ಮಣಿಪುರ ಹಿಂಸಾಚಾರ: ಸೌದೆ ತರಲು ಹೋದವರು ನಾಪತ್ತೆ! ಪೊಲೀಸರು ಹೇಳಿದ್ದಿಷ್ಟು

ವಿಜಯವಾಣಿ-2024-01-11T161533.181
Published on

ಮಣಿಪುರ: ಹೊಸ ಹಿಂಸಾಚಾರ ಪ್ರಕರಣ ಭುಗಿಲೆದ್ದ ಬೆನ್ನಲ್ಲೇ ಸೌದೆ ಸಂಗ್ರಹಿಸಲು ಕಾಡಿಗೆ ತೆರಳಿದ್ದ ನಾಲ್ವರಲ್ಲಿ ಮೂವರು ನಾಪತ್ತೆಯಾದ ಘಟನೆ ಜನಾಂಗೀಯ ಗಲಭೆ ಪೀಡಿತ ಮಣಿಪುರದಲ್ಲಿ ಸಂಭವಿಸಿದೆ. ಇದೀಗ ಬಂದಿರುವ ವರದಿ ಪ್ರಕಾರ, ಆ ಮೂವರು ಇಂದು ಚುರಾಚಂದ್‌ಪುರ ಜಿಲ್ಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಬಿಷ್ಣುಪುರ ಜಿಲ್ಲೆಯ ಅಕಾಸೋಯ್‌ನ ನಾಲ್ವರು ಬುಧವಾರ ಮಧ್ಯಾಹ್ನ ಚುರಾಚಂದ್‌ಪುರದ ಸಮೀಪದ ಬೆಟ್ಟಗಳಲ್ಲಿ ಸೌದೆ ಸಂಗ್ರಹಿಸಲು ತೆರಳಿದಾಗ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಇಬೊಮ್ಚಾ ಸಿಂಗ್ (51), ಅವರ ಮಗ ಆನಂದ್ ಸಿಂಗ್ (20) ಮತ್ತು 38 ವರ್ಷದ ರೋಮೆನ್ ಸಿಂಗ್  ಶವವಾಗಿ ಪತ್ತೆಯಾಗಿದ್ದಾರೆ.

ಮೃತದೇಹಗಳು ಹಾತಕ್ ಫೈಲೆನ್ ಬಳಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದು, ಮತ್ತೊಬ್ಬ ವ್ಯಕ್ತಿ ದಾರಾ ಸಿಂಗ್ ಎಂಬುವವರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ನಡೆಯುತ್ತಿದೆ. ನಾಲ್ವರಲ್ಲಿ ಮೂವರು ವ್ಯಕ್ತಿಗಳನ್ನು ಭಯೋತ್ಪಾದಕರು ಕೊಂದಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಣಿಪುರದಲ್ಲಿ ಬುಧವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಬಿಷ್ಣುಪುರ ಜಿಲ್ಲೆಯಲ್ಲಿ ಗುಂಡಿನ ದಾಳಿ ನಡೆದಿದೆ. ಬಿಷ್ಣುಪುರದ ಕುಂಬಿ ಮತ್ತು ತೌಬಲ್‌ನ ವಾಂಗೂ ನಡುವೆ ಗುಂಡಿನ ದಾಳಿ ಸಂಭವಿಸಿದೆ. ಸ್ಥಳೀಯ ವರದಿಗಳ ಪ್ರಕಾರ, ಸಣ್ಣ ಬಂದೂಕುಗಳಿಂದ ಗುಂಡು ಹಾರಿಸುವ ಮೊದಲು ಆರು ಸುತ್ತಿನ ಮಾರ್ಟರ್ ಫೈರಿಂಗ್ ನಡೆದಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net