'ಒಳ್ಳೆಯ ಬ್ಯಾಂಕ್, ಒಂದು ರೂಪಾಯಿಯೂ ಸಿಗಲಿಲ್ಲ' ಎಂದು ನೋಟ್​ ಬರೆದಿಟ್ಟ ಕಳ್ಳ..

note
ಸಾಂದರ್ಭಿಕ ಚಿತ್ರ
Published on

ಮಂಚೇರಿಯಲ್: ಬ್ಯಾಂಕ್ ದರೋಡೆ ಮಾಡಲು ಹೋದ ಕಳ್ಳನಿಗೆ ವಿಚಿತ್ರ ಅನುಭವವಾಗಿದ್ದು, ತಮಾಷೆಯ ಪತ್ರ ಬರೆದಿಟ್ಟು ಹೋಗಿರುವ ಘಟನೆ ತೆಲಂಗಾಣದ ಮಂಚೇರಿಯಲ್​ ಜಿಲ್ಲೆಯ ನೆನ್ನಾಲ್​ಮಂಡಲಲ್ಲಿ ನಡೆದಿದೆ.

ತೆಲಂಗಾಣ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಗುರುವಾರದಂದು ಮಧ್ಯರಾತ್ರಿ ಅಪರಿಚಿತ ಕಳ್ಳನೊಬ್ಬ ದರೋಡೆಗೆ ಯತ್ನಿಸಿದ್ದಾನೆ. ಸೆಕ್ಯುರಿಟಿಯಿಂದ ತಪ್ಪಿಸಿಕೊಂಡು ಬ್ಯಾಂಕ್​ನ ಬೀಗ ಒಡೆದು ಒಳಗೆ ಹೋಗಿರುವ ಆತ ಲಾಕರ್ ಕೋಣೆಗೆ ನುಸುಳಲು ಪ್ರಯತ್ನಿಸಿದ್ದು, ಆತನ ಪ್ರಯತ್ನ ವಿಫಲವಾಗಿದೆ.

ಕೊನೆಗೆ ಬ್ಯಾಂಕ್​ನಲ್ಲಿ ಹುಡುಕಾಡಿದರೂ ಆತನಿಗೆ ಒಂದು ರೂಪಾಯಿಯೂ ಸಿಕ್ಕಿಲ್ಲ. ಈ ಕಳ್ಳತನ ಯಶಸ್ವಿಯಾದರೆ ತನ್ನ ಜೀವನ ಸೆಟಲ್​ ಆಗುತ್ತದೆ. ರಾತ್ರೋರಾತ್ರಿ ಕೋಟ್ಯಾಧಿಪತಿಯಾಗುತ್ತೇನೆ ಎಂದು ಕನಸು ಕಂಡಿದ್ದ ಆತನಿಗೆ ಬ್ಯಾಂಕಿನಲ್ಲಿ ಏನೂ ಸಿಗದ ಕಾರಣ ‘ಒಳ್ಳೆಯ ಬ್ಯಾಂಕ್, ಒಂದು ರೂಪಾಯಿಯೂ ಸಿಕ್ಕಿಲ್ಲ, ನನ್ನನ್ನು ಹಿಡಿಯಬೇಡಿ ನನ್ನ ಬೆರಳಚ್ಚು ಕೂಡ ಇಲ್ಲ’ ಎಂದು ಪತ್ರ ಬರೆದು ಅಲ್ಲಿಂದ ಹೊರಟು ಹೋಗಿದ್ದಾನೆ.

ಮರುದಿನ ಬೆಳಿಗ್ಗೆ ಬ್ಯಾಂಕ್‌ಗೆ ಬಂದ ಅಧಿಕಾರಿಗಳು ಬೀಗ ಮುರಿದಿರುವುದು ಗಮನಿಸಿದ್ದಾರೆ. ಆ ಬಳಿಕ ಬ್ಯಾಂಕಿನಲ್ಲಿ ಸಿಕ್ಕ ಪತ್ರದ ಆಧಾರದ ಮೇಲೆ ಪೊಲೀಸರಿಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net