದವು. ಲಾಕ್ಡೌನ್ ತೆರವಾಗಬಹುದು ಎಂದು ಕಾದ ಕೆಲವರು ಇದೀಗ ಅದೇ ಕಾಯಕ ಮುಂದುವರಿಸಿದ್ದಾರೆ. ಆದರೆ ಸಾವಿರಾರು ಪ್ರಯಾಣಿಕ ಆಟೋಗಳು ತರಕಾರಿ ಮಾರುವ ಆಟೋಗಳಾಗಿ ರೂಪಾಂತರಗೊಂಡಿವೆ. ಆಟೊ ಮೇಲ್ಛಾವಣಿ ಹಾಗೂ ಹಿಂಬದಿ ಆಸನವನ್ನು ತೆರವುಗೊಳಿಸಿ ಅಗಲವಾದ ಚೌಕಟ್ಟನ್ನು ನಿರ್ವಿುಸಿಕೊಂಡಿದ್ದಾರೆ. ಅದರಲ್ಲಿ ಹಣ್ಣು, ತರಕಾರಿಗಳನ್ನು ಭರ್ತಿ ಮಾಡಿಕೊಂಡು ಸಣ್ಣ ಪುಟ್ಟ ರಸ್ತೆಗಳಲ್ಲಿ ಸಂಚರಿಸುತ್ತ ಹಾಗೂ ಹೊಸ ಮಾರುಕಟ್ಟೆಗಳಲ್ಲಿ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ.