

ಅಹಮದಾಬಾದ್: ಕೊನೆಕ್ಷಣದಲ್ಲಿ ತಿರುಗೇಟು ನೀಡಲು ಯತ್ನಿಸಿದ ಹೊರತಾಗಿಯೂ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಸತತ 2ನೇ ಸೋಲು ಅನುಭವಿಸಿದೆ. ಟ್ರಾನ್ಸ್ಸ್ಟಡಿಯಾದಲ್ಲಿ ಸೋಮವಾರ ನಡೆದ ಕಾದಾಟದಲ್ಲಿ ಬೆಂಗಳೂರು ಬುಲ್ಸ್ ತಂಡ 30-32 ಅಂಕಗಳಿಂದ ಬೆಂಗಾಲ್ ವಾರಿಯರ್ಸ್ ಎದುರು ಪರಾಭವಗೊಂಡಿತು.
ಪಂದ್ಯದ ಆರಂಭದಿಂದಲೂ ಹಿನ್ನಡೆ ಅನುಭವಿಸಿದ್ದ ಬೆಂಗಳೂರು ತಂಡ ಮೊದಲಾರ್ಧದಲ್ಲಿ 11-14ರಿಂದ ಹಿಂದುಳಿದಿತ್ತು. ನಂತರ ದ್ವೀತಿಯಾರ್ಧದಲ್ಲಿ ಆಲೌಟ್ ಬಲೆಗೆ ಬಿದ್ದ ಬುಲ್ಸ್ ಇನ್ನಷ್ಟು ಹಿನ್ನಡೆ ಅನುಭವಿಸಿತು. ಆದರೆ ಬೆನ್ನಲ್ಲೇ ಬೆಂಗಾಲ್ ತಂಡವನ್ನು ಆಲೌಟ್ ಮಾಡಿ ತಿರುಗೇಟು ನೀಡಿದ ಬುಲ್ಸ್, ಪಂದ್ಯದ 4 ನಿಮಿಷಗಳ ಆಟ ಬಾಕಿ ಇದ್ದಾಗ 28-28ರಿಂದ ಸಮಬಲ ಸಾಧಿಸಿತು.
ಅಂತಿಮ ನಿಮಿಷಗಳಲ್ಲಿ ಮತ್ತೆ ಮುನ್ನಡೆ ಸಾಧಿಸಿದ ಬೆಂಗಾಲ್ ತಂಡ ಬುಲ್ಸ್ ಗೆಲುವು ಒಲಿಸಿಕೊಳ್ಳದಂತೆ ತಡೆಯೊಡ್ಡಿತು. ಬೆಂಗಳೂರು ತಂಡಕ್ಕೆ ರೈಡರ್ಗಳಾದ ವಿಕಾಸ್ ಕಂಡೋಲ (3), ಭರತ್ (6), ನೀರಜ್ ನರ್ವಾಲ್ (5) ಹೆಚ್ಚಿನ ಅಂಕ ತಂದುಕೊಡಲು ಶಕ್ತರಾಗಲಿಲ್ಲ. ಭರತ್ ಕೊನೇಕ್ಷಣಗಳಲ್ಲಿ ಯಶಸ್ವಿ ರೈಡಿಂಗ್ಗಳನ್ನು ನಡೆಸಿದರೂ, ಅದು ಗೆಲುವಿಗೆ ಸಾಕಾಗಲಿಲ್ಲ.
ಬೆಂಗಾಲ್ ವಾರಿಯರ್ಸ್ ನಾಯಕ ಮಣಿಂದರ್ ಸಿಂಗ್ (11 ಅಂಕ) ಭರ್ಜರಿ ನಿರ್ವಹಣೆ ತೋರಿದರೆ, ಶ್ರೀಕಾಂತ್ ಜಾಧವ್ (3), ವಿಶ್ವಾಸ್ (4) ಮತ್ತು ಡಿೆಂಡರ್ಗಳಾದ ಆದಿತ್ಯ (3), ಶುಭಂ ಶಿಂಧೆ (4) ಮಣಿಂದರ್ಗೆ ಉತ್ತಮ ಬೆಂಬಲ ಒದಗಿಸಿದರು.
ಜೈಪುರಕ್ಕೆ ಶಾಕ್ ನೀಡಿದ ಪುಣೇರಿ
ಕಳೆದ ವರ್ಷದ ಫೈನಲಿಸ್ಟ್ಗಳ ನಡುವೆ ನಡೆದ ದಿನದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ತಂಡ ಹಾಲಿ ಚಾಂಪಿಯನ್ ಜೈಪುರ ಪಿಂಕ್ಪ್ಯಾಂಥರ್ಸ್ಗೆ 37-33 ಅಂತರದಿಂದ ಆಘಾತಕಾರಿ ಸೋಲುಣಿಸಿತು. ಈ ಮೂಲಕ ಕಳೆದ ವರ್ಷದ ಫೈನಲ್ ಸೋಲಿಗೆ ಸೇಡನ್ನೂ ತೀರಿಸಿಕೊಂಡಿತು. ನಾಯಕ ಅಸ್ಲಾಂ ಮುಸ್ತಾ (10 ಅಂಕ), ಮೋಹಿತ್ ಗೋಯತ್ (8) ಪುಣೇರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದ ಮೊದಲಾರ್ಧದಲ್ಲಿ 14-18ರಿಂದ ಹಿನ್ನಡೆ ಅನುಭವಿಸಿದ್ದ ಪುಣೇರಿ ದ್ವೀತಿಯಾರ್ಧದಲ್ಲಿ ಜೈಪುರ ತಂಡವನ್ನು 2 ಬಾರಿ ಆಲೌಟ್ ಬಲೆಗೆ ಬೀಳಿಸುವ ಮೂಲಕ ತಿರುಗೇಟು ನೀಡಿತು. ರೈಡರ್ ಅರ್ಜುನ್ ದೇಸ್ವಾಲ್ (17) ಹತ್ತು ಯಶಸ್ವಿ ರೈಡಿಂಗ್ನೊಂದಿಗೆ ಪ್ರಾಬಲ್ಯ ಸಾಧಿಸಿದರೂ, ಡಿಫೆಂಡರ್ಗಳ ವೈಲ್ಯದಿಂದಾಗಿ ಜೈಪುರ ತಂಡ ಹಿನ್ನಡೆ ಅನುಭವಿಸಿತು.