

ಆಂಧ್ರಪ್ರದೇಶ: ಟಾಲಿವುಡ್ನ ನಟ ಜೂ.ಎನ್‌ಟಿಆರ್ ಅಭಿನಯದ ಬಹುನಿರೀಕ್ಷಿತ, ಪ್ಯಾನ್ ಇಂಡಿಯಾ ದೇವರ ಸಿನಿಮಾ ಬಗ್ಗೆ ಸದ್ಯ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿದ್ದು, ಚಿತ್ರದ ಬಿಡುಗಡೆಗೆ ತೀವ್ರ ಕಾತರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಸಿನಿಮಾದ ಬಹುಮುಖ್ಯ ಭಾಗದ ಚಿತ್ರೀಕರಣಗಳು ಭರದಿಂದ ಸಾಗುತ್ತಿದ್ದು, ಚಿತ್ರದಲ್ಲಿ ವಿಎಫ್ಎಕ್ಸ್ ಕೆಲಸಗಳು ಹೆಚ್ಚು ಸದ್ದು ಮಾಡಲಿದೆ ಎಂದು ಹೇಳಲಾಗುತ್ತಿದೆ.
ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬಂದ ದೇವರದಲ್ಲಿ ಎನ್ಟಿಆರ್ಗೆ ನಾಯಕಿಯಾಗಿ ಬಾಲಿವುಡ್ನ ಬೆಡಗಿ ಜಾನ್ವಿ ಕಪೂರ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ವಿಶೇಷವಾಗಿ ಎನ್‌ಟಿಆರ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದು, ತಂದೆ ಮತ್ತು ಮಗನಾಗಿ ತೆರೆ ಮೇಲೆ ಮೋಡಿ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಇದೆಲ್ಲದರ ನಡುವೆ ಹೊಸ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದ್ದು, ಜೂ.ಎನ್‌ಟಿಆರ್ ಚಿತ್ರಕ್ಕೆ ಮರಾಠಿ ಭಾಷೆಯ ಹೆಸರಾಂತ ನಟಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ.
ದೇವರ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಮರಾಠಿ ನಟಿ ಶ್ರುತಿ ಮರಾಠೆ, ಈ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಕೇವಲ ದೇವರ ಮಾತ್ರವಲ್ಲದೇ ಮರಾಠಿ, ಹಿಂದಿ ಮತ್ತು ಕೆಲವು ತಮಿಳು ಚಿತ್ರಗಳ ಭಾಗವಾಗಿದ್ದಾರೆ ಎನ್ನಲಾಗಿದೆ.
ನಟ ಸೈಫ್ ಅಲಿ ಖಾನ್ ಗಾಯಗೊಂಡ ಬಳಿಕ ಚಿತ್ರದ ಚಿತ್ರೀಕರಣ ವಿಳಂಬಗೊಂಡಿತು. ಇದೀಗ ವಿಳಂಬದ ಕಾರಣ ಸಿನಿಮಾದ ರಿಲೀಸ್ ಡೇಟ್ ಕೂಡ ಮುಂದೂಡಲ್ಪಟ್ಟಿದೆ. ಚಿತ್ರವನ್ನು ಎನ್‌ಟಿಆರ್ ಆರ್ಟ್ಸ್ ಮತ್ತು ಯುವಸುಧಾ ಆರ್ಟ್ಸ್ ನಿರ್ಮಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜಯಿದೆ,(ಏಜೆನ್ಸೀಸ್).