

ಮಂಡ್ಯ: ಮಂಡ್ಯ ಎಸ್ಪಿ ಹುದ್ದೆ ಸಂಬಂಧ ಎದ್ದಿರುವ ವಿವಾದ ಇದೀಗ ತೀವ್ರ ಅಸಮಾಧಾನಕ್ಕೂ ಈಡಾಗಿದ್ದು, ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗಿದೆ. ಈ ಕುರಿತು ಮಂಡ್ಯದ ಸಾರ್ವಜನಿಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದು, ಸಾಮಾಜಿಕ ಜಾಲತಾಣದಲ್ಲೂ ದನಿ ಎತ್ತಿದ್ದಾರೆ.
ಕಳೆದ ಒಂಬತ್ತು ದಿನಗಳಿಂದ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆ ಖಾಲಿ ಉಳಿದಿರುವ ಸಂಬಂಧ ಸ್ಥಳೀಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಮಂಡ್ಯ ಎಸ್ಪಿ ಆಗಿದ್ದ ಅಶ್ವಿನಿ ಅವರನ್ನು ಇದೇ ತಿಂಗಳ 20ರಂದು ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಸುಮನ್ ಡಿ. ಪನ್ನೇಕರ್ ಅವರನ್ನು ವರ್ಗ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ನೂತನ ಎಸ್ಪಿಯಾಗಿ ನೇಮಕಗೊಂಡಿದ್ದ ಸುಮನ್ ಅವರಿಗೆ ಅಧಿಕಾರ ವಹಿಸಿಕೊಳ್ಳದಂತೆ ಮೌಖಿಕವಾಗಿ ಆದೇಶ ನೀಡಿದ್ದರಿಂದ ಎಸ್ಪಿ ಹುದ್ದೆ ಖಾಲಿ ಉಳಿದಿದೆ.
ಹೀಗಾಗಿ ಮಂಡ್ಯ ಜನರು ಪೊಲೀಸ್ ಇಲಾಖೆ ವಿರುದ್ಧ ಅಸಮಾಧಾನಗೊಂಡಿದ್ದು, ಹೆಚ್ಚು ಬೀಟ್ ಕೂಗಿದವರಿಗೆ ಎಸ್ಪಿ ಸ್ಥಾನ ಕೊಡಲಿಕ್ಕೆಂದೇ ಹೀಗೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲ ಭ್ರಷ್ಟ ಐಪಿಎಸ್-ಕೆಎಸ್ಪಿಎಸ್ ಅಧಿಕಾರಿಗಳಿಗೆ ಸುವರ್ಣಾವಕಾಶ. ಮಂಡ್ಯ ಎಸ್ಪಿ ಹುದ್ದೆ ಹರಾಜಿಗಿದೆ ಎಂದು ಮಂಡ್ಯ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.