ನಾನೇ ತಪ್ಪು ಮಾಡಿದರೆ ಬೇರೆಯವರಿಗೆ ಏನು ಹೇಳಲಿ? ... ಐಶ್ವರ್ಯ ರಜನಿಕಾಂತ್‌ಗೆ ಮಣಿರತ್ನಂ ಕೊಟ್ಟ ಉತ್ತರ

Maniratnam Final
Published on

ಖ್ಯಾತ ನಿರ್ದೇಶಕ ಮಣಿರತ್ನಂ ಅವರು ‘ಪೊನ್ನಿಯನ್ ಸೆಲ್ವನ್’ ಚಿತ್ರದ ಅರ್ಧದಷ್ಟು ಚಿತ್ರೀಕರಣ ಮಾಡಿಕೊಂಡು ಕುಳಿತಿದ್ದಾರೆ. ಲಾಕ್‌ಡೌನ್‌ನಿಂದ ಚಿತ್ರೀಕರಣ ನಿಲ್ಲದಿದ್ದರೆ, ಬಹುಶಃ ಇಷ್ಟು ಹೊತ್ತಿಗೆ ಚಿತ್ರದ ಚಿತ್ರೀಕರಣ ಮುಗಿದೇ ಹೋಗಿರುತಿತ್ತು. ಆದರೆ, ಲಾಕ್‌ಡೌನ್‌ನಿಂದ ಮಣಿರತ್ನಂ ಮನೆಯಲ್ಲಿ ಕೂರುವಂತಾಗಿದೆ. ಈ ಮಧ್ಯೆ ರಜನಿಕಾಂತ್ ಪುತ್ರಿ ಐಶ್ವರ್ಯ ಅವರಿಂದ ಮಣಿರತ್ನಂಗೆ ಒಂದು ಆಫರ್ ಹೋಗಿದ್ದು, ಆ ಆಫರ್‌ಗೆ ಮಣಿ ನೋ ಎಂದಿದ್ದಾರೆ.

ಇಷ್ಟಕ್ಕೂ ಏನು ಆ ಆಫರ್ ಅಂತೀರಾ? ಐಶ್ವರ್ಯ ರಜನಿಕಾಂತ್ ಒಂದು ಚಿತ್ರ ನಿರ್ದೇಶಿಸುವುದಕ್ಕೆ ಮುಂದಾಗಿದ್ದು, ಆ ಚಿತ್ರದಲ್ಲೊಂದು ಮುಖ್ಯ ಪಾತ್ರ ಮಾಡುವುದಕ್ಕೆ ಮಣಿರತ್ನಂ ಅವರನ್ನು ಕೇಳಿದ್ದಾರೆ. ಮಣಿರತ್ನಂ ಈ ಆಫರ್ ನಯವಾಗಿಯೇ ತಿರಸ್ಕರಿಸಿದ್ದಾರೆ. ‘ನಾನು ಮೂಲತಃ ನಿರ್ದೇಶಕ. ನಟನೆ ಮಾಡುವುದು ಕಷ್ಟ. ಒಂದು ಪಕ್ಷ ನಾನೇ ಚೆನ್ನಾಗಿ ಅಭಿನಯಿಸಲಿಲ್ಲ ಎಂದರೆ, ಬೇರೆಯವರಿಗೆ ಏನು ಹೇಳಿಕೊಡಲಿ. ನಟನೆ ನನ್ನಿಂದ ಸಾಧ್ಯವಿಲ್ಲ’ ಎಂದು ಹೇಳಿ ಸುಮ್ಮನಾದರಂತೆ.

ಇನ್ನು ಈಗ ಎಲ್ಲೆಲ್ಲೂ ವೆಬ್‌ಸೀರೀಸ್‌ಗಳದ್ದೇ ಹವಾ. ದೊಡ್ಡ ದೊಡ್ಡ ನಿರ್ದೇಶಕರೆಲ್ಲಾ ಓಟಿಟಿಗಳಿಗೆ ವೆಬ್ ಸೀರೀಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಮಣಿರತ್ನಂ ಅವರಿಗೆ ಅಂಥದ್ದೊಂದು ಅವಕಾಶ ಸಿಕ್ಕರೆ, ಅವರು ವೆಬ್ ಸೀರೀಸ್ ನಿರ್ದೇಶಿಸುತ್ತಾರಾ ಎಂದರೆ, ಖಂಡಿತಾ ಇಲ್ಲ ಎಂಬ ಉತ್ತರ ಅವರಿಂದ ಬರುತ್ತದೆ. ‘ಜೀವನ ಪೂರ್ತಿ ಟೆನ್ನಿಸ್ ಆಡಿಕೊಂಡು ಬಂದವನಿಗೆ, ಫುಟ್ಬಾಲ್ ಆಡು ಎಂದರೆ ಬಹಳ ಕಷ್ಟ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಈ ಮೂಲಕ ತಾನು ವೆಬ್ ಸೀರೀಸ್ ನಿರ್ದೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net