

ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ವನೆ |
ವಿಕ್ರಮಾರ್ಜಿತ ಸತ್ವಸ್ಯ ಸ್ವಯಮೇವ ಮೃಗೇಂದ್ರತಾ ||
ಅರ್ಥ: ‘ಸಿಂಹಕ್ಕೆ ಯಾವ ಪ್ರಾಣಿಗಳೇ ಆಗಲಿ ಪೂಜೆ ಮಾಡಿಯಾಗಲಿ(ಸಂಸ್ಕಾರ), ಅಭಿಷೇಕ ಮಾಡಿಯಾಗಲೀ ವನರಾಜನ ಪಟ್ಟವನ್ನು ಕಟ್ಟಿಲ್ಲ. ಸಿಂಹಕ್ಕೆ ತನ್ನದೇ ಆದ ಗುಣ ಮತ್ತು ಪರಾಕ್ರಮದಿಂದ ಪದವಿ ಸಿಕ್ಕಿದೆ’.
ಈ ಪ್ರಪಂಚದಲ್ಲಿ ಅದೃಷ್ಟಕ್ಕೆ ಒಲಿಯುವುದು ಬಹುಶಃ ಲಾಟರಿಯೊಂದೇ! ಇನ್ನುಳಿದ ಎಲ್ಲ ಸಂಗತಿಗಳು ನಮ್ಮ ಅರ್ಹತೆ, ಬುದ್ಧಿಮಟ್ಟ, ಸಾಮರ್ಥ್ಯಕ್ಕೆ ತಕ್ಕ ಪ್ರಮಾಣದಲ್ಲೇ ಸಿಗುತ್ತವೆ. ಸಿಗಲಿಲ್ಲವೆಂದರೆ ಒಂದೋ ನಮಗೆ ಯೋಗ್ಯತೆ ಅಥವಾ ಅರ್ಹತೆ ಇಲ್ಲದಿರಬಹುದು. ಅಥವಾ ಆ ಅರ್ಹತೆ ನಮಗಿದ್ದೂ ಕೂಡ ಅದನ್ನು ನಾವು ಸರಿಯಾಗಿ ಬಳಸಿಕೊಳ್ಳದೆ ಇರಬಹುದು. ನಮ್ಮಲ್ಲಿ ಯೋಗ್ಯತೆ ಇದೆ ಎಂದ ಮೇಲೆ ಅದನ್ನು ಗುರುತಿಸುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ.
ಬುದ್ಧಿವಂತರು ಹೆಸರು ಗಳಿಸುತ್ತಾರೆ. ಚೆನ್ನಾಗಿ ಕಲಿತವರು ಅದಕ್ಕೆ ಸಮನಾದ ಹುದ್ದೆ ಅಥವಾ ಪಟ್ಟ ಪಡೆಯುತ್ತಾರೆ. ಕಷ್ಟಪಟ್ಟು ಅದಕ್ಕೆ ಯೋಗ್ಯವಾದ ಸಂಬಳ ಪಡೆಯುತ್ತಾರೆ. ಇವೆಲ್ಲವುಗಳು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿಯೇ ಬರುತ್ತವೆ ಎಂಬುದನ್ನು ಮರೆಯಬಾರದು. ‘ನಾನಿರುವುದೇ ಹೀಗೆ, ಬರುವುದೆಲ್ಲ ನನಗೆ ಬರಲಿ’ ಎಂದು ತಟಸ್ಥವಾಗಿ ಕುಳಿತುಕೊಂಡರೆ ಏನೂ ಬರುವುದಿಲ್ಲ. ಏಕೆಂದರೆ ಉಪಯೋಗ ಅಥವಾ ಪ್ರಯೋಜನ ಆಗಬೇಕಾದ್ದು ನಮಗೆ ವಿನಃ ಇನ್ನಾರಿಗೂ ಅಲ್ಲವಲ್ಲ. ಅವರವರ ಕರ್ಮ ಅವರವರು ಅನುಭವಿಸಲೇಬೇಕು.
ನಾಯಕನ ಗುಣ ಇರುವವನು ನಾಯಕನಾಗಿಯೇ ಬೆಳೆಯುತ್ತಾನೆ. ಜನ ಕೂಡ ಗುರುತಿಸುತ್ತಾರೆ. ಅದನ್ನು ಯಾರಿಂದಲೂ ಕೇಳಿ ಪಡೆಯುವಂಥದ್ದಲ್ಲ. ಶಕುಂತಲೆ ಕಣ್ವಾಶ್ರಮದಲ್ಲಿ ಜನ್ಮ ನೀಡಿದರೂ, ಅವಳ ಮಗ ಕಾಡಿನಲ್ಲೇ ಬೆಳೆದರೂ ಆತ ಚಕ್ರವರ್ತಿ ಆಗಲಿಲ್ಲವೇ? ಅವನಿಗೆ ಆ ಅರ್ಹತೆ ಇತ್ತು. ಸಿಂಹಕ್ಕೆ ಕಾಡಿನ ರಾಜ (ವನರಾಜ) ಎಂಬ ಪಟ್ಟ ಸಿಗುವುದು ಹಾಗೆಯೇ. ವಜ್ರ ಚಿಕ್ಕದಿದ್ದರೂ ಅದರ ಹೊಳಪು, ಗುಣ ಅದರದ್ದೇ ಎಂದಾದರೆ ಸಿಗಬೇಕಾದ ಜನಮನ್ನಣೆ ಎಲ್ಲಿ ಹೋದರೂ ಸಿಕ್ಕೆ ಸಿಗುತ್ತದೆ. ನಾವೂ ಹೇಗಿರಬೇಕೋ ಹಾಗಿದ್ದರೆ ನಮಗೆ ಸಿಗಬೇಕಾದುದು ಸಿಕ್ಕೆ ಸಿಗುತ್ತದೆ. ಆದರೆ ನಾವು ನಮಗೆ ಬೇಕಾದಂತೆ ಇದ್ದು, ಅದು ಸಿಗಲಿಲ್ಲ, ಇದು ಸಿಗಲಿಲ್ಲ ಎಂದು ಕೊರಗುವುದರಲ್ಲಿ ಅರ್ಥವಿದೆಯೇ? ಹಾಗಾಗಿ, ನಮ್ಮ ಸಾಮರ್ಥ್ಯ, ಪ್ರತಿಭೆ, ಅಂತಃಶಕ್ತಿಗಳನ್ನು ಅರ್ಥಮಾಡಿಕೊಂಡು ಸಾರ್ಥಕವಾಗಿ ಬದುಕೋಣ. ಬದುಕಿನಜಾತ್ರೆಯಲ್ಲಿ ಖುಷಿಯಿಂದ ಮುಂದೆ ಸಾಗೋಣ.
| ಜಯಶ್ರೀ ತಿಳವಳ್ಳಿ
(ಲೇಖಕಿ ಹವ್ಯಾಸಿ ಬರಹಗಾರ್ತಿ)