ಹೃತಿಕ್​ ಜತೆಗೆ ನಟಿಸಲು ಒಲ್ಲೆ ಎಂದ ಮನೋಜ್​ ...

Hrithik Roshan - Manoj Bajpayee - Final
Published on

ಮುಂಬೈ: ಆ ಕಡೆ ಹೃತಿಕ್​ ರೋಶನ್​ ... ಈ ಕಡೆ ಮನೋಜ್​ ಬಾಜ್ಪೇಯಿ ... ಇಬ್ಬರೂ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಂಡರೆ ಹೇಗಿರುತ್ತದೆ ಹೇಳಿ? ಇಬ್ಬರ ಅಭಿಮಾನಿಗಳು ಸೆಂಟ್​ ಪರ್ಸೆಂಟ್​ ಖುಷಿಯಾಗುತ್ತಾರೆ ಎಂಬ ಕಾರಣಕ್ಕೇ ಅವರಿಬ್ಬರನ್ನೂ ಒಟ್ಟಿಗೆ ಸೇರಿಸುವ ಪ್ರಯತ್ನವೊಂದು ಬಾಲಿವುಡ್​ನಲ್ಲಿ ಸದ್ದಿಲ್ಲದೆ ಆಗಿತ್ತು. ಆದರೆ, ಆ ಪ್ರಯತ್ನಕ್ಕೆ ಇದೀಗ ಹಿನ್ನೆಡೆ ಉಂಟಾಗಿದೆ.

'ದಿ ನೈಟ್​ ಮ್ಯಾನೇಜರ್​' ಎಂಬ ಜನಪ್ರಿಯ ವೆಬ್​ಸೀರೀಸ್​ನ ಭಾರತೀಯ ರೀಮೇಕ್​ನಲ್ಲಿ ಹೃತಿಕ್​ ನಟಿಸುತ್ತಿರುವ ವಿಷಯ ಗೊತ್ತಿರಬಹುದು. ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಮುಂದಿನ ವರ್ಷ ಪ್ರಸಾರವಾಗಲಿರುವ ಈ ವೆಬ್​ಸರಣಿಯಲ್ಲಿ, ಮನೋಜ್​ ಬಾಜ್ಪೇಯಿ ಸಹ ಒಂದು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ, ಇದೀಗ ಮನೋಜ್​ ಬಾಜ್ಪೇಯಿ ಈ ಸರಣಿಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು, 'ದಿ ನೈಟ್​ ಮ್ಯಾನೇಜರ್​'ನ ರೀಮೇಕ್​ನಿಂದ ಮನೋಜ್​ ಬಾಜ್ಪೇಯಿ ಹೊರಬಂದಿದ್ದಾರಂತೆ. ಅದಕ್ಕೆ ಕಾರಣ ಡೇಟ್​ ಸಮಸ್ಯೆ. ಮನೋಜ್​ ಕೆಲವು ಸಿನಿಮಾಗಳಿಗೆ ಈ ಮುನ್ನ ಡೇಟ್ಸ್​ ನೀಡಿದ್ದರಂತೆ. ಆದರೆ, ಕರೊನಾ ಮತ್ತು ಲಾಕ್​ಡೌನ್​ನಿಂದ ಅವೆಲ್ಲವೂ ಮುಂದಕ್ಕೆ ಹೋಗಿದೆ. ಅವೆಲ್ಲದರ ಚಿತ್ರೀಕರಣ ಲಾಕ್​ಡೌನ್​ ಮುಗಿದ ನಂತರ ಶುರುವಾಗಲಿದೆ. ಈ ಮಧ್ಯೆ, 'ದಿ ನೈಟ್​ ಮ್ಯಾನೇಜರ್​'ನ ರೀಮೇಕ್​ನ ಚಿತ್ರೀಕರಣ ಸಹ ಲಾಕ್​ಡೌನ್​ ಮುಗಿದ ಮೇಲೆ ಶುರುವಾಗುವುದರಿಂದ, ಅದಕ್ಕೆ ಡೇಟ್ಸ್​ ಹೊಂದಿಸುವುದು ಮನೋಜ್​ಗೆ ಕಷ್ಟವಾಗುತ್ತಿದೆಯಂತೆ. ಅದೇ ಕಾರಣಕ್ಕೆ ಅವರು ವೆಬ್​ಸರಣಿಗೆ ಗುಡ್​ಬೈ ಹೇಳಿದ್ದಾರೆ ಎಂಬ ಸುದ್ದಿ ಇದೆ.

ಹೃತಿಕ್​ಗೆ ಇದೇ ಮೊದಲ ಬಾರಿಗೆ ವೆಬ್​ಸೀರೀಸ್​ನಲ್ಲಿ ನಟಿಸುತ್ತಿದ್ದು, ಅದರ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇನ್ನು, ಮನೋಜ್​ ಈಗಾಗಲೇ 'ದಿ ಫ್ಯಾಮಿಲಿ ಮ್ಯಾನ್​' ಮತ್ತು 'ದಿ ಫ್ಯಾಮಿಲಿ ಮ್ಯಾನ್​ 2'ನಲ್ಲಿ ಅಭಿನಯಿಸಿದ್ದು, ಈ ಪೈಕಿ 'ದಿ ಫ್ಯಾಮಿಲಿ ಮ್ಯಾನ್​ 2' ಜೂನ್​ ನಾಲ್ಕರಿಂದ ಅಮೇಜಾನ್​ ಪ್ರೈಮ್​ನಲ್ಲಿ ಸ್ಟ್ರೀಮ್​ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net