ಮಾನ್ವಿತಾ-ಆಶಿಕಾಗೆ ಹ್ಯಾಕರ್ಸ್ ಕಾಟ; ನಮ್ ಹುಷಾರಲ್ಲಿ ನಾವು ಇರಬೇಕಷ್ಟೇ..

page 10 1
Published on

ಬೆಂಗಳೂರು: ಸಿನಿಮಾ ತಾರೆಯರಿಗೆ ಹ್ಯಾಕರ್ಸ್ ಕಾಟ ತಪ್ಪಿದ್ದಲ್ಲ. ಈ ಹಿಂದೆ ಸ್ಟಾರ್ ನಟ-ನಟಿಯರ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡಿದ ಹಲವು ಉದಾಹರಣೆಗಳಿವೆ. ಈಗ ಕನ್ನಡದ ಇಬ್ಬರು ಜನಪ್ರಿಯ ನಟಿಯರು ಅದಕ್ಕೆ ತುತ್ತಾಗಿದ್ದಾರೆ. ಹೀಗೆ ಸೋಷಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆದವರು ಮಾನ್ವಿತಾ ಕಾಮತ್ ಮತ್ತು ಆಶಿಕಾ ರಂಗನಾಥ್.

ಶನಿವಾರ ಮಾನ್ವಿತಾರ ಇನ್​ಸ್ಟಾಗ್ರಾಂ ಖಾತೆಗೆ, ಕಾಪಿರೈಟ್ ಕುರಿತಾದ ಒಂದು ಮೆಸೇಜ್ ಬಂದಿದೆ. ಆ ಮೆಸೇಜ್ ತೆಗೆಯುತ್ತಿದ್ದಂತೆಯೇ ಹ್ಯಾಕ್ ಆಗಿದೆ. ಅಷ್ಟೇ ಅಲ್ಲ, ಅವರ ಅಕೌಂಟ್​ನಿಂದ ಬೇರೆಯವರಿಗೂ ಅದೇ ತರಹ ಮೆಸೇಜ್ ಹೋಗಿದೆ. ಆ ಪೈಕಿ ಆಶಿಕಾ ರಂಗನಾಥ್ ಸಹ ಒಬ್ಬರು. ಅವರಿಗೂ ಅದೇ ಸಮಸ್ಯೆ ಎದುರಾದಾಗ, ತಕ್ಷಣ ಎಚ್ಚೆತ್ತುಕೊಂಡಿದ್ದಾರೆ. ತಮ್ಮ ಅಕೌಂಟ್ ಹ್ಯಾಕ್ ಆಗಿದೆ ಎಂಬ ಸಂದೇಶವನ್ನೂ ರವಾನಿಸಿದ್ದಾರೆ. ಮಾನ್ವಿತಾಗೂ ಫೋನ್ ಮಾಡಿ ಈ ರೀತಿ ಆಗಿದೆ ಎಂದು ಎಚ್ಚರಿಸಿದ್ದಾರೆ. ಕೊನೆಗೆ ಇಬ್ಬರೂ ತಮ್ಮ ಖಾತೆಗಳನ್ನು ರೀಸೆಟ್ ಮಾಡಿಕೊಂಡಿದ್ದಾರೆ. ರೀಸೆಟ್ ಮಾಡಿಕೊಂಡ ನಂತರ ಖಾತೆ ಅವರ ಸುಪರ್ದಿಗೆ ವಾಪಸ್ ಬಂದಿದೆ.

ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಮಾನ್ವಿತಾ, ‘ಅವರು ಕಳಿಸಿದ ಲಿಂಕ್ ಬಹಳ ಒರಿಜಿನಲ್ ಆಗಿತ್ತು. ಯಾರೋ ಹ್ಯಾಕರ್ಸ್ ಕಳಿಸಿರಬಹುದು ಎಂದು ಗೊತ್ತಾಗದಷ್ಟು ನೈಜವಾಗಿತ್ತು. ಹಾಗಾಗಿ ಅವರು ಕಳಿಸಿದ ಲಿಂಕ್ ಓಪನ್ ಮಾಡಿದೆ. ಆ ನಂತರ ನನ್ನ ಅಕೌಂಟ್ ಹ್ಯಾಕ್ ಆಯ್ತು. ನನ್ನ ಅಕೌಂಟ್​ನಿಂದ ಬೇರೆಯವರಿಗೆ ಅದೇ ರೀತಿ ಮೆಸೇಜ್​ಗಳು ಹೋಗುತ್ತಿವೆ ಎಂದು ಗೊತ್ತಾಗುವುದಕ್ಕೆ ಸ್ವಲ್ಪ ಸಮಯವಾಯಿತು. ನನ್ನ ಯೂಸರ್​ನೇಮ್ ಬದಲಾಗಿರಲಿಲ್ಲ. ತಕ್ಷಣವೇ ಸರಿಪಡಿಸಿಕೊಂಡೆ. ಯಾರೋ ಟರ್ಕಿಶ್ ಹ್ಯಾಕ್ ಮಾಡಿದ್ದರು. ನನ್ನ ಅಕೌಂಟ್​ನಿಂದ ಕೆಲವು ಫೋಟೋಗಳು ಡಿಲೀಟ್ ಆಗಿವೆ. ಅದು ಬಿಟ್ಟು ಬೇರೆ ಸಮಸ್ಯೆ ಆಗಿಲ್ಲ’ ಎನ್ನುತ್ತಾರೆ ಮಾನ್ವಿತಾ.

ಆಶಿಕಾಗೆ ಹೀಗಾದಾಗ ಭಯವಾಯಿತಂತೆ. ‘ನಿಜಕ್ಕೂ ಭಯವಾಯಿತು. ಇನ್ನು ಮುಂದೆ ಬಹಳ ಹುಷಾರಾಗಿರಬೇಕು. ಈ ತರಹ ಸಂದೇಶಗಳು ಬಂದರೆ ನಂಬಬಾರದು. ಇದನ್ನೆಲ್ಲಾ ಯಾಕೆ ಮಾಡ್ತಾರೋ ಗೊತ್ತಿಲ್ಲ. ಆದರೆ, ನಾವು ನಮ್ಮ ಸೇಫ್ಟಿಯಲ್ಲಿ ಇರಬೇಕು ಅಂತ ಇದರಿಂದ ಬಹಳ ಚೆನ್ನಾಗಿ ಅರ್ಥವಾಯಿತು. ಗೊತ್ತಿಲ್ಲದ ಯಾವುದೇ ಮೆಸೇಜ್​ಗಳನ್ನು ಕ್ಲಿಕ್ ಮಾಡಬೇಡಿ. ನಿಮ್ಮ ಹುಷಾರಿನಲ್ಲಿ ನೀವಿರಿ’ ಎಂದು ಸಲಹೆ ಕೊಡುತ್ತಾರೆ ಆಶಿಕಾ.

ಕೆಲವೇ ದಿನಗಳ ಹಿಂದೆ ನಟಿ ಪೂಜಾ ಹೆಗ್ಡೆಗೂ ಇದೇ ರೀತಿಯ ಅನುಭವವಾಗಿತ್ತು. ಯಾರೋ ಅವರ ಇನ್​ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಮಾಡಿ, ತರಲೆ ಮಾಡಿದ್ದರು. ಸಮಂತಾ ಅಕ್ಕಿನೇನಿ ಫೋಟೋ ಹಾಕಿ, ‘ಐ ಡೋಂಟ್ ಫೈಂಡ್ ಹರ್ ಪ್ರೆಟ್ಟಿ ...’ ಎಂದು ಸಂದೇಶ ಹಾಕಿದ್ದರು. ಈ ವಿಷಯ ಮೊದಲು ಪೂಜಾ ಗಮನಕ್ಕೆ ಬಂದಿರಲಿಲ್ಲವಂತೆ. ಒಂದಿಷ್ಟು ಜನ ಗಮನಕ್ಕೆ ತಂದ ತಕ್ಷಣವೇ ಕಾರ್ಯಪ್ರವೃತ್ತರಾದ ಪೂಜಾ, ತಮ್ಮ ತಾಂತ್ರಿಕ ತಂಡದವರಿಗೆ ಇದನ್ನು ಸರಿಪಡಿಸುವ ಜವಾಬ್ದಾರಿ ಕೊಟ್ಟಿದ್ದಾರೆ. ಎರಡು ಗಂಟೆಗಳ ನಂತರ ಹ್ಯಾಕರ್​ಗಳಿಂದ ಅಕೌಂಟ್ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತೀಚೆಗೆ ಹ್ಯಾಕಿಂಗ್ ಜಾಸ್ತಿಯಾಗಿದೆ ಎಂಬ ಸುದ್ದಿ ಕೇಳಿ, ಮೂರು ದಿನಗಳ ಹಿಂದಷ್ಟೇ ಅಮ್ಮ ಎಚ್ಚರಿಸಿದ್ದರು. ಓಕೆ ಅಂದ ನಾನೇ, ಈ ಸಮಸ್ಯೆ ಎದುರಿಸಬೇಕಾಯಿತು. | ಮಾನ್ವಿತಾ ಕಾಮತ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net