ನಾರಿ ಶಕ್ತಿ ಜೀವನ್ಮುಖಿ; ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

Lalitha F
Published on
ಮುಗಿಲೆತ್ತರ ಬೆಳೆದು ಘಮಘಮಿಸುವ ಮಲ್ಲಿಗೆ ಹೂವು, ಕೆಸರಲ್ಲಿ ಬೆಳೆದು ದೇವರ ಮುಡಿ ಸೇರುವ ಕಮಲವಾಗಲಾರದು; ಹಾಗೆಂದು ಗಗನ ಚುಂಬಿಸುವ ಮಲ್ಲಿಗೆಯ ಕಂಡು ನಾನು ಕೆಸರಲ್ಲಿ ಬೆಳೆಯುವ ಬದಲು ಅಲ್ಲಿರಬಾರದಿತ್ತೇ ಎಂದುಕೊಂಡರೆ ಕಮಲ ರಾಷ್ಟ್ರೀಯ ಪುಷ್ಪವೂ ಆಗುತ್ತಿರಲಿಲ್ಲ, ದೇವರ ಪೂಜೆಯಲ್ಲಿ ಅದಕ್ಕೆ ಇಷ್ಟೊಂದು ಮಹತ್ವವೂ ಸಿಗುತ್ತಿರಲಿಲ್ಲ... ಹಾಗೆಯೇ ಈ ಬದುಕು.. ಮಹಿಳೆ ಮಹಿಳೆಯಾಗಿದ್ದರೇ ಚೆನ್ನ, ಪುರುಷ ಪುರುಷನಾಗಿದ್ದರೇ ಸೊಗಸು. ಒಬ್ಬರು ಇನ್ನೊಬ್ಬರಂತೆ ಆಗಲು ಹೋದರೆ ಆಗುವುದು ಎಡವಟ್ಟು. ಸಮಾನತೆಯ ಭರಾಟೆಯಲ್ಲಿ ಮಹಿಳೆ ಪುರುಷನಾಗಲು ಹೊರಟರೆ ಹೆಣ್ತನವೆಂಬ ದೈವದತ್ತವಾಗಿರುವ ಅಮೂಲ್ಯ ಕೊಡುಗೆಗೆ ಕೊಡಲಿ ಏಟು ಕೊಟ್ಟಂತೆಯೇ ಸರಿ ಎನ್ನುತ್ತಲೇ ಹೆಣ್ಣಿನ ಮಹಿಮೆ, ಗರಿಮೆ, ಆಕೆಗಿರುವ ಸವಾಲುಗಳು, ಅವಕಾಶಗಳು... ಹೀಗೆ ನೂರೆಂಟು ಭಿನ್ನ-ವಿಭಿನ್ನ ಚಿತ್ರಣಗಳನ್ನು, ಅನುಭವಗಳನ್ನು ತೆರೆದಿಟ್ಟರು ಐಎಎಸ್ ಅಧಿಕಾರಿ ಶಿಲ್ಪಾ ನಾಗ್, ನಟಿ-ನಿರ್ದೇಶಕಿ ಶ್ರುತಿ ನಾಯ್ಡು, ಕ್ವೀನ್ಸ್ ಗ್ಲೋಬಲ್ ಮ್ಯಾನೇಜ್​ವೆುಂಟ್ ಸಲ್ಯೂಷನ್ ಸ್ಥಾಪಕಿ ಮಧುರಾಣಿ ಗೌಡ ಹಾಗೂ ಏರ್ ಕಾಂ ಸಲ್ಯೂಷನ್ಸ್ ಆಡಳಿತ ನಿರ್ದೇಶಕಿ ಕಾಂತಿ ಶೆಟ್ಟಿ. ಮಹಿಳಾ ದಿನದ ಅಂಗವಾಗಿ ವಿಜಯವಾಣಿ ಮತ್ತು ದಿಗ್ವಿಜಯ 247 ಜತೆ ಈ ನಾಲ್ಕು ಕ್ಷೇತ್ರಗಳ ದಿಗ್ಗಜರು ತಮ್ಮ ಅನುಭವ ಹಂಚಿಕೊಂಡರಲ್ಲದೆ ಮಹಿಳೆಯರಿಗೆ ಅಮೂಲ್ಯ ಸಲಹೆಗಳನ್ನೂ ನೀಡಿದರು. ಮಹಿಳೆಯರು ಎಂದಿಗೂ ಪುರುಷರಾಗಲು ಹೋಗಬೇಡಿ, ಸ್ತ್ರೀ ಎಂದರೇನೇ ವಿಶೇಷತೆ. ಅದನ್ನು ನಾವು ಮೊದಲು ಸಂಭ್ರಮಿಸಬೇಕು ಎಂದು ಕಮಲ, ಮಲ್ಲಿಗೆಯ ಉದಾಹರಣೆಯೊಂದಿಗೆ ಕಾಂತಿ ಶೆಟ್ಟಿ ವಿವರಿಸಿದರೆ, ಸರ್ಕಾರದಲ್ಲಿರುವ ವಿವಿಧ ಸವಲತ್ತುಗಳನ್ನು ವಿವರಿಸಿದರು ಶಿಲ್ಪಾ ನಾಗ್. ಎಲ್ಲ ಕ್ಷೇತ್ರಗಳಿಗಿಂತ ಧಾರಾವಾಹಿ ಹೇಗೆ ಭಿನ್ನ ಎಂದು ತಿಳಿಹಾಸ್ಯದೊಂದಿಗೆ ವಿವರಿಸಿದ ಶ್ರುತಿ ನಾಯ್ಡು, ಇಲ್ಲಿ ಪುರುಷರೇ ಮೀಸಲಾತಿ ಕೋರಬೇಕಿದೆ ಎಂದರೆ, ಮಹಿಳಾವಾದ ಎಂದರೆ ಪುರುಷರನ್ನು ದ್ವೇಷಿಸುವುದಲ್ಲ ಎಂದು ಎಚ್ಚರಿಕೆ ನೀಡಿದರು ಮಧುರಾಣಿ ಗೌಡ. ಸಂವಾದದ ಸಂಪೂರ್ಣ ಮಾಹಿತಿ ಇಲ್ಲಿದೆ...

ವ್ಯತ್ಯಾಸ ಏಕೆ ಹುಡುಕಬೇಕು?

| ಶಿಲ್ಪಾ ನಾಗ್ ಐಎಎಸ್ ಅಧಿಕಾರಿ

ಪ್ರತಿ ದಿನವೂ ಮಹಿಳಾ ದಿನವೇ, ಮನೆಯಲ್ಲೇ ಇರಲಿ, ಹೊರಗಡೆ ದುಡಿಯಲಿ ಪ್ರತಿ ಮಹಿಳೆಯೂ ಉದ್ಯೋಗಸ್ಥೆಯೇ. ಯಾವುದೇ ಕ್ಷೇತ್ರದಲ್ಲಿ ನಾವು ಮಾಡುವ ಕೆಲಸದಲ್ಲಿ ತಿಳಿವಳಿಕೆ, ಜ್ಞಾನ ಹಾಗೂ ಆಸಕ್ತಿ ಇದ್ದರೆ ಸ್ತ್ರೀ ಪುರುಷರ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ಆದರೆ ಗ್ರಾಮೀಣ ಮಹಿಳೆ ಜಮೀನಿನಲ್ಲಿ ಎಷ್ಟೇ ಕೆಲಸ ಮಾಡಿದರೂ ಅದು ಪರಿಗಣನೆಗೆ ಬರುತ್ತಿಲ್ಲ. ಅದೇ ಪುರುಷ ಮಾಡಿದರೆ ಕೃಷಿಕ ಎಂದು ಕರೆಸಿಕೊಳ್ಳುತ್ತಾನೆ. ಕೃಷಿ ವಲಯದಲ್ಲಿ ಮಹಿಳೆಯ ಕೆಲಸ ನಿರ್ಲಕ್ಷಿಸಲಾಗುತ್ತಿದೆ. ಈಗೀಗ ಮಾನ್ಯತೆ ದೊರೆಯುತ್ತಿದೆ. ಮಹಿಳೆಯರು ಸ್ವಾವಲಂಬಿಯಾಗಿ ಬೆಳೆಯಲು ಸರ್ಕಾರ ಬಹಳಷ್ಟು ಸೌಲಭ್ಯ ಒದಗಿಸಿದೆ. ಅದರ ಬಗ್ಗೆ ಮಹಿಳೆಯರಿಗೆ ಜಾಗೃತಿ ಮೂಡಿಸುವ ಕಾರ್ಯವೂ ಆಗುತ್ತಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿ ಮಹಿಳಾ ಸ್ವ-ಸಹಾಯ ಗುಂಪುಗಳು ಕೌಶಲಾಭಿವೃದ್ಧಿ ತರಬೇತಿ ಸೇರಿ ವಿವಿಧ ಸೌಲಭ್ಯ ಪಡೆಯಬಹುದಾಗಿದ್ದು, ಸ್ವಯಂ ಉದ್ಯೋಗ ಪ್ರಾರಂಭಿಸಲು ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ದೊರೆಯಲಿದೆ. ಇದೇ ಅಲ್ಲದೆ, ಅನುಗ್ರಹ, ಸಮೃದ್ಧಿ, ಧನಶ್ರೀ ಇತ್ಯಾದಿ ಕಾರ್ಯಕ್ರಮ ರೂಪಿಸಲಾಗಿದೆ.

ಸಮಾನ ಕೆಲಸಕ್ಕೆ ಸಮಾನ ವೇತನ: ಅಸಂಘಟಿತ ವಲಯ, ಅದರಲ್ಲೂ ನಿರ್ಮಾಣ ಕ್ಷೇತ್ರದಲ್ಲಿ ಕಟ್ಟಡ ಕೂಲಿಕಾರ್ವಿುಕರಲ್ಲಿ ಇಂದಿಗೂ ಗಂಡಾಳು, ಹೆಣ್ಣಾಳು ಎಂದು ಪ್ರತ್ಯೇಕ ವೇತನ ನೀಡಲಾಗುತ್ತಿದೆ. ಇದು ಕ್ರೀಡಾ ಕ್ಷೇತ್ರದಲ್ಲೂ ಇದೆ. ಇತ್ತೀಚೆಗೆ ಒಲಿಂಪಿಕ್ಸ್​ನಲ್ಲಿ ಆದ ವೇತನ ತಾರತಮ್ಯದಿಂದಾಗಿ ಮಹಿಳಾ ಕ್ರೀಡಾಪಟುಗಳು ಪ್ರತಿಭಟನೆ ಮಾಡಿದ್ದರು. ಕೆಲ ವಲಯದಲ್ಲಿ ಮಹಿಳೆ ಮತ್ತು ಪುರುಷರಲ್ಲಿ ಈ ರೀತಿ ವೇತನ ತಾರತಮ್ಯ ಮುಂದುವರಿದಿದೆ.

ಮಹಿಳೆ ಪಾತ್ರ ಕಡಿಮೆ: ಸಾರ್ವಜನಿಕ ವಲಯದಲ್ಲಿ ಮಹಿಳೆಯರಿಗೆ ಒಳ್ಳೆಯ ಹೆಸರಿದೆ. ಭ್ರಷ್ಟಾಚಾರದಲ್ಲಿ ಮಹಿಳೆ ಪಾತ್ರ ಕಡಿಮೆ. ಸಮರ್ಪಣಾ ಮನೋಭಾವನೆಯಿಂದ ಕೆಲಸ ಮಾಡುವವರಲ್ಲೂ ಮಹಿಳೆಯರೇ ಹೆಚ್ಚು.

ಸದ್ಬಳಕೆಯಾಗದಿದ್ದರೆ ಮೀಸಲಾತಿ ವ್ಯರ್ಥ: ಮಹಿಳಾ ಮೀಸಲಾತಿ ವಿಚಾರ ಬಂದಾಗ ಕೊಡಬೇಕು ಎನ್ನುವವರೂ ಇದ್ದಾರೆ, ಬೇಡ ಸಮಾನವಾಗಿ ನೋಡಬೇಕು ಎಂಬುದಾಗಿಯೂ ಹೇಳುತ್ತಾರೆ. ಮಹಿಳಾ ಮೀಸಲಾತಿ ಒಂದೊಳ್ಳೆಯ ಹೆಜ್ಜೆ. ಮನೆಯಿಂದ ಹೊರಬರಲೂ ಸಾಧ್ಯವಿಲ್ಲದ ಮಹಿಳೆಯರು ಇಂದು ಗ್ರಾಪಂಗಳಲ್ಲಿ ಶೇ. 50 ಸ್ಥಾನ ಪಡೆದಿದ್ದಾರೆ. ದೇಶದಲ್ಲಿ ಈ ಸೌಲಭ್ಯ ಕಲ್ಪಿಸಿದ ಮೊದಲ ರಾಜ್ಯ ಕರ್ನಾಟಕ. ರಾಜಕೀಯ ಎಂದರೆ ಪುರುಷರೇ ಇರಬೇಕು ಎನ್ನುತ್ತಿದ್ದ ಕಾಲ ಬದಲಾಗಿದೆ. ರಾಜ್ಯದ 5,960 ಗ್ರಾಪಂಗಳಲ್ಲಿ ಶೇ. 50 ಮಹಿಳಾ ಅಧ್ಯಕ್ಷರಿದ್ದಾರೆ. ಅಡುಗೆ ಮನೆಗೆ ಸೀಮಿತವಾಗಿದ್ದ ಗ್ರಾಮೀಣ ಮಹಿಳೆ ಕಚೇರಿಗೆ ಹೋಗಿ ಜನರ ಅಹವಾಲು ಸ್ವೀಕರಿಸುವ ಹಂತಕ್ಕೆ ಬೆಳೆದಿದ್ದಾಳೆ. ಮೀಸಲಾತಿ ಕೊಡದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಸದ್ಬಳಕೆ ಮಾಡಿಕೊಳ್ಳಲಿದ್ದರೆ ಮೀಸಲಾತಿ ವ್ಯರ್ಥ. ಉದ್ಯೋಗ ವಿಚಾರದಲ್ಲಿ ಕೆಪಿಎಸ್​ಸಿಯಲ್ಲಿ ಮಹಿಳೆಗೆ ಶೇ. 33 ಮೀಸಲಾತಿ ಇದೆ. ಆದರೆ ಯುಪಿಎಸ್​ಸಿನಲ್ಲಿ ಇಲ್ಲ. ಯಾವ ಹಂತದಲ್ಲಿ ಮೀಸಲಾತಿ ಅಗತ್ಯ ಇರುತ್ತದೋ ಅಲ್ಲಿ ಕೊಟ್ಟರೆ ಒಳ್ಳೆಯದು. ಎಲ್ಲ ಹಂತದಲ್ಲೂ ಅಗತ್ಯವಿಲ್ಲ.

ತಳಮಟ್ಟದಿಂದ ನಾಯಕತ್ವ ನಿರ್ಮಾಣ: ಮಹಿಳಾ ನಾಯಕತ್ವ ತಳಮಟ್ಟದಿಂದ ನಿರ್ವಣವಾಗಬೇಕು. ಕೇರಳದಲ್ಲಿ ‘ಕುಟುಂಬ ಶ್ರೀ‘ ಮಾದರಿಯಲ್ಲಿ ಮಹಿಳಾ ತಂಡಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣ ನೀಡಲಾಗುತ್ತಿದೆ. ಇದರಿಂದ ಮಹಿಳೆಯರಲ್ಲಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಸೃಷ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ನಾಯಕರಿಗೆ ತಳಮಟ್ಟದ ಅವಕಾಶ ಎಂದರೆ ಅದು ಗ್ರಾಮ ಪಂಚಾಯಿತಿ. ಈ ಹಂತದಲ್ಲಿ ಮಹಿಳೆ ಬಲಗೊಳ್ಳಬೇಕಿದೆ.

ಉದ್ಯೋಗಾವಕಾಶ ಕಡಿಮೆ: ಶಿಕ್ಷಣದಲ್ಲಿ ಮುಂದಿರುವ ಹೆಣ್ಣು ಮಕ್ಕಳಿಗೆ ಉದ್ಯೋಗ ಅವಕಾಶ ಕಡಿಮೆ. ವಿವಾಹಿತ ಮಹಿಳೆಗೆ ಉದ್ಯೋಗ ನೀಡಿದರೆ ಮೆಟರ್ನಿಟಿ ರಜೆ, ಆಸ್ಪತ್ರೆ ರಜೆ ಎಂದೆಲ್ಲ ಹೆಚ್ಚು ರಜೆ ನೀಡಬೇಕು ಎಂಬ ಕಾರಣಕ್ಕೆ ಅವಕಾಶ ಕಡಿಮೆ. ಇತ್ತೀಚಿನ ದಿನಗಳಲ್ಲಿ ಮಹಿಳೆ ಉದ್ಯೋಗಕ್ಕೆ ಹೋಗುತ್ತಿರುವುದರಿಂದ ಪುರುಷರು ಮೆಟರ್ನಿಟಿ ರಜೆ ಕೇಳುತ್ತಿದ್ದಾರೆ. ಮಗುವಿನ ಪಾಲನೆಯಲ್ಲಿ ತಂದೆಯೂ ಪಾತ್ರ ನಿರ್ವಹಿಸುತ್ತಿದ್ದಾರೆ.

ಸೀಮಿತ ಕ್ಷೇತ್ರ ಎಂದಿರುವುದಿಲ್ಲ: ಪ್ರತಿ ವರ್ಷ ಲಕ್ಷಾಂತರ ಮಂದಿ ಐಎಎಸ್ ಪರೀಕ್ಷೆ ಬರೆಯುತ್ತಾರೆ. ಆದರೆ ಅವರಲ್ಲಿ 1 ವರ್ಷಕ್ಕೆ ಇಡೀ ದೇಶದಲ್ಲಿ ಆಯ್ಕೆ ಆಗುವವರ ಸಂಖ್ಯೆ ಕೇವಲ 150. ಇಲ್ಲಿ ಮಹಿಳಾ ಮೀಸಲಾತಿ ಎನ್ನುವುದಕ್ಕಿಂತ ಐಎಎಸ್ ಪರೀಕ್ಷೆಗೆ ಸ್ತ್ರೀ ಪುರುಷರಿಬ್ಬರೂ ಒಂದೇ ರೀತಿಯ ತಯಾರಿ ನಡೆಸಬೇಕಾಗುತ್ತದೆ. ಯುಪಿಎಸ್​ಸಿಯಲ್ಲೂ ಯಾವುದೇ ಮೀಸಲಾತಿ ಇರುವುದಿಲ್ಲ. 3 ಹಂತದ ಪರೀಕ್ಷೆ ಇರುತ್ತದೆ. ಬಹು ಆಯ್ಕೆಯ ಪ್ರಾಥಮಿಕ ಪರೀಕ್ಷೆ, ಪ್ರಬಂಧ ರೀತಿಯ ಉತ್ತರ ಒಳಗೊಂಡ ಮುಖ್ಯ ಪರೀಕ್ಷೆ, ವ್ಯಕ್ತಿತ್ವ ಪರೀಕ್ಷೆ, ನೇರ ಸಂದರ್ಶನ ಇರುತ್ತದೆ. ಹಾಗಾಗಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎಂದರೆ ಇತರ ಪರೀಕ್ಷೆಗಳ ಹಾಗೆ ಒಂದು ರಾತ್ರಿಯಲ್ಲಿ ಅಭ್ಯಾಸ ಮಾಡಿ ಬರೆಯುವುದಲ್ಲ. ಕಾಲೇಜು ದಿನಗಳಲ್ಲೇ ಸಿದ್ಧತೆ ಆರಂಭಿಸಬೇಕು. ಅಧಿಕಾರಿಗಳಿಗೆ ಸೀಮಿತ ಕ್ಷೇತ್ರ ಎಂದಿರುವುದಿಲ್ಲ, ಅವರು ಎಲ್ಲ ವಲಯಗಳಲ್ಲೂ ಸೇವೆ ಸಲ್ಲಿಸಬೇಕಾಗುತ್ತದೆ. ಹಾಗಾಗಿ ಪ್ರಚಲಿತ ವಿದ್ಯಮಾನ ತಿಳಿದಿರಬೇಕು. ಇತ್ತೀಚೆಗೆ ಹೆಣ್ಣು ಮಕ್ಕಳು ಯುಪಿಎಸ್​ಸಿ ಪರೀಕ್ಷೆ ಹೆಚ್ಚು ತೆಗೆದುಕೊಳ್ಳುತ್ತಿದ್ದಾರೆ.

ಮದುವೆ ನಂತರವೂ ಅಭ್ಯಾಸ: ‘‘ನಾನು ಯುಪಿಎಸ್​ಸಿ ಪರೀಕ್ಷೆ ತೆಗೆದುಕೊಂಡಾಗ ನನಗೆ ಪುಟ್ಟ ಮಗನಿದ್ದ. ಎಲ್ಲರೂ ತಪಸ್ಸಿನ ರೀತಿಯಲ್ಲಿ ಅಭ್ಯಾಸ ಮಾಡಬೇಕು. ಮನೆಯಲ್ಲಿ ಸಂಸಾರ, ಮಕ್ಕಳ ಜಂಜಾಟದಲ್ಲಿ ಅದು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಆದರೆ ಅದೆಲ್ಲ ನಮ್ಮ ಮೇಲೆಯೇ ಅವಲಂಬಿತವಾಗಿರುತ್ತದೆ. ಮದುವೆ ನಂತರ ಕುಟುಂಬದಿಂದ ಇನ್ನೂ ಹೆಚ್ಚಿನ ಪ್ರೋತ್ಸಾಹ ದೊರೆಯಬಹುದು. ಅದಕ್ಕಾಗಿ ಮಹಿಳೆಯರೂ ಸ್ವಲ್ಪ ವಿಶಾಲ ಮನೋಭಾವ ತೋರಿಸಬೇಕು. ನಾವು ಕುಟುಂಬದಲ್ಲಿ ಗೌರವ ಹಾಗೂ ಜವಾಬ್ದಾರಿಯಿಂದ ನಡೆದುಕೊಂಡಲ್ಲಿ, ಅವರಿಂದಲೂ ನಮಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತದೆ.

ಸ್ತ್ರೀ ಅಮೂಲ್ಯವಾದ ಸೃಷ್ಟಿ

| ಮಧುರಾಣಿ ಗೌಡ ಕ್ವೀನ್ಸ್ ಗ್ಲೋಬಲ್ ಮ್ಯಾನೇಜ್​ವೆುಂಟ್ ಸಲ್ಯೂಷನ್ ಸ್ಥಾಪಕಿ

ಮಹಿಳಾ ದಿನ ಎಂದಾಕ್ಷಣ ಸಾಮಾನ್ಯವಾಗಿ ಹೇಳೋದು ಉಳಿದ ದಿನಗಳು ಪುರುಷರಿಗೆ. ಇವತ್ತೊಂದು ದಿನ ಮಹಿಳೆಯರಿಗೆ ಎಂದು. ಅದು ಸರಿಯಲ್ಲ. ಪ್ರತಿ ದಿನ ನಮ್ಮದೇ. ನನ್ನ ಪ್ರಕಾರ ಸ್ತ್ರೀ ಅಮೂಲ್ಯವಾದ ಸೃಷ್ಟಿ. ಹೆಣ್ಣು ಎಲ್ಲ ಕೆಲಸವನ್ನೂ ಮಾಡುತ್ತಾಳೆ. ಜತೆಗೆ, ಎಲ್ಲ ಉದ್ಯಮಗಳಲ್ಲಿ ಹೆಸರು ಮಾಡುತ್ತಿದ್ದಾಳೆ. ನಮ್ಮನ್ನು ನಾವು ಹೆಚ್ಚು ಅರಿತು, ನಮ್ಮ ಆರೋಗ್ಯದ ಕಡೆ ಗಮನ ಹರಿಸುತ್ತ ಮುಂದೆ ಹೋದರೆ ಪ್ರತಿ ಕೆಲಸದಲ್ಲೂ ಪ್ರತಿಫಲ ನಿರೀಕ್ಷಿಸಬಹುದು. ಜನ ನಿಮ್ಮ ಹಿಂದೆ ನಿಲ್ಲುವುದು ಅವರ ಮಟ್ಟಕ್ಕೆ ನೀವು ಬೆಳೆಯುವವರೆಗೆ ಮಾತ್ರ. ಅವರಿಗಿಂತ ನೀವು ಬೆಳೆದರೆ ಯಾರೂ ಸಹಿಸಲ್ಲ. ಹಾಗಾಗಿ, ನಮ್ಮನ್ನು ನಾವೇ ಪೋ›ತ್ಸಾಹಿಸಿಕೊಂಡು ಮುಂದೆ ಸಾಗಬೇಕು. ಎಲ್ಲರೂ ನಮ್ಮ ಬೆನ್ನ ಹಿಂದೆ ನಿಂತು ಪೋ›ತ್ಸಾಹಿಸುತ್ತಾರೆ. ಅವರಿಗಿಂತ ಹೆಚ್ಚು ಬೆಳೆಯುತ್ತಿದ್ದೇವೆ ಎಂದರೆ ಹಿಂದೆ ತಳ್ಳುತ್ತಾರೆ. ಇದನ್ನೆಲ್ಲ ಬದಿಗಿಟ್ಟು ನಮ್ಮ ಗುರಿಯ ಮೇಲೆ ನಮ್ಮ ಆಲೋಚನೆಗಳನ್ನು ಕೇಂದ್ರೀಕರಿಸಿಕೊಂಡು ಮುನ್ನುಗ್ಗಬೇಕು.

ಮೀಸಲಾತಿ ಬಳಕೆಯ ಚಿಂತೆ ಕಾಡುತ್ತಿದೆ: ‘ಹೆಬ್ಬೆಟ್ಟು ರಾಮಕ್ಕ’ ಎಂಬ ಸಿನಿಮಾ ನಮ್ಮೆಲ್ಲರಿಗೆ ಒಳ್ಳೆಯ ಉದಾಹರಣೆ. ಹೆಣ್ಣು ಮಕ್ಕಳು ಹೊರಗೇ ಬರದಂತಹ ಪ್ರದೇಶಗಳಲ್ಲಿ ಇದು ತುಂಬಾ ಮುಖ್ಯವಾಗುತ್ತೆ. ಹೆಣ್ಣು ಮಕ್ಕಳು ಹೊರಗೆ ಬರುವುದು, ಎಲ್ಲ ಉದ್ಯಮಗಳ ಭಾಗವಾಗುವುದು ಬಹಳ ಮುಖ್ಯ. ಹೆಂಡತಿ ಆಚೆ ಬಂದು ಗ್ರಾಮ ಪಂಚಾಯಿತಿ ಸಭೆ ನಡೆಸಿದರೆ ಸಾಕಾಗಲ್ಲ. ಅಥವಾ ಅವರ ಕೆಲಸಗಳಿಗೆ ಗಂಡನ ಸಹಾಯ ತೆಗೆದುಕೊಳ್ಳುವುದು ಸರಿಯಲ್ಲ. ನಮಗೆ ಸಿಕ್ಕ ಅವಕಾಶವನ್ನು ನಾವೇ ಬಳಸಬೇಕು.

ದೊಡ್ಡ ಹುದ್ದೆ ತುಂಬಾ ಕಷ್ಟ: ಯಾವುದೇ ಸಂಘ-ಸಂಸ್ಥೆಗಳಲ್ಲಿ ಮಹಿಳೆಗೆ ಅಧ್ಯಕ್ಷ ಸ್ಥಾನ ಸಿಗುವುದು ತುಂಬಾ ಕಷ್ಟ. ಎಷ್ಟೇ ಕೆಲಸ ಮಾಡಿದರೂ ದೊಡ್ಡ ದೊಡ್ಡ ಸ್ಥಾನ ಸಿಗುವುದು ಕಷ್ಟದ ಸಂಗತಿ. ಇದಕ್ಕಿಂತ ಹೆಚ್ಚಾಗಿ, ದೊಡ್ಡ ಹುದ್ದೆಗಳಿಗೆ ಹೋಗಲು ಮಹಿಳೆ ಹಿಂಜರಿಯುತ್ತಾಳೆ. ಎಲ್ಲ ಅಡೆ-ತಡೆ ದಾಟಿಕೊಂಡು ದೊಡ್ಡ ಹುದ್ದೆ ಪಡೆದವರೂ ನಮ್ಮ ಮುಂದೆ ಇದ್ದಾರೆ. ಆದರೆ ಅಂಥವರು ಬೆರಳೆಯಣಿಕೆಯಷ್ಟೆ.

ಗ್ರಾಮೀಣ ಮಹಿಳೆಗೆ ಜಾಗೃತಿ: ಪಂಚಾಯಿತಿ ಮಟ್ಟದಲ್ಲಿ ಮತ್ತು ಮೀಸಲಾತಿ ಮಾತಾಡಬೇಕು ಅಂದರೆ ಹೆಣ್ಣು ಮಕ್ಕಳು ಗೆದ್ದು ಬರುವುದು ದೊಡ್ಡ ವಿಷಯವಲ್ಲ. ಅವರಿಗೆ ಸಿಕ್ಕ ಅವಕಾಶ ಸದುಪ ಯೋಗಿಸಿಕೊಳ್ಳಬೇಕು. ಜತೆಗೆ, ದೊಡ್ಡ ಹುದ್ದೆಗೆ ಬಂದ ಮಹಿಳೆಗೆ ತಮ್ಮ ಕೆಲಸಗಳ ಬಗ್ಗೆ ತರಬೇತಿ ಮತ್ತು ಜಾಗೃತಿ ಮೂಡಿಸಬೇಕು.

ಗೃಹಿಣಿಯಾಗುವುದು ಅಷ್ಟು ಸುಲಭವಲ್ಲ: ಹೆಂಗಸರಿಗೆ ಗೃಹಿಣಿಯೇ ಆಗಿರೋಣ ಅಂತ ಅನಿಸುವುದು ಎರಡು ಸಂದರ್ಭಗಳಲ್ಲಿ. ಒಂದು, ಮನೆಯಲ್ಲಿ ಜವಾಬ್ದಾರಿ ಹಂಚಿಕೊಳ್ಳುವ ಗಂಡ ಸಿಗದಿದ್ದಾಗ. ಇನ್ನೊಂದು ವೃತ್ತಿ ಜೀವನದ ಎಲ್ಲ ಅನುಭವಗಳನ್ನೂ ಅನುಭವಿಸಿದಾಗ. ಅಂದರೆ ವೃತ್ತಿ ಜೀವನದ ಸಾಧನೆಗಳಿಂದ ತೃಪ್ತಿ, ಸಾಕಷ್ಟು ಓದು, ಸಂಪಾದನೆ, ಕೆಲಸ ಅಥವಾ ಬಿಸಿನೆಸ್​ನಲ್ಲಿ ಅನುಭವ. ಇದೆಲ್ಲ ಸಿಕ್ಕ ಮೇಲೆ ಇನ್ನೇನಿದೆ, ಈಗ ಗೃಹಿಣಿಯಾಗಿ ಇದ್ದುಬಿಡೋಣ ಅನಿಸುತ್ತೆ. ಕಂಪನಿಯಲ್ಲಿ ಕೆಲಸ ಮಾಡಿದರೆ ದುಡ್ಡು ಸಿಗುತ್ತೆ. ಗೃಹಿಣಿಗೆ ದುಡ್ಡೇ ಸಿಗದ ನಿರಂತರ ಕೆಲಸ.

ಮಹಿಳಾ ವ್ಯಾಧಿಗಳಾಗದಿರಿ: ಮಹಿಳಾವಾದಿಗಳು ಎನ್ನುವ ವಿಷಯ ಒಳ್ಳೆಯದೆ. ಆದರೆ, ಅದನ್ನು ಸಣ್ಣ-ಪುಟ್ಟ ಕಾರಣಗಳಿಗೆ ದುರ್ಬಳಕೆ ಮಾಡುವುದು ಸರಿಯಲ್ಲ. ಸುಮ್ಮನೆ ಗಂಡನ ಮೇಲೆ ದೂರು, ಜತೆಗೆ ಕೆಲಸ ಮಾಡುವವರ ಮೇಲೆ ಆರೋಪ ಮಾಡಿ ನಾವು ವಾದಿಸಬಾರದು ಅಥವಾ ಮಹಿಳಾವಾದಿಗಳ ಬಳಿ ಹೋಗಬಾರದು. ಅಂತಹ ಮಹಿಳೆ ಹೆಣ್ಣು ಕುಲಕ್ಕೆ ಶಾಪ. ಅಂತವರು ಮಹಿಳಾ ವ್ಯಾಧಿಗಳಾಗುತ್ತಾರೆಯೇ ವಿನಾ ಮಹಿಳಾವಾದಿಗಳಾಗುವುದಿಲ್ಲ.

ಕಾಲ ಬದಲಾಗುತ್ತಿದೆ: ಹೆಣ್ಣು ಮಕ್ಕಳು ಮದುವೆ, ನಂತರ ಮಕ್ಕಳು ಎನ್ನುವ ಕಾರಣಗಳಿಗೆ ರಜೆ ಕೇಳುತ್ತಾರೆಂದು ಬಹುತೇಕ ಕಂಪನಿಗಳಲ್ಲಿ ಮಹಿಳೆಯರಿಗೆ ಅವಕಾಶಗಳು ಕಡಿಮೆ. ಹಾಗೂ ಹೆಣ್ಣು ಮಕ್ಕಳು ಜೈವಿಕವಾಗಿ ಗಂಡು ಮಕ್ಕಳಿಗಿಂತ ಶಕ್ತಿಯುತವಲ್ಲ ಎಂಬುದು. ಆದರೆ, ಕಾಲ ಬದಲಾಗುತ್ತಿದೆ. ಮಹಿಳೆ ಕೆಲಸಗಳಿಗೆ ಆಯ್ಕೆಯಾಗುವುದು ಕೂಡಾ ಹೆಚ್ಚಾಗುತ್ತದೆ.

ಕುಟುಂಬವನ್ನು ಅನುಸರಿಸೋಣ: ಹೆಣ್ಣು ಮಕ್ಕಳು ಯಾವ ವಿಚಾರಕ್ಕೆ ತಲೆ ಬಾಗಬೇಕು ಮತ್ತು ಯಾವುದಕ್ಕೆ ತಲೆ ಬಾಗಬಾರದು ಎಂಬುದನ್ನು ತಿಳಿದುಕೊಳ್ಳಬೇಕು. ಈಗಿನ ಕಾಲದ ಮಕ್ಕಳಿಗೆ ಸ್ವಲ್ಪ ಸ್ವಾತಂತ್ರ್ಯ ಹೆಚ್ಚಾದರೆ ತೊಂದರೆ ಕಟ್ಟಿಟ್ಟಬುತ್ತಿ. ಹೆಣ್ಣುಮಕ್ಕಳು ಕುಟುಂಬಗಳನ್ನು ಅನುಸರಿಸಿಕೊಂಡು ಹೋಗಬೇಕು. ಅನಿಸಿಕೆ, ಭಾವನೆ, ಆಸೆಗಳನ್ನು ಹೇಳಿಕೊಳ್ಳುತ್ತಾ, ವ್ಯಕ್ತಪಡಿಸುತ್ತಾ, ಹಲವು ವಿಷಯ, ಸಮಾಜವನ್ನು ಅರಿತು ಬದುಕಬೇಕು. ಸ್ಟಾರ್ಟ್​ಅಪ್​ಗಳ ಸಂಖ್ಯೆ ಹೆಚ್ಚಾಗಿದೆ. ಮಹಿಳೆಗಿರುವ ಶಕ್ತಿ, ದೌರ್ಬಲ್ಯ, ಅವಕಾಶ, ಮುಂದಾಗುವ ತೊಂದರೆಗಳ ಬಗ್ಗೆ ವಿಶ್ಲೇಷಣೆ ಮಾಡಿಕೊಂಡ ನಂತರ, ಯಾವ ಕ್ಷೇತ್ರಕ್ಕಾದರೂ ಇಳಿದು ಸಾಧಿಸಬಹುದು.

ನಾವೀಗ ಎಪ್ಪತ್ತರ ದಶಕದಲ್ಲಿಲ್ಲ

| ಕಾಂತಿ ಶೆಟ್ಟಿ ಏರ್ ಕಾಂ ಸಲ್ಯೂಷನ್ಸ್ ಆಡಳಿತ ನಿರ್ದೇಶಕಿ

ನಾರಿ ಶಕ್ತಿ ಸ್ವರೂಪಿಣಿ ಎಂದು ಮೆರೆಸಿದಂತಹ ದೇಶ ನಮ್ಮದು. ಆದರೆ ಮಹಿಳಾ ದಿನಾಚರಣೆಯಂದು ಮಾತ್ರ ಮಹಿಳೆಯ ಬಗ್ಗೆ ಮಾತನಾಡುವ ಬದಲು ಪ್ರತಿದಿನ ಮಹಿಳೆಯ ಸ್ಥಾನ- ಮಾನ ಏನು? ಆಕೆ ಎಷ್ಟು ಮಹತ್ವ ಪಡೆದಿದ್ದಾಳೆ ಎಂಬುದನ್ನು ಅರಿಯಬೇಕು. ತಾಯಿಯಾಗಿ, ಅತ್ತೆಯಾಗಿ, ಸೊಸೆಯಾಗಿ, ಮಗಳಾಗಿ ಮನೆ ಒಳಗೆ ಮತ್ತು ಹೊರಗೆ ಎರಡೂ ಕಡೆ ನಿರ್ವಿಘ್ನವಾಗಿ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಇರುವುದು ಮಹಿಳೆಗೆ ಮಾತ್ರ. ಒಂದು ದಿನ ಮಹಿಳೆ ಮನೆಯಲ್ಲಿ ಇಲ್ಲ ಅಂದರೆ ಆಕೆಯ ತಾಕತ್ತೇನು ಎನ್ನುವುದು ಎಲ್ಲರಿಗೂ ಅರಿವಾಗುತ್ತದೆ. ನಾವೀಗ ಎಪ್ಪತ್ತರ ದಶಕದಲ್ಲಿಲ್ಲ. ಮಹಿಳೆಗೆ ಸಿಗಬೇಕಾದ ಎಲ್ಲ ಸ್ಥಾನ-ಮಾನ ಸಿಕ್ಕಿದೆ. ಅದನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬುದನ್ನು ನಾವೇ ತಿಳಿಯಬೇಕು. ಮಹಿಳೆಯನ್ನು ಸ್ಪರ್ಧೆ ಎಂದುಕೊಳ್ಳಬೇಡಿ. ಆಕೆಯನ್ನೂ ಜೊತೆ ಜೊತೆಗೇ ಕರೆದುಕೊಂಡು ಹೋಗಿ. ಅವಳಿಗೆ ಒಂದು ವೇದಿಕೆ ಕಲ್ಪಿಸಿ. ಅವಳ ಅಂತರಂಗದಲ್ಲಿ ಇರುವ ಶಕ್ತಿಯನ್ನು ಆಚೆ ತರುವ ಕೆಲಸ ಮಾಡಿದರೆ ಪ್ರತಿಭೆ ಅನಾವರಣಗೊಳ್ಳುತ್ತದೆ. ನಮಗೆ ಅನುಕಂಪ ಬೇಡ. ಪ್ರೋತ್ಸಾಹ, ಅವಕಾಶ ಸಾಕು.

ಮಹಿಳೆ ಸಶಕ್ತಳೇ: ಸ್ತ್ರೀಯಲ್ಲಿರುವ ನೇತೃತ್ವ, ಕರ್ತತ್ವ, ಮಾತೃತ್ವ ಸ್ವಭಾವಗಳಿಗೆ ಬೆಂಬಲ ನೀಡುವ ಒಬ್ಬ ಪುರುಷ ಬೇಕು. ನಾವು ಪುರುಷರಂತೆ ಆಗಲು ಹೋಗುವುದು ತಪು್ಪ. ಮಲ್ಲಿಗೆ ಹೂವು ಮಲ್ಲಿಗೆ ಹಿಂಡಿನಲ್ಲೇ ಬೆಳೆಯಬೇಕು. ಅದೇ ರೀತಿ ಕಮಲ ಕೆಸರಿನಲ್ಲಿ ಬೆಳೆದರೆ ಅದಕ್ಕೊಂದು ಚೆಂದ. ಎರಡನ್ನೂ ಒಂದೇ ಎಂದುಕೊಳ್ಳುವುದು ತಪು್ಪ. ನಮ್ಮಲ್ಲಿರುವ ಶಕ್ತಿ ಅರಳಿಸಲು ಯಾರಾದರು ಬೆಂಬಲ ನೀಡಬೇಕೇ ಹೊರತು ನಾವೂ ಅವರಂತೆ ಆಗಬೇಕು ಅಂದುಕೊಳ್ಳಬಾರದು ತಪು್ಪ. ನಾವು ಹಕ್ಕು, ಹೋರಾಟ ಅನ್ನುವ ಪದ ಬಳಸುತ್ತೇವೆ. ಅದರ ಬದಲು ನಾವು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೇವೆ, ನಮ್ಮಲ್ಲಿರುವ ಶಕ್ತಿ ಏನಿದೆ? ಅದರ ಪ್ರಕಾರ ಇದ್ದೇವಾ ಎನ್ನುವುದನ್ನು ಯೋಚಿಸಬೇಕು. ಮಗು ಅತ್ತಾಗ ತಾನೆ ಅದಕ್ಕೆ ಹಾಲು ಬೇಕು ಎಂದು ತಾಯಿಗೆ ಗೊತ್ತಾಗುವುದು? ಹಾಗೆಯೇ ನಮಗೆ ಏನು ಬೇಕು ಅನ್ನುವುದನ್ನು ನಾವೇ ಕೇಳಿ ಪಡೆಯಬೇಕು. ಎಲ್ಲ ಕಡೆ ಮತ ಭೇದ, ವೈಚಾರಿಕ ಭೇದಗಳು ಇವೆ. ಅದನ್ನು ಸರಿಪಡಿಸಿಕೊಂಡು ಹೋಗುವ ಲಕ್ಷಣ ಸ್ತ್ರೀಯರಲ್ಲಿ ಇದೆ. ಮಾತನಾಡುವ ಜನರಿಗೆ ಕಿವಿಗೊಡಬೇಡಿ.

ಹೆಮ್ಮೆ ಎನಿಸುತ್ತದೆ: ನಮಗೆ ಅವಕಾಶಗಳು ಬೇಕು ಅಂತ ಕೇಳುವುದು ನಿಜ. ಆದರೆ ಒಂದು ಕಡೆ ಮಹಿಳೆ ಚುನಾವಣೆಗೆ ನಿಂತರೆ ಗೆಲ್ಲುತ್ತಾಳಾ ಅನ್ನುವುದನ್ನು ಮೊದಲು ನೋಡಿಕೊಳ್ಳಬೇಕು. ಉತ್ತರ ಪ್ರದೇಶದಲ್ಲಿ ಹೆಚ್ಚು ಸ್ಥಾನ ಮಹಿಳೆಯರಿಗೆ ಸಿಕ್ಕಿದ್ದು ಖುಷಿಯ ವಿಷಯವೇ. ಆದರೆ ನಮ್ಮಲ್ಲಿ ಮನೆಯಿಂದ ಹೊರಗೇ ಬರದ ಮಹಿಳೆಯರಿಗೆ ಮೊದಲು ಮೀಸಲಾತಿ ಸಿಗಲಿ. ಕೇಂದ್ರದಲ್ಲಿ 17 ಸ್ಥಾನ ಮಹಿಳೆಯರಿಗೆ ಸಿಕ್ಕಿದೆ. ಇದನ್ನು ನೋಡಿದರೆ ಹೆಮ್ಮೆ ಅನ್ನಿಸುವುದಿಲ್ಲವೇ?

ಅನೇಕ ಸವಲತ್ತುಗಳಿವೆ: ಮಹಿಳೆ ತನ್ನ ಸಾಮರ್ಥ್ಯ ತಿಳಿದುಕೊಳ್ಳಬೇಕು. ಒಂದೇ ಏಟಿಗೆ ಬಿಸಿನೆಸ್ ಮಾಡ್ತೀನಿ ಅಂದುಕೊಂಡರೆ ಆಗಲ್ಲ. ಅದಕ್ಕೂ ಆಕೆಗೆ ಅನುಭವ ಬೇಕಾಗುತ್ತದೆ. ಈಗಂತೂ ಸರ್ಕಾರದಿಂದ ಮಹಿಳೆಯರಿಗಾಗಿ ಅನೇಕ ಸವಲತ್ತುಗಳಿವೆ. ಸಬ್ಸಿಡಿ ಇದೆ. ಗುರಿ, ಆತ್ಮವಿಶ್ವಾಸ, ಕುಟುಂಬದವರ ಬೆಂಬಲ ಇದ್ದರೆ ಆಕೆ ಸಾಧಿಸಬಲ್ಲಳು. ಮುಂದಿನ ಒಂದು ವರ್ಷದಲ್ಲಿ ನಾನು ಎಲ್ಲಿರಬೇಕು ಎಂಬುದನ್ನು ಮೊದಲೇ ಆಕೆ ಪ್ಲಾನ್ ಮಾಡಬೇಕು.

ಸಶಕ್ತ ಸ್ತ್ರೀಗೆ ಮೀಸಲಾತಿ ಬೇಕಿಲ್ಲ: ಖಂಡಿತಾ ಮಹಿಳೆಗೆ ಮೀಸಲಾತಿ ಸಿಕ್ಕಿದೆ. ಮನೆಯಿಂದ ಆಚೆ ಬರಲು ಆಕೆಗೊಂದು ಅವಕಾಶ ದೊರಕಿದೆ. ಆದರೆ ಗ್ರಾಮೀಣ ಭಾಗದಲ್ಲಿ ಮಹಿಳೆ ಹೆಸರಿಗೆ ಮಾತ್ರ ಆಡಳಿತ ನಡೆಸುತ್ತಾಳೆ. ಆಕೆಯ ಮೊಬೈಲ್ ಸಹ ಪತಿಯ ಕೈಯಲ್ಲೇ ಇರುತ್ತದೆ. ಎಲ್ಲ ಜವಾಬ್ದಾರಿ ನಿರ್ವಹಿಸುವವನು ಗಂಡನೇ ಆಗಿರುತ್ತಾನೆ. ಈ ಪದ್ಧತಿ ಸ್ವಲ್ಪ ಬದಲಾಗಬೇಕು. ನಾವು ತುಂಬಾ ಸ್ವಾತಂತ್ರ್ಯ ಬೇಕು ಅಂದುಕೊಳ್ಳುವುದು ತಪು್ಪ. ಅತಿಯಾದರೆ ಅಮೃತವೂ ವಿಷ ಅನ್ನುವ ಹಾಗೆ ಎಲ್ಲವೂ ಇತಿಮಿತಿಯಲ್ಲಿದ್ದರೆ ಚೆಂದ. ಹೆಣ್ಣಿಗೆ ಮೀಸಲಾತಿ ಬೇಕು ನಿಜ. ಆದರೆ ಅದು ಎಲ್ಲಿ ಬೇಕು ಅನ್ನುವುದೂ ಮುಖ್ಯ. ಆಚೆಯೇ ಬರಲು ಆಗದ ಮಹಿಳೆಗೆ ಇದರ ಅವಶ್ಯಕತೆ ಇದೆ. ಸಶಕ್ತ ಮಹಿಳೆಗೆ ಮೀಸಲಾತಿಯ ಅವಶ್ಯಕತೆ ಇಲ್ಲ. ಏಕೆಂದರೆ ಆಕೆ ಎಲ್ಲಿ ಬೇಕಾದರೂ ಹೋರಾಡಬಲ್ಲಳು.

ನಮ್ಮ ಕೆಲಸ ಮಾತನಾಡಬೇಕು: ಸಂಘ-ಸಂಸ್ಥೆಗಳಲ್ಲಿ ಮಹಿಳೆಗೆ ಅಧ್ಯಕ್ಷ ಸ್ಥಾನ ಸಿಗುವುದು ಕಷ್ಟ ಅನ್ನುವ ಮಾತನ್ನು ನಾನು ಒಪು್ಪವುದಿಲ್ಲ. ಇಲ್ಲಿ ಕೆಲವೊಂದು ಕಟ್ಟುಪಾಡುಗಳಿರುತ್ತವೆ. ಅವರದೇ ಆದ ಒಂದು ಬೈಲಾ ಇರುತ್ತದೆ. ಅದರ ಪ್ರಕಾರವೇ ಹೋಗಬೇಕಾಗುತ್ತದೆ. ನಾವು ಸಂಘ-ಸಂಸ್ಥೆಗಳಿಗೆ ನಮ್ಮ ಸಮಯವನ್ನು ಕೊಟ್ಟರೆ ಖಂಡಿತಾ ಉನ್ನತ ಸ್ಥಾನ ಅಲಂಕರಿಸಬಹುದು. ಸಾಧನೆ ಅಸಾಧ್ಯವೇನಲ್ಲ. ಆದರೆ ತಾಳ್ಮೆ ಇರಬೇಕು ಅಷ್ಟೆ.

ಪ್ರೋತ್ಸಾಹದ ವಿಚಾರದಲ್ಲಿ ನಾನು ಅದೃಷ್ಟವಂತೆ

| ಶ್ರುತಿ ನಾಯ್ಡು ನಟಿ, ನಿರ್ಮಾಪಕಿ, ನಿರ್ದೇಶಕಿ

‘ನಮ್ಮ ಮನೆಯಲ್ಲಿ ನಾನೊಬ್ಬಳೇ ಮಗಳು. ಅಪ್ಪನ ಮುದ್ದಿನ ಮಗಳು. ಚಿಕ್ಕಂದಿನಿಂದಲೇ ಎಲ್ಲದಕ್ಕೂ ಪ್ರೋತ್ಸಾಹ. ಅಂದಿನಿಂದ ಈ ಹಂತಕ್ಕೆ ಬಂದಿದ್ದೇನೆಂದರೆ ಆ ಏಳಿಗೆಯಲ್ಲಿ ಪುರುಷರ ಪಾತ್ರವೂ ಇದೆ. ಆ ವಿಚಾರದಲ್ಲಿ ನಾನು ಅದೃಷ್ಟವಂತೆ. ನಾವು ಮಾಡಬೇಕಿರುವುದೇನು? ಎಂಬ ಗುರಿಯತ್ತ ಗಮನವಿದ್ದರೆ, ನಮ್ಮನ್ನು ಯಾರೂ ತಡೆಯುವವರಿಲ್ಲ. ಅದಕ್ಕೆ ನನ್ನದೇ ಉದಾಹರಣೆ ಇದೆ. ಧಾರಾವಾಹಿಯಲ್ಲಿ ನಟಿಸುವಾಗ, ಸೀನ್​ವೊಂದರ ನಿರ್ದೇಶನ ಮಾಡುತ್ತೇನೆ ಎಂದಾಗ ಅದಕ್ಕೆ ನಿರ್ದೇಶಕರ ಒಪ್ಪಿಗೆ ಸಿಕ್ಕಿತು. ಆ ಆತ್ಮವಿಶ್ವಾಸ ನನ್ನನ್ನು ನಿರ್ದೇಶಕಿಯನ್ನಾಗಿಸಿತು. ಅದಾದ ಬಳಿಕ ನಿರ್ವಪಕಿಯೂ ಆದೆ. ಎಲ್ಲರ ಸಹಕಾರ, ಬೆಂಬಲದಿಂದಲೇ ನಾನು ಈ ಹಂತಕ್ಕೆ ಬಂದಿದ್ದೇನೆ. ಇದರಲ್ಲಿ ನನ್ನೊಬ್ಬಳ ಪಾಲಿಲ್ಲ’.

ಧಾರಾವಾಹಿಯಲ್ಲಿ ಮಹಿಳೆಯೇ ಪ್ರಧಾನ: ‘ಕಿರುತೆರೆ ಕ್ಷೇತ್ರದಲ್ಲಿ ನಾಯಕಿಯೇ ಪ್ರಧಾನ. ಹಾಗಾಗಿ ಸಾಕಷ್ಟು ಜನ ಹೀರೋ ರೋಲ್​ಗೆ ಆಡಿಷನ್​ಗೆ ಬಂದಾಗ, ನಮಗೂ ಒಳ್ಳೆ ಸ್ಕ್ರೀನ್ ಪ್ರಸೆನ್ಸ್ ಇರುತ್ತಾ ಎಂದು ಕೇಳಿದ್ದುಂಟು. ಅದು ಈಗಲೂ ಚಾಲ್ತಿಯಲ್ಲಿದೆ. ಏಕೆಂದರೆ, ಹೀರೋ ಪ್ರಧಾನ ಧಾರಾವಾಹಿ ಮಾಡಿದರೆ, ಮನೆಯಲ್ಲಿ ಯಾರೂ ನೋಡುವುದಿಲ್ಲ. ಟಿಆರ್​ಪಿ ಸಹ ಅಷ್ಟಕಷ್ಟೆ. ಆದರೆ, ನಾವು ಈ ವಿಚಾರದಲ್ಲಿ ಭೇದ-ಭಾವ ಮಾಡುವುದಿಲ್ಲ. ಧಾರಾವಾಹಿಯ ಲವ್​ಸ್ಟೋರಿಯಲ್ಲಿ ನಾಯಕಿ ಜತೆ ನಾಯಕ ಇದ್ದರೇನೇ ಕಥೆ ಇಷ್ಟವಾಗುತ್ತದೆ. ಅದೇ ರೀತಿ ಮೊದಲಿನಿಂದಲೂ ಚಿತ್ರಮಂದಿರದಲ್ಲಿ ಹೋಗಿ ಸಿನಿಮಾ ನೋಡುತ್ತಿದ್ದವರು ಪುರುಷರೇ. ಅವರಿಗೆ ನಾಯಕ ಉದ್ದುದ್ದ ಡೈಲಾಗ್ ಹೊಡೆಯಬೇಕು. ಮಾಸ್ ಸೀನ್​ಗಳಲ್ಲಿ ಅಬ್ಬರಿಸಬೇಕು. ಅದೇ ಸಾಹಸವನ್ನು ನಾಯಕಿ ಮಾಡಿದರೆ ಅದರಲ್ಲಿ ಕುತೂಹಲ ಇರುವುದಿಲ್ಲ. ಹಾಗಾಗಿ ಯಾರಿಗೆ ಏನು ಬೇಕೋ ಅದನ್ನು ಕೊಡಬೇಕಿದೆ.

ಮೌಲ್ಯದ ಮೇಲೆ ಅವಲಂಬಿತ: ಸಂಭಾವನೆ ವಿಚಾರದಲ್ಲಿ ಧಾರಾವಾಹಿ ನಟಿಯರು ಯಾರಿಗೂ ಕಡಿಮೆ ಇಲ್ಲದಂತೆ ಸಂಭಾವನೆ ಪಡೆಯುತ್ತಿದ್ದಾರೆ. ಆ ಧಾರಾವಾಹಿಯ ನಿರ್ವಪಕರಿಗಿಂತ ಶ್ರೀಮಂತರಾಗುತ್ತಿದ್ದಾರೆ. ಆದರೆ, ಸಿನಿಮಾದಲ್ಲಿ ಕಡಿಮೆ ಸಂಭಾವನೆ ಇದೆಯಾದರೂ, ಅದು ಅವರವರ ಸ್ಟಾರ್​ಗಿರಿ ಮತ್ತು ಮೌಲ್ಯದ ಮೇಲೆ ಅವಲಂಬಿತವಾಗಿರುತ್ತದೆ. ಸಮಂತಾ ಒಂದು ಹಾಡಿಗೆ ನೃತ್ಯ ಮಾಡಿದರೆ ಕೋಟಿ ಕೋಟಿ ಪಡೆಯುತ್ತಾರೆ. ಅದು ಅವರು ಸೃಷ್ಟಿಸಿಕೊಂಡಿರುವ ಬ್ರಾಂಡ್. ನಮ್ಮಲ್ಲೂ ಸಾಕಷ್ಟು ನಟಿಯರಿದ್ದಾರೆ. ಮಹಿಳಾ ಪ್ರಧಾನ ಸಿನಿಮಾ ಮಾಡಿದ್ದಾರೆ. ಆ ಚಿತ್ರವನ್ನು ಗೆಲ್ಲಿಸಿದರೆ, ಅವರ ಮೌಲ್ಯವೂ ಹೆಚ್ಚಾಗುತ್ತದೆ.

ಇಲ್ಲಿ ಅವಕಾಶಗಳು ವಿಪುಲ: ಆಡಿಷನ್​ಗೆ ಬಂದ ಎಲ್ಲರೂ ಆಯ್ಕೆ ಆಗುವುದಿಲ್ಲ. ಹಾಗಂತ ಬೇಸರಗೊಳ್ಳುವುದು. ಖಿನ್ನತೆಗೆ ಜಾರುವುದು ಸರಿಯಲ್ಲ. ನಾಯಕಿಯೇ ಆಗಬೇಕು ಎಂದು ಅಂದುಕೊಳ್ಳುವುದೇಕೆ. ಇದೇ ಕ್ಷೇತ್ರದಲ್ಲಿ ಹಲವು ಅವಕಾಶಗಳಿವೆ. ಹೇರ್​ಸ್ಟೈಲಿಸ್ಟ್ ಆಗಬಹುದು, ವಿಡಿಯೋ ಜಾಕಿ, ರೇಡಿಯೋ ಜಾಕಿ, ಮೇಕಪ್ ಆರ್ಟಿಸ್ಟ್ ಆಗಬಹುದಲ್ಲ. ನಾನೂ ನಿರೂಪಕಿಯಿಂದ ಈ ಪ್ರಯಾಣ ಆರಂಭಿಸಿದವಳು. ಆಮೇಲೆ ನಟಿಯಾದೆ, ನಿರ್ದೇಶಕಿಯಾದೆ, ನಿರ್ವಪಕಿಯಾಗಿ ಇದೀಗ ನೂರಾರು ಮಂದಿ ನನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ದುಡುಕಬೇಡಿ.

ಆರೋಗ್ಯವೇ ಮೊದಲು: ಸಾಧನೆಗಿಂತ ನಮ್ಮ ಆರೋಗ್ಯವೇ ಮೊದಲು. ಅದು ಚೆನ್ನಾಗಿದ್ದರೆ ಎಲ್ಲವೂ ಸುಲಭ. ಅವಕಾಶ ತಪ್ಪಿದರೆ ತಲೆ ಕೆಡಿಸಿಕೊಳ್ಳದೆ, ತಾಳ್ಮೆಯ ಮೊರೆ ಹೋಗಬೇಕು. ದಿಢೀರ್ ಬಾಡಿ ಬಿಲ್ಡ್ ಮಾಡಬೇಕು, ಸ್ಲಿಮ್ ಆಗಬೇಕೆಂದು ಸುಖಾ ಸುಮ್ಮನೆ ಮೈಮೇಲೆ ಒತ್ತಡ ಎಳೆದುಕೊಳ್ಳದೆ, ಮಾನಸಿಕ ಒತ್ತಡ ತಗ್ಗಿಸಿಕೊಂಡು ಮನಸ್ಥಿತಿ ಗಟ್ಟಿಗೊಳಿಸಬೇಕು. ಮೊದಲೇ ಮಹಿಳೆಯರಿಗೆ ಆರೋಗ್ಯದ ಸಮಸ್ಯೆ ಹೆಚ್ಚು. ಖಿನ್ನತೆ ಮತ್ತಷ್ಟು ಕಾಯಿಲೆಗೆ ದಾರಿ ಮಾಡಿಕೊಡುತ್ತದೆ. ಸಾಧ್ಯವಾದಷ್ಟು ಶಾಂತವಾಗಿರಿ. ಮಾನಸಿಕ ಆರೋಗ್ಯದ ಕಡೆ ಗಮನಹರಿಸಿ.

ಸ್ಥಾನ ಗಟ್ಟಿಯಾದರೆ, ತಲೆ ತಗ್ಗಿಸುವ ಅವಶ್ಯಕತೆ ಇಲ್ಲ: ಸಮಾಜದಲ್ಲಿ ಏನೇ ಆದರೂ ಮಹಿಳೆ ತಲೆ ತಗ್ಗಿಸುವ ಸ್ಥಿತಿ ಈಗಲೂ ಇದೆ. ಅದಕ್ಕೊಂದಿಷ್ಟು ಕ್ರಾಂತಿಗಳಾಗಬೇಕು. ಮಹಿಳೆಯರು ಹೆಚ್ಚೆಚ್ಚು ವಿದ್ಯಾವಂತರಾಗಿ, ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ನಮಗೆ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ಮಾಡಬೇಕು. ಆಗ ಮಾತ್ರ ನಾವು ಯಾರ ಮುಂದೆಯೂ ತಲೆ ತಗ್ಗಿಸುವ ಪ್ರಮೇಯವೇ ಬರಲ್ಲ.

ನಮಗೆ ನಾವೇ ಸೆಲೆಬ್ರೇಟ್ ಮಾಡಬೇಕು: ವಿಶ್ವ ಮಹಿಳಾ ದಿನಾಚರಣೆ ಮಾಡುತ್ತಾರೆ ಎಂದರೆ ಅದಕ್ಕೊಂದು ಹಿನ್ನೆಲೆ ಇರುತ್ತದೆ. ಆ ದಿನ ನಮ್ಮದೇ. ಅದನ್ನು ಅರ್ಥಪೂರ್ಣವಾಗಿಸಬೇಕು. ಮಹಿಳೆ ಎಂದರೇನೇ ವಿಶೇಷತೆ. ನಮ್ಮಲ್ಲಿರುವ ಶಕ್ತಿ ಬೇರೆಯವರಲ್ಲಿ ಇಲ್ಲ. ಅದನ್ನು ನಾವು ಮೊದಲು ಸಂಭ್ರಮಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net