

ಮುಂಬೈ: ಟೀಮ್ ಇಂಡಿಯಾದ (Team India) ಕೋಚ್ ಆಗಿ ಗೌತಮ್ ಗಂಭೀರ್ (Gautam Gambhir) ಅಧಿಕಾರ ವಹಿಸಿಕೊಂಡ ಬಳಿಕ ಭಾರತ ತಂಡ ಎರಡು ದ್ವಿಪಕ್ಷೀಯ ಸರಣಿಯಲ್ಲಿ ಸೋಲುಂಡಿದ್ದು, ಇದು ಚರ್ಚಾಸ್ಪದ ವಿಚಾರವಾಗಿದೆ. 17 ಆವೃತ್ತಿಯ ಐಪಿಎಲ್ನಲ್ಲಿ ಕೆಕೆಆರ್ ತಂಡದ ಮೆಂಟರ್ ಆಗಿ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟ ಬೆನ್ನಲ್ಲೇ ಗೌತಮ್ ಗಂಭೀರ್ (Gautam Gambhir) ಭಾರಿ ಹೈಪ್‌ನೊಂದಿಗೆ ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಭಾರತ ತಂಡದ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದರು. ಬಿಸಿಸಿಐ ಅವರು ಕೇಳಿದ ದುಬಾರಿ ವೇತನ, ಇಬ್ಬರು ಸಹಾಯಕ ಕೋಚ್ ಮತ್ತು ಬೌಲಿಂಗ್ ಕೋಚ್‌ಗಳನ್ನೇ ನೀಡಿ ಪೂರ್ಣಬೆಂಬಲ ಒದಗಿಸಿತ್ತು. ಇದರಿಂದ ಕ್ರಿಕೆಟ್ ಪ್ರೇಮಿಗಳು ಟೀಮ್ ಇಂಡಿಯಾ ಮೇಲೆ ಭಾರಿ ನಿರೀಕ್ಷೆಗಳನ್ನು ಇಟ್ಟಿದ್ದರು.
ಅಭಿಮಾನಿಗಳು ಇಟ್ಟಿರುವ ನಿರೀಕ್ಷೆಯನ್ನು ಗೌತಮ್ ಗಂಭೀರ್ (Gautam Gambhir) ಹುಸಿಯಾಗಿಸಿದ್ದು, ಭಾರತ ದ್ವಿಪಕ್ಷೀಯ ಸರಣಿಗಳಲ್ಲಿ ಸೋಲುವ ಮೂಲಕ ಅನಪೇಕ್ಷಿತ ದಾಖಲೆಗಳಿಗೆ ಕೊರಳೊಡ್ಡುತ್ತಿದೆ. ಗಂಭೀರ್ (Gautam Gambhir) ಕೋಚ್ ಆಗಿ 3 ತಿಂಗಳ ಅವಧಿಯಲ್ಲೇ ಭಾರತ 2 ಪ್ರಮುಖ ಸರಣಿ ಸೋಲಿನ ಶಾಕ್ ಎದುರಿಸಿದೆ. ಆಗಸ್ಟ್‌ನಲ್ಲಿ ಶ್ರೀಲಂಕಾದಲ್ಲಿ 27 ವರ್ಷಗಳ ಬಳಿಕ ಏಕದಿನ ಸರಣಿ ಸೋತಿದ್ದ ಭಾರತ ಈಗ ಕಿವೀಸ್ ವಿರುದ್ಧ ಮೊದಲ ಬಾರಿ ತವರಿನಲ್ಲಿ ಟೆಸ್ಟ್ ಸರಣಿ ಬಿಟ್ಟುಕೊಟ್ಟಿದೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಗಂಭೀರ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ (Aakash Chopra) ಕೂಡ ಈ ಬಗ್ಗೆ ಮಾತನಾಡಿದ್ದು ಗಂಭೀರ್ (Gautam Gambhir) ವಿರುದ್ಧ ಕಿಡಿಕಾರಿದ್ದಾರೆ.
ಯಾವುದೇ ಕಾರಣಕ್ಕೂ ಭಾರತ ತಂಡ ಟೆಸ್ಟ್ ಸರಣಿಯ ಮೂರನೇ ಪಂದ್ಯವನ್ನು ಸೋಲಬಾರದು. ಏಕೆಂದರೆ ಈ ಪಂದ್ಯಕ್ಕೆ WTC ಅಂಕಗಳು ಒಳಗೊಂಡಿದ್ದು, ಭಾರತ ತಂಡ ಈ ಪಂದ್ಯ ಗೆದ್ದರೆ ಸರಣಿಯ ಶೇ. 33ರಷ್ಟು ಅಂಕಗಳನ್ನು ಪಡೆಯುತ್ತದೆ. ಗೌತಮ್ ಗಂಭೀರ್ (Gautam Gambhir) ಅವರ ಅಧಿಕಾರಾವಧಿಯಲ್ಲಿ ಈಗಾಗಲೇ ಹಲವಾರು ಕುಖ್ಯಾತ ದಾಖಲೆಗಳು ಸೃಷ್ಟಿಯಾಗಿವೆ. ಈ ಪಂದ್ಯ ಏನಾದರೂ ಸೋತರೆ ನೀವು ಮುಂದಿನ ದಿನಗಳಲ್ಲಿ ಯಾವುದೇ ದಾಖಲೆಯನ್ನು ಮುರಿಯುವುದು ಬೇಡ ಎಂದು ಹೇಳುತ್ತೀರಾ.
ನನ್ನ ಮಾತನ್ನು ಗಂಭೀರವಾಗಿ ಪರಿಗಣಿಸಿ. ಏಕೆಂದರೆ ನಾವು ಎಂದಿಗೂ ಮೂರು ಪಂದ್ಯಗಳ ತವರಿನ ಸರಣಿಯನ್ನು 3-0 ಅಂತರದಲ್ಲಿ ಕಳೆದುಕೊಂಡಿಲ್ಲ. ಎರಡು ಪಂದ್ಯಗಳ ಸರಣಿಯಲ್ಲಿ ನಾವು ಒಮ್ಮೆ ವೈಟ್‌ವಾಶ್ ಆಗಿದ್ದೇವೆ ಆದರೆ ಮೂರು ಪಂದ್ಯಗಳಲ್ಲಿ ಇದು ಸಂಭವಿಸಿಲ್ಲ. ನಾವು ಆ ದಾಖಲೆಯ ಹೊಸ್ತಿಲಲ್ಲಿದ್ದೇವೆ, ಅದನ್ನು ಮುರಿಯಬೇಡಿ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ (Aakash Chopra) ಅಭಿಪ್ರಾಯಪಟ್ಟಿದ್ದಾರೆ.