ಸದ್ಯದಲ್ಲೇ ಸೆನ್ಸಾರ್​ ಅಂಗಳಕ್ಕೆ ದಿಗಂತ್​ ಅಭಿನಯದ 'ಮಾರಿಗೋಲ್ಡ್​' ...

Marigold - Final
Published on

ಬೆಂಗಳೂರು: ದಿಗಂತ್‌ ಅಭಿನಯದ ಚಿತ್ರ 'ಮಾರಿಗೋಲ್ಡ್' ಚಿತ್ರದ ಚಿತ್ರೀಕರಣ ಎರಡನೆಯ ಲಾಕ್​ಡೌನ್​ಗೂ ಮೊದಲೇ ಮುಗಿದಿತ್ತು. ಇದೀಗ ಪೋಸ್ಟ್‌ ‌ಪ್ರೊಡಕ್ಷನ್ ಕೆಲಸಗಳು ಕೊನೆಯ ಹಂತದಲ್ಲಿದ್ದು, ಸದ್ಯದಲ್ಲೇ ಸೆನ್ಸಾರ್ ಅಂಗಳಕ್ಕೆ ಹೋಗಲು ಸಿದ್ಧವಾಗಿದೆ.

ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಕಥೆ ಹೊಂದಿರುವ 'ಮಾರಿಗೋಲ್ಡ್​' ಚಿತ್ರವನ್ನು ರಾಘವೇಂದ್ರ ಎಂ.ನಾಯಕ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ರಾಘವೇಂದ್ರ ನಾಯಕ್ ಅವರಿಗೆ ಮೊದಲ ನಿರ್ದೇಶನದ ಚಿತ್ರ. ಈ ಹಿಂದೆ 'ತಿಮ್ಮರಾಯ', 'ಬದ್ರಿ', 'ಗುಣವಂತ', 'ಮಿಸ್ಟರ್ ಎಲ್.ಎಲ್.ಬಿ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ರಘುವರ್ಧನ್​, ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಘುವರ್ಧನ್‌ ಮೂಲತಃ ನಿರ್ದೇಶಕರಾಗಿದ್ದರೂ, ರಾಘವೇಂದ್ರ ಎಂ.ನಾಯಕ್‌ ಅವರು ಮಾಡಿಕೊಂಡಿದ್ದ ಕಥೆ ಚೆನ್ನಾಗಿದ್ದರಿಂದ, ಚಿತ್ರವನ್ನು ಅವರೇ ನಿರ್ದೇಶಿಸಲಿ ಎಂದು ರಘುವರ್ಧನ್‌ ಅವಕಾಶ ನೀಡಿದ್ದಾರೆ.

'ಮಾರಿಗೋಲ್ಡ್' ಚಿತ್ರದಲ್ಲಿ ದಿಗಂತ್​ ಮೊದಲ ಬಾರಿಗೆ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ನಾಯಕಿಯಾಗಿ ಸಂಗೀತಾ ಶೃಂಗೇರಿ ಅಭಿನಯಿಸಿದ್ದಾರೆ. ಉಳಿದಂತೆ ಸಂಪತ್‌ಕುಮಾರ್‌, 'ಕಾಕ್ರೋಚ್‌' ಸುಧಿ, ಯಶ್‌ ಶೆಟ್ಟಿ, ಬಾಲ ರಾಜ್ವಾಡಿ, ಮನಮೋಹನ್ ರೈ, ಮಿಮಿಕ್ರಿ ಗೋಪಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಈ ಚಿತ್ರಕ್ಕೆ ವೀರ್ ಸಮರ್ಥ್ ಅವರ ಸಂಗೀತವಿದ್ದು, ಯೋಗರಾಜ್ ಭಟ್, ಕವಿರಾಜ್ ಮತ್ತು ವಿಜಯ್ ಭರಮಸಾಗರ ಅವರು ಸಾಹಿತ್ಯ ಬರೆದಿದ್ದಾರೆ. ಕೆ.ಎಸ್.ಚಂದ್ರಶೇಖರ್ ಕ್ಯಾಮೆರಾ ಹಿಡಿದರೆ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಚಿತ್ರ ಆದಷ್ಟು ಬೇಗ ಸೆನ್ಸಾರ್​ ಆಗಿ, ಇದೇ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net