ಮನಮೋಹನ್​ ಸಿಂಗರ ಆರ್ಥಿಕ ಉದಾರೀಕರಣ ನೀತಿ: ಗೌತಮ್​ ಅದಾನಿ ಶ್ಲಾಘಿಸಿದ್ದೇಕೆ?

adani-19
Published on

ಮುಂಬೈ: ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಉದಾರೀಕರಣ ನೀತಿಯನ್ನು  ಹೊಗಳಿದ್ದಾರೆ. ಮನಮೋಹನ್​ ಸಿಂಗ್​ ಅವರು 1991 ರಲ್ಲಿ ಘೋಷಿಸಿದ ಆರ್ಥಿಕ ಉದಾರೀಕರಣ ನೀತಿಯು ಭಾರತದ ಮೂಲಸೌಕರ್ಯ ಕ್ಷೇತ್ರಕ್ಕೆ ಅಡಿಪಾಯ ಹಾಕಿತು ಮತ್ತು ನಂತರ ಅದು ಪ್ರಗತಿಯ ಹಾದಿಯಲ್ಲಿ ಮುನ್ನಡೆಯಿತು ಎಂದು ಅವರು ಹೇಳಿದ್ದಾರೆ. 1991ರಲ್ಲಿ ಮನಮೋಹನ್ ಸಿಂಗ್ ಅವರು ದೇಶದ ಹಣಕಾಸು ಸಚಿವರಾಗಿದ್ದರು. ನಂತರ 2004 ರಿಂದ 2014 ರವರೆಗೂ ದೇಶದ ಪ್ರಧಾನಿಯಾಗಿದ್ದರು.

ಮುಂಬೈನಲ್ಲಿ ನಡೆದ ಕ್ರಿಸಿಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಗೌತಮ್ ಅದಾನಿ ಅವರು ವಿಮಾನದ ಉದಾಹರಣೆಯೊಂದಿಗೆ ಆರ್ಥಿಕ ಬೆಳವಣಿಗೆ ಕುರಿತು ವಿವರಿಸಿದರು. 1991 ಮತ್ತು 2014 ರ ನಡುವಿನ ಅವಧಿಯಲ್ಲಿ ರನ್‌ವೇಗಳ ಅಡಿಪಾಯ ಮತ್ತು ನಿರ್ಮಾಣ ನಡೆದರೆ, 2014 ರಿಂದ 2024 ರ ಅವಧಿಯು ವಿಮಾನಗಳ ಹಾರಾಟಕ್ಕೆ ಆಗಿತ್ತು ಎಂದು ಹೇಳಿದರು.

ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿ ಘೋಷಿಸಿದ ಉದಾರೀಕರಣ ನೀತಿಯನ್ನು ಗೌತಮ್ ಅದಾನಿ ಶ್ಲಾಘಿಸಿದರು. 1991 ರಲ್ಲಿ ಅಂದಿನ ಹಣಕಾಸು ಸಚಿವರ ಆರ್ಥಿಕ ಉದಾರೀಕರಣ ನೀತಿಯಿಂದಾಗಿ ದೇಶದ ಆರ್ಥಿಕತೆಯು ಹೊಸ ದಿಕ್ಕನ್ನು ಪಡೆಯಿತು. ಲೈಸೆನ್ಸ್ ರಾಜ್‌ನ ಸ್ಥಗಿತದ ಮೂಲಕ ಸರ್ಕಾರವು ಹೆಚ್ಚಿನ ವಲಯಗಳಿಗೆ ಕೈಗಾರಿಕಾ ಪರವಾನಗಿಯನ್ನು ರದ್ದುಗೊಳಿಸಿತು. ಹೂಡಿಕೆ ಮಾಡಲು, ಬೆಲೆಗಳನ್ನು ಹೊಂದಿಸಲು ಅಥವಾ ಸಾಮರ್ಥ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರದ ಅನುಮತಿಯನ್ನು ಪಡೆಯಲು ಹೆಚ್ಚಿನ ಅಗತ್ಯಗಳನ್ನು ಇದು ತೆಗೆದುಹಾಕಿತು. ಇದರಿಂದಾಗಿ ಕಳೆದ ದಶಕದಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರತ ಗಮನಾರ್ಹ ಪ್ರಗತಿಯನ್ನು ಕಂಡಿದೆ ಎಂದು ಅದಾನಿ ಹೇಳಿದರು.

ಇಂಧನ ಸಂಬಂಧಿತ ಯೋಜನೆಗಳು ಮತ್ತು ಉತ್ಪಾದನಾ ಸಾಮರ್ಥ್ಯದಲ್ಲಿ 100 ಶತಕೋಟಿ ಡಾಲರ್​ಗೂ (8,34,236 ಕೋಟಿ ರೂಪಾಯಿ) ಹೆಚ್ಚು ಹೂಡಿಕೆಯನ್ನು ಅದಾನಿ ಗ್ರೂಪ್ ಮಾಡಲಿದೆ ಎಂದು ಗೌತಮ್ ಅದಾನಿ ಹೇಳಿದರು. ನಾವು ಮುಂದಿನ ದಶಕದಲ್ಲಿ ಇಂಧನ ಪರಿವರ್ತನೆಯ ಕ್ಷೇತ್ರದಲ್ಲಿ 100 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚು ಹೂಡಿಕೆ ಮಾಡುತ್ತೇವೆ. ಇದು ಸಮಗ್ರ ನವೀಕರಿಸಬಹುದಾದ ಇಂಧನ ಮೌಲ್ಯ ಸರಪಳಿಗಳನ್ನು ವಿಸ್ತರಿಸುತ್ತದೆ. ನಾವು ಈಗಾಗಲೇ ಗುಜರಾತ್​ನ ಕಚ್ ಜಿಲ್ಲೆಯ ಖವ್ರಾದಲ್ಲಿ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಉದ್ಯಾನ ನಿರ್ಮಿಸುತ್ತಿದ್ದೇವೆ. ಈ ಏಕೈಕ ಸ್ಥಳವು 30 ಗಿಗಾ ವ್ಯಾಟ್​ ವಿದ್ಯುತ್ ಉತ್ಪಾದಿಸುತ್ತದೆ, 2030ರ ವೇಳೆಗೆ ನಮ್ಮ ಒಟ್ಟು ನವೀಕರಿಸಬಹುದಾದ ವಿದ್ಯುತ್​ ಸಾಮರ್ಥ್ಯವು 50 ಗಿಗಾ ವ್ಯಾಟ್​ ಆಗುತ್ತದೆ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net