

ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಜಗತ್ತಿನಾದ್ಯಂತ ಮಹಿಳೆಯರು ಸಂಭ್ರಮಿಸುತ್ತಿದ್ದು, ಪುರುಷರು ಕೂಡ ಅವರಿಗೆ ಶುಭ ಹಾರೈಸುತ್ತಿದ್ದಾರೆ. ಆದರೆ ಮತ್ತೊಂದು ಕಡೆ ಇನ್ನೊಂದಷ್ಟು ಪುರುಷರು ಇಂದು ಇನ್ನೊಂದು ದಿನವನ್ನು ಆಚರಣೆ ಮಾಡುತ್ತಿದ್ದಾರೆ.
ಹೌದು.. ನೊಂದ ಪುರುಷರು ಒಂದಷ್ಟು ಮಂದಿ ಸೇರಿಕೊಂಡು ಇಂದು ಅಂತಾರಾಷ್ಟ್ರೀಯ ಸುಳ್ಳು ಮೊಕದ್ದಮೆ ದಿನ (ಇಂಟರ್ನ್ಯಾಷನಲ್ ಫಾಲ್ಸ್ ಕೇಸ್ ಡೇ) ಆಚರಣೆ ಮಾಡುತ್ತಿದ್ದಾರೆ. ಮದುವೆ ಬಳಿಕ ವರದಕ್ಷಿಣೆ ಕಿರುಕುಳ ಸೇರಿ ಹಲವು ಆರೋಪಗಳೊಂದಿಗೆ ಸುಳ್ಳು ಕೇಸ್ಗಳನ್ನು ಎದುರಿಸಿ ನೊಂದು ಬೇಸತ್ತ ಕೆಲವು ಪುರುಷರು ಈ ದಿನವನ್ನು ಆಚರಣೆ ಮಾಡುತ್ತಿದ್ದಾರೆ. ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಷನ್ ಸಂಘಟನೆ ಮೂಲಕ ಇಂಥದ್ದೊಂದು ದಿನ ಆಚರಣೆ ಆಗುತ್ತಿದೆ.
#FalseCaseDay #FakeFeminism ಮುಂತಾದ ಹ್ಯಾಷ್ಟ್ಯಾಗ್ಗಳೊಂದಿಗೆ ಟ್ವಿಟರ್ನಲ್ಲಿ ಬಹಳಷ್ಟು ಮಂದಿ ಈ ದಿನವನ್ನು ಆಚರಿಸುತ್ತ ಸುಳ್ಳು ಆರೋಪಗಳ ವಿರುದ್ಧ ದನಿ ಎತ್ತುತ್ತಿದ್ದಾರೆ. ಮಹಿಳೆಯರ ದಿನದ ಸಂದರ್ಭದಲ್ಲಿ ಇಂಥದ್ದೊಂದು ದಿನ ಆಚರಣೆ ಆಗುತ್ತಿದ್ದು, ನಿಜವಾದ ಮಹಿಳೆ ಸುಳ್ಳು ಕೇಸು ದಾಖಲಿಸುವುದಿಲ್ಲ ಎನ್ನುವ ಮೂಲಕ ನೊಂದ ಪುರುಷರು ತಮ್ಮ ನೋವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ #MarriageStrike ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಇದೇ ಥರದ ದಿನವೊಂದು ಆಚರಣೆ ಆಗಿತ್ತು.