ಮಣಿಪುರ ಸರ್ಕಾರ ವಜಾಗೊಳಿಸಿ, ಸೌಜನ್ಯ ಪ್ರಕರಣ ಮರು ತನಿಖೆಗೆ ಒಪ್ಪಿಸಿ

D 08 MDG 1P1
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಒತ್ತಾಯಿಸಿ ದಲಿತ ಮತ್ತು ಮೈನಾರಿಟಿ ಸೇನೆಯಿಂದ ಎಸ್‌ಪಿ ಉಮಾ ಪ್ರಶಾಂತ್‌ಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಸೈಯದ್ ಅಲ್ತಾಫ್ ಹುಸೇನ್, ಎಂ.ಎಸ್.ಕೃಷ್ಣ, ಬಿ.ಆರ್.ಸುಬ್ಬಯ್ಯ, ವಾಸಿಂ ಅಹಮದ್ ಇತರರಿದ್ದರು.
Published on

ಮೂಡಿಗೆರೆ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು, ಧರ್ಮಸ್ಥಳದ ಸೌಜನ್ಯ ಹತ್ಯೆ ಪ್ರಕರಣವನ್ನು ಮರು ತನಿಖೆಗೆ ಒಪ್ಪಿಸಬೇಕು. ರಾಜ್ಯದಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದಲಿತ ಮತ್ತು ಮೈನಾರಿಟಿಸ್ ಸೇನೆಯಿಂದ ಮಂಗಳವಾರ ಎಸ್‌ಪಿ ಉಮಾ ಪ್ರಶಾಂತ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ದಲಿತ ಮತ್ತು ಮೈನಾರಿಟಿಸ್ ಸೇನೆ ಜಿಲ್ಲಾಧ್ಯಕ್ಷ ಸೈಯದ್ ಅಲ್ತಾಫ್ ಹುಸೇನ್ ಮಾತನಾಡಿ, ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಮಿತಿಮೀರಿದೆ. ಹಂತಕರು ಅಮಾಯಕರನ್ನು ಬೀದಿಯಲ್ಲಿ ಕೊಲ್ಲುತ್ತಿದ್ದಾರೆ. ಪ್ರಾರ್ಥನಾ ಮಂದಿರ ಮತ್ತು ಮನೆಗಳನ್ನು ಧ್ವಂಸಗೊಳ್ಳುತ್ತಿದ್ದಾರೆ. ಗಲಭೆ ಕೋರರ ವಿರುದ್ಧ ಕ್ರಮ ಕೈಗೊಳ್ಳದ ಅಲ್ಲಿನ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ದಲಿತರು ಮತ್ತು ಮುಸ್ಲಿಮರ ಮೇಲೆ ದೌರ್ಜನ್ಯ ಮಿತಿ ಮೀರಿದೆ. ದೌರ್ಜನ್ಯ ನಡೆಸುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಮಣಿಪುರ ಹಿಂಸಾಚಾರದಲ್ಲಿ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಕುಟುಂಬಗಳು ಮನೆ, ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಇದು ವಿಶ್ವವೇ ತಲೆ ತಗ್ಗಿಸುವ ಪ್ರಕರಣವಾಗಿದೆ ಇಂತಹ ಘಟನೆ ತಡೆಯುವಲ್ಲಿ ಮಣಿಪುರ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಅಲ್ಲಿನ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎಸ್.ಕೃಷ್ಣ ಮಾತನಾಡಿ, 2012ರಲ್ಲಿ ಧರ್ಮಸ್ಥಳದಲ್ಲಿ ನಡೆದ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯನ್ನು ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ. ಇದರಿಂದ ನಿಜವಾದ ಆರೋಪಿ ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಇದರಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಎದ್ದು ಕಾಣುತ್ತಿದೆ. ಸೌಜನ್ಯ ಕುಟುಂಬಕ್ಕೆ ಇದುವರೆಗೂ ನ್ಯಾಯ ದೊರಕಿಲ್ಲ. ಪ್ರಕರಣದ ಮರು ತನಿಖೆಯಾಗಬೇಕು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು. ಸೌಜನ್ಯ ಹಂತಕರು ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ನಿರ್ದಾಕ್ಷಣ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದಲಿತ ಮತ್ತು ಮೈನಾರಿಟಿಸ್ ಸೇನೆ ಪದಾಧಿಕಾರಿಗಳಾದ ವಾಸಿಮ್ ಅಹಮದ್, ಬಿ.ಆರ್.ಸುಬ್ಬಯ್ಯ, ಎಂ.ಪಿ.ಫಯಾಜ್ ಅಲಿ, ಗಣೇಶ್, ಸೈಯದ್‌ರಿಜ್ವಾನ್, ಟಿ.ಉಮೇಶ್, ಮಹಮ್ಮದ್ ಸುಫಿಯಾನ್, ಎಚ್.ಎಸ್.ರೋಹಿತ್, ಜಿ.ಜಿ.ವಿಜಯ ಪ್ರಕಾಶ್, ಸೈಯದ್ ಅಬಿದಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net