More

    ವಿಜಯವಾಣಿ ಮನೋಲ್ಲಾಸ: ಗುಣ ಗ್ರಹಿಸೋಣ ದೋಷಗಳನ್ನಲ್ಲ!

    ಒಬ್ಬ ಸಾಗರದ ನೀರನ್ನು ಕುಡಿದು, ‘ಏನು, ಈ ಸಾಗರದ ನೀರು ಬರೀ ಉಪ್ಪಾಗಿದೆ’ ಎಂದ. ಅದಕ್ಕೆ ಸಾಗರ ಹೇಳಿತು-‘ಎಲ್ಲಿ ಏನು ನೋಡಬೇಕು ಅದಾದರೂ ನಿನಗೆ ಗೊತ್ತಿದೆಯೇ?’ ಆಗ ಆತ ಕೇಳಿದ, ‘ನೀರಿನಲ್ಲಿ ರುಚಿಯನ್ನು ನೋಡಬಾರದೇ?’ ಸಾಗರ ಹೇಳಿತು, ‘ರುಚಿಯನ್ನೇ ನೋಡುವುದಿದ್ದರೆ ನಿರಂತರ ಉಕ್ಕಿ ಹರಿಯುವ ಹೊಳೆ ಹಳ್ಳಗಳಿಗೆ ಮೈದುಂಬಿ ನಿಂತಿರುವ ಕೆರೆ, ಬಾವಿಗಳಿಗೆ ಹೋಗಬೇಕು’. ‘ಹಾಗಾದರೆ ನಿನ್ನಲ್ಲಿ ಇರುವುದೇನು?’ ‘ಮನುಷ್ಯನೇ, ಸಿಹಿನೀರಿನ ನದಿ ತೊರೆಗಳಿಗೆ, ಕೆರೆ, ಬಾವಿಗಳಿಗೆಲ್ಲ ನನ್ನೊಡಲೇ ಮೂಲ! ಅಸಂಖ್ಯಾತ ಜಲಚರಗಳಿಗೆಲ್ಲ ನನ್ನದೇ ಆಶ್ರಯ. ನನ್ನ ನೀರು ಉಪ್ಪಾದರೇನಂತೆ ನನ್ನ ಆಳ, ಅಗಲ, ರಾಜಗಾಂಭಿರ್ಯ ನಿನಗೆ ಕಾಣದೇ?’ ಸಾಗರದ ಸವಿಮಾತು ಕೇಳಿದ ಮನುಷ್ಯನಿಗೆ ಗುಣದೋಷಗಳನ್ನು ಹೇಗೆ ಗ್ರಹಿಸಬೇಕೆನ್ನುವ ಅರಿವು ಮೂಡಿತು.

    ‘ಪ್ರತಿಯೊಂದು ವಸ್ತುವಿನಲ್ಲೂ ದೋಷವಿದ್ದೇ ಇರುತ್ತದೆ. ಯಾವುದರಲ್ಲೂ ಪೂರ್ಣತೆ ಇರುವುದಿಲ್ಲ’ ಎಂದು ಕಾಳಿದಾಸ ಹೇಳಿದ ನುಡಿ ಹೊನ್ನುಡಿ. ನಾವು ಬಹಳಷ್ಟು ಸಲ ಇತರರಲ್ಲಿರುವ ಗುಣಗಳನ್ನು ಗ್ರಹಿಸದೆ ದೊಷಗಳತ್ತ ಕೇಂದ್ರೀಕರಿಸುತ್ತೇವೆ. ಇಲ್ಲದಿರುವುದನ್ನೇ ಎತ್ತಿ ಆಡುತ್ತೇವೆ. ಇರುವುದನ್ನು ಗುರುತಿಸುವುದಿಲ್ಲ. ಗುರುತಿಸಿದರೂ ಪ್ರಶಂಸಿಸುವುದನ್ನು ಮರೆಯುತ್ತೇವೆ. ಜಗದ ಯಾವ ವಸ್ತುವಿರಲಿ ಅಥವಾ ವ್ಯಕ್ತಿಯಿರಲಿ ದೋಷ ಮುಕ್ತವಾಗಿಲ್ಲ. ನಮ್ಮಲ್ಲಿರುವುದರ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತ ಇತರರಲ್ಲಿ ಇಲ್ಲದುದರ ಕುರಿತು ಹಂಗಿಸುತ್ತೇವೆ. ಬೇರೆಯವರ ಸದ್ಗುಣಗಳ ಮೆಚ್ಚುವ ಅವು ಗಳನ್ನು ಅನುಸರಿಸುವ ಜಾಯ ಮಾನ ಬೆಳೆಸಿಕೊಳ ್ಳೇಕಿದೆ. ದೋಷಗಳಿವೆ ಎಂದ ಮಾತ್ರಕ್ಕೆ ಅವುಗಳಿಗೆ ಜೋತು ಬಿದ್ದು ಜೀವನ ಸವೆಸುವುದಲ್ಲ. ಅವುಗಳ ಮೇರೆ ಮೀರಿ ಗುಣಗಳ ಸಹಾಯದಿಂದ ಬದುಕು ಕಟ್ಟಿಕೊಳ್ಳಲು ಅವಕಾಶಗಳಿವೆ.ಬದುಕಿನ ಔನತ್ಯವು ದೋಷ, ಲೋಪಗಳ ರಾಶಿಯಲ್ಲಿ ಬೀಳುವುದರಲ್ಲಿಲ್ಲ. ಬದಲಾಗಿ ಮನುಷ್ಯನಿಗಿಂತ ಮೇಲ್ಮಟ್ಟದಲ್ಲಿ ಜೀವಿಸುವಂಥದ್ದು. ಗುಣಗ್ರಾಹಿಗಳಾಗಿ ನಡೆದುಕೊಳ್ಳುವುದರಲ್ಲಿದೆ. ನಮ್ಮ ದ್ವೇಷ, ಅಸೂಯೆಯನ್ನು ಕಕ್ಕುತ್ತ ಯಥೇಚ್ಛವಾಗಿ ದೋಷಗಳನ್ನು ಬಯಲಿಗೆಳೆದು ಹೀಯಾಳಿಸುವುದು ಸೂಕ್ತವಲ್ಲ. ನಮ್ಮಲ್ಲಿಯ ದೋಷಗಳನ್ನು ತಿಳಿಯಪಡಿಸುವುದಕ್ಕೆ ತಿದ್ದಿಕೊಳ್ಳುವುದಕ್ಕೆ ಹಿರಿಯರ ಹಿತೈಷಿಗಳ ಮಾರ್ಗದರ್ಶನ ಪಡೆಯುವುದು ಸೂಕ್ತ ಮಾರ್ಗ. ಉತ್ತಮವಾದುದನ್ನು ಗುರುತಿಸುವುದೇ ಮಹಾನ್ ಗುಣಿಗಳ ಲಕ್ಷಣ. ಉತ್ತಮ ಬೀಜ ಬಿತ್ತಿದರೂ ಕಳೆ ಬೆಳೆಯುತ್ತಲೇ ಇರುತ್ತದೆ. ಕಳೆಯಂತಿರುವ ದೋಷಗಳನ್ನು ಕಿತ್ತೊಗೆಯಲು ಪ್ರಯತ್ನಿಸಲೇಬೇಕು. ನಮ್ಮ ದೋಷಗಳಿಗಾಗಿ ಪರದೂಷಣೆ ತರವಲ್ಲ. ‘ಒಂದೇ ಗರಿಗಳುಳ್ಳ ಹಕ್ಕಿಗಳು ಒಂದೆಡೆ ಸೇರುತ್ತವೆ’ ಎಂಬ ನಾಣ್ಣುಡಿಯಂತೆ ದೋಷಗಳುಳ್ಳ ನಾವೆಲ್ಲರೂ ನಾವು ಹೇಗಿದ್ದೆವೆಯೋ ಹಾಗೆಯೇ (ದೋಷಗಳ ಸಮೇತ) ಸ್ವೀಕರಿಸಬೇಕು. ಇತರರ ಸದ್ಗುಣಗಳು ನಮ್ಮ ಗಮನಕ್ಕೆ ಬರುವುದಿಲ್ಲ. ದೋಷಗಳು ಕಣ್ಣು ಕುಕ್ಕುತ್ತವೆ. ದೋಷವಿಲ್ಲದಿರುವುದು ಸದ್ಗುಣವಲ್ಲ. ದೋಷ ಮೀರಿ ನಿಲ್ಲುವುದು ಸದ್ಗುಣ. ಇಷ್ಟಕ್ಕೂ ದೋಷಗಳ ಪ್ರಶ್ನೆಗೆ ಗುಣವೆಂಬ ಚಾಲಕಶಕ್ತಿಯಿಂದ ಉತ್ತರಿಸಬಲ್ಲೆವು. ನಮ್ಮ ನಿಜವಾದ ಸಂಪತ್ತು ನಮ್ಮ ಗುಣಗಳು. ಒಂದು ಕೈ ಮತ್ತೊಂದನ್ನು ತೊಳೆಯುತ್ತದೆ. ಅಂತೆಯೇ ದೋಷಗಳನ್ನು ಗೆಲ್ಲಲು ಸಹಕರಿಸೋಣ. ಬದುಕು ಹಸನಾಗಿಸಿಕೊಳ್ಳೋಣ.

    | ಜಯಶ್ರೀ ಜೆ. ಅಬ್ಬಿಗೇರಿ

    (ಲೇಖಕಿ ಆಂಗ್ಲಭಾಷಾ ಉಪನ್ಯಾಸಕಿ)

    ಮನೋಲ್ಲಾಸ: ಭಗವಂತನ ಒಲುಮೆಗೆ ಭಕ್ತಿಯೊಂದೆ ಸಾಕು! 

    ‘ಮಲ್ನಾಡ ಮೂಲೆನಾಗೇ ಇತ್ತೊಂದು ಸೋಮ್ನ ಹಳ್ಳಿ’ ನಿಮಗೆ ಈ ಕತೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts