ಮುನಿಸಿಪಾಲಿಕಾ ಸಮ್ಮೇಳನದಲ್ಲಿ ಗಮನ ಸೆಳೆಯುತ್ತಿದೆ ಮ್ಯಾನ್‌ಹೋಲ್ ಸ್ವಚ್ಛತೆಯ ರೋಬೋಟ್

scan
Published on

ಬೆಂಗಳೂರು: ಸುರಕ್ಷಿತ, ಸ್ಮಾರ್ಟ್ ಹಾಗೂ ಸುಸ್ಥಿರ ನಗರಗಳ ಅಭಿವೃದ್ಧಿಗೆ ಅಗತ್ಯವಾದ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಮುನಿಸಿಪಾಲಿಕಾ-2023’ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಮಂಗಳವಾರ ಚಾಲನೆ ದೊರೆಯಿತು.

ಗುರುವಾರದವರೆಗೆ(ನ.30) ನಡೆಯುವ ಸಮಾವೇಶದಲ್ಲಿ ನಗರ ಪ್ರದೇಶಗಳ ಅಭಿವೃದ್ಧಿ ಬಗ್ಗೆ ವಿಚಾರ ವಿನಿಮಯ,ನೀತಿ ನಿಯಮ ಸೇರಿ ಇತರ ಮಾಹಿತಿಗಳ ಬಗ್ಗೆ ತಜ್ಞರು ಬೆಳಕು ಚೆಲ್ಲಲಿದ್ದಾರೆ. ದೇಶಾದ್ಯಂತ ಐದು ಸಾವಿರಕ್ಕೂ ಅಧಿಕ ಉದ್ಯಮ ಸಂದರ್ಶಕರಿದ್ದು, ಸಮೇಳನದಲ್ಲಿ 200ಕ್ಕೂ ಅಧಿಕ ಪ್ರಾತ್ಯಕ್ಷಿಕೆಗಳಿವೆ. ಒಂದೊಂದು ಪ್ರಾತ್ಯಕ್ಷಿಕೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಕುರಿತು ಮಾಹಿತಿ ಲಕಗಳಿವೆ. ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ವಸತಿ ಇಲಾಖೆ ಮತ್ತು ಅದರ ಎಲ್ಲಾ ಅಧೀನ ಇಲಾಖೆಗಳು,ಸರ್ಕಾರ ಆಧೀನದ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳು ಸ್ವಚ್ಛ ಗಂಗಾ, ನದಿ ನಗರಗಳ ರಾಷ್ಟ್ರೀಯ ಮಿಷನ್ ಒಕ್ಕೂಟಗಳು ಸ್ಥಾಪಿಸಿರುವ ಪ್ರಾತ್ಯಕ್ಷಿಕೆಗಳಿಗೆ ಜನರಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳು, ನಗರ ಪಾಲಿಕೆಗಳು ಯಾವ ರೀತಿಯಲ್ಲಿ ಅಭಿವೃದ್ಧಿಗೊಂಡಿವೆ ಎಂಬುದನ್ನು ತಿಳಿದುಕೊಳ್ಳಲು ಸಮಾವೇಶಕ್ಕೆ ಭೇಟಿ ನೀಡಬಹುದು.

ಸ್ವಚ್ಛಭಾರತ್ ಯೋಜನೆ ಘಟಕಗಳ ಅನುಷ್ಠಾನದ ಸ್ಥಿತಿಗತಿ, ಘನತ್ಯಾಜ್ಯ ವಸ್ತು ನಿರ್ವಹಣೆ, ಸ್ವಚ್ಛ ಸರ್ವೇಕ್ಷಣ, ಸುಸ್ಥಿರ ಘನತ್ಯಾಜ್ಯ ನಿರ್ವಹಣೆ, ಸಾಮರ್ಥ್ಯಾಭಿವೃದ್ಧಿ, ಸುಸ್ಥಿರ ನೈರ್ಮಲ್ಯ, ಬಳಸಿದ ನೀರಿನ ನಿರ್ವಹಣೆ, ಹಸಿ ಮತ್ತು ಒಣ ಕಸ ವಿಗಂಡಣೆ ಕುರಿತು ಪ್ರಾತ್ಯಕ್ಷಿಕೆ ಸ್ಥಾಪಿಸಲಾಗಿದೆ. ಸ್ವಚ್ಛ ಭಾರತ ಯೋಜನೆಯಡಿ ರಾಜ್ಯದ 7,167 ವಾರ್ಡ್‌ಗಳಿಂದ ತ್ಯಾಜ್ಯ ಸಂಗ್ರಹಣೆ ಮಾಡಲಾಗುತ್ತಿದೆ. ಮೈಸೂರು, ತುಮಕೂರು, ಹುಬ್ಬಳಿ-ಧಾರವಾಡ ಮಹಾನಗರ ಪಾಲಿಕೆ ಗಾರ್ಬೆಟ್ ಫ್ರೀ ಸಿಟಿಗಳಾಗಿವೆ. ಕಸದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ನಗರದ ಸ್ವಚ್ಛತೆಗೆ ಸಾರ್ವಜನಿಕರು ಹಾಗೂ ಸ್ಥಳೀಯ ಸಂಸ್ಥೆಗಳು ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬುದನ್ನು ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸ್ವಚ್ಛ ಭಾರತ್ ಮಿಷನ್ ಮಳಿಗೆ ಸಿಬ್ಬಂದಿ ಮಾಹಿತಿ ನೀಡಿದರು.

ದೇಶದಲ್ಲಿ ಮಲ ಗುಂಡಿ ಸ್ವಚ್ಛಗೊಳಿಸುವಾಗ ಪೌರಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟುವ ಪ್ರಕರಣಗಳು ಅಗಾಗ್ಗೆ ನಡೆಯುತ್ತಿರುತ್ತದೆ. ಇದನ್ನು ತಡೆಗೆ, ಒಳಚರಂಡಿ ಮತ್ತು ಮ್ಯಾನ್‌ಹೋಲ್ ಸ್ಚಚ್ಛತೆಗೆ ಬ್ಯಾಂಡಿಕೋಟ್ ರೋಬೋಟ್ ಬಹಳ ಉಪಯುಕ್ತವಾಗಿದೆ. ಕಾರ್ಮಿಕರ ಅನಾರೋಗ್ಯ, ಅವಘಡ ತಪ್ಪಿಸಲು ಸಹಕಾರಿ. ಕೇರಳ ಮೂಲದ ಕಂಪನಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದರ ಪ್ರಾತ್ಯಕ್ಷಿಕೆಯನ್ನು ಸಮಾವೇಶದಲ್ಲಿ ಸ್ಥಾಪಿಸಲಾಗಿದೆ. ವಿದ್ಯುತ್‌ಚಾಲಿತ (ಇವಿ) ಹಾಗೂ ಪೆಟ್ರೋಲ್ ಆಧಾರಿತ ರೋಬೋಟ್ 5 ಲಕ್ಷ ರೂ.ಗೆ ದೊರೆಯಲಿದೆ. ಒಳಚರಂಡಿ ಸ್ವಚ್ಛತೆ ನಗರಪಾಲಿಕೆಗಳು, ಸ್ಥಳೀಯ ಸಂಸ್ಥೆಗಳು ಇವುಗಳನ್ನು ಖರೀದಿಸಬಹುದು.

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಸ ವಿಲೇವಾರಿ, ಸ್ವಚ್ಚತೆ, ನೈರ್ಮಲ್ಯ ಸಂರಕ್ಷಣೆಗೆ ಅಂದಾಜು 2 ಸಾವಿರ ಕೋಟಿ ರೂ.ಹಣ ಹಂಚಿಕೆ ಮಾಡಲಾಗುವುದು. ಇದರ ಬಗ್ಗೆ ಈಗಾಗಲೇ ಸಚಿವ ಸಂಪುಟದ ತೀರ್ಮಾನಿಸಲಾಗಿದೆ. ಬೆಂಗಳೂರು ಸೇರಿ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿ ವೈಜ್ಞಾನಿಕವಾಗಿ ಮಾಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕಟ್ಟು ನಿಟ್ಟಿನ ಆದೇಶ ನೀಡಿದೆ ಈ ಹಿನ್ನೆಲೆಯಲ್ಲಿ ನಗರದ ಸ್ವಚ್ಚತೆ, ನೈರ್ಮಲ್ಯದ ಬಗ್ಗೆ ಪರಿಣಾಮಕಾರಿಯಾಗಿ ಕೆಲಸ ಕ್ರಮ ವಹಿಸಲಾಗಿದೆ. ಎಲ್ಲ ಸ್ಥಳೀಯ ಸಂಸ್ಥೆಗಳು ರಸ್ತೆಬದಿ ಗಿಡಗಳನ್ನು ನೆಡಲು ಶಾಲೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಡಿ.ಕೆ.ಶಿವಕುಮಾರ್.ಡಿಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net