

ಮುಂಬೈ: ಕ್ರಿಕೆಟಿಗರ ಪಾಲಿಗೆ ಬ್ಯಾಟ್ ಅತ್ಯಂತ ಶಕ್ತಿಶಾಲಿ ಆಯುಧ. ವಿಶ್ವದ ಎಲ್ಲ ಕ್ರಿಕೆಟಿಗರ ಯಶಸ್ಸಿನಲ್ಲೂ ಅವರ ಬ್ಯಾಟ್ಗಳ ಪಾಲು ಕೂಡ ಪ್ರಮುಖವಾದುದು. ಆದರೆ ಕ್ರಿಕೆಟಿಗರು ಬಳಸುವ ಎಲ್ಲ ಬ್ಯಾಟ್ಗಳು ಅವರ ಉಪಯೋಗಕ್ಕೆ ಯೋಗ್ಯವಾಗಿಯೇ ಅವರ ಕೈಸೇರುವುದಿಲ್ಲ. ಕೆಲ ಬ್ಯಾಟ್ಗಳನ್ನು ಅವರ ಇಷ್ಟದಂತೆ ಬದಲಾಯಿಸಬೇಕಾಗುತ್ತದೆ. ಅವರಿಗೆ ಈ ಕೆಲಸಕ್ಕೆ ನೆರವಾಗುವವರು ಬ್ಯಾಟ್ ಫಿಕ್ಸರ್ಗಳು. ದಿಗ್ಗಜರಾದ ಸಚಿನ್ ತೆಂಡುಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರಿಗೆ ಬ್ಯಾಟ್ಗಳು ಅವರಿಗೆ ಬೇಕಾದಂತೆ ಸರಿಮಾಡಿಕೊಡುತ್ತಿದ್ದ ವ್ಯಕ್ತಿಯೊಬ್ಬರು ಈಗ ಕರೊನಾ ಹಾವಳಿಯಿಂದಾಗಿ ತೀವ್ರ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಯಲ್ಲಿ ಸಿಲುಕಿದ್ದಾರೆ.
ವಾಂಖೆಡೆ ಕ್ರೀಡಾಂಗಣದ ಬಳಿಕ ಶಾಪ್ ಒಂದನ್ನು ಹೊಂದಿರುವ ಅಶ್ರಫ್ ಚೌಧರಿ ಎಂಬವರು 70ರ ದಶಕದಿಂದಲೂ ಮುಂಬೈಗೆ ಬರುವ ಎಲ್ಲ ಬ್ಯಾಟ್ಸ್ಮನ್ಗಳಿಗೂ ಬ್ಯಾಟ್ ಫಿಕ್ಸ್ ಮಾಡಿ ಕೊಡುತ್ತಿದ್ದರು. ವಿದೇಶಿ ಕ್ರಿಕೆಟಿಗರಾದ ಸ್ಟೀವನ್ ಸ್ಮಿತ್ ಮತ್ತು ಫಾಫ್ ಡು ಪ್ಲೆಸಿಸ್ ಕೂಡ ಅವರಿಂದಲೇ ಬ್ಯಾಟ್ ಸರಿಮಾಡಿಕೊಂಡಿದ್ದಾರೆ. ಬ್ಯಾಟ್ನ ಎಲ್ಲ ಲೋಪದೋಷಗಳನ್ನು ಸರಿಮಾಡಿಕೊಡುವಲ್ಲಿ ಅವರು ಪರಿಣತರಾಗಿದ್ದರು. ಬ್ಯಾಟ್ನ ಭಾರ ಇಳಿಸುವುದರಿಂದ ಅದರ ಹ್ಯಾಂಡ್ಲ್ ಗ್ರಿಪ್ ಸರಿಮಾಡಿಕೊಡುವವರೆಗೆ ಬ್ಯಾಟ್ಮನ್ಗಳ ಎಲ್ಲ ಬೇಡಿಕೆಗಳನ್ನೂ ಅವರು ಪೂರೈಸುತ್ತಿದ್ದರು.
ಕರೊನಾ ಹಾವಳಿ ಶುರುವಾದ ಬಳಿಕ ಎಲ್ಲರ ಜೀವನವೂ ಬದಲಾಗಿರುವಂತೆ ಅಶ್ರಫ್ ಚೌಧರಿ ಅವರ ಬದುಕು ಕೂಡ ಈಗ ಅಸ್ತವ್ಯಸ್ತವಾಗಿದೆ. ಕಿಡ್ನಿಸ್ಟೊನ್ ಮತ್ತಿತರ ವಯೋಸಹಜ ಆರೋಗ್ಯ ಸಮಸ್ಯೆಯಿಂದಾಗಿ ಮುಂಬೈ ಹೊರವಲಯದ ಆಸ್ಪತ್ರೆಯೊಂದಕ್ಕೆ ದಾಖಲಾಗಿರುವ ಅವರು ಈಗ ಸೂಕ್ತ ಚಿಕಿತ್ಸೆ ಪಡೆಯಲು ಹಣಕಾಸಿನ ಕೊರತೆ ಎದುರಿಸುತ್ತಿದ್ದಾರೆ. ಅವರ ಆಪ್ತರೊಬ್ಬರು ಹಣಕಾಸು ಹೊಂದಿಸಿಕೊಳ್ಳಲು ಮುಂದೆ ಬಂದಿದ್ದರೂ, ಹಾಲಿ ಪರಿಸ್ಥಿತಿಯಿಂದಾಗಿ ಅವರಿಗೆ ಸೂಕ್ತ ನೆರವು ಸಿಗುತ್ತಿಲ್ಲ.
ಲಾಕ್ಡೌನ್ ಶುರುವಾದ ಬಳಿಕ ಅವರ ವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ಮುಂಬೈನಲ್ಲಿ ಕ್ರಿಕೆಟ್ ಚಟುವಟಿಕೆ ಸಂಪೂರ್ಣವಾಗಿ ಸ್ತಬ್ಧಗೊಂಡ ಕಾರಣದಿಂದಾಗಿ ಅವರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ನಡುವೆ ಇದುವರೆಗೆ 2 ಲಕ್ಷ ರೂ. ಆರ್ಥಿಕ ನೆರವು ಅವರಿಗೆ ಲಭಿಸಿದ್ದು, ಇನ್ನಷ್ಟು ನೆರವಿನ ನಿರೀಕ್ಷೆಯಲ್ಲಿದ್ದಾರೆ.
ವಿಂಡೀಸ್ ತಂಡಕ್ಕೆ 16 ಬ್ಯಾಟ್ ಕೊಡುಗೆ ನೀಡಿದ್ದರು!
ಅಶ್ರಫ್ ಚೌಧರಿ ಅವರ ಬದುಕು ಈ ವರ್ಷ ಕರೊನಾ ಹಾವಳಿ ಶುರುವಾಗುವವರೆಗೆ ಉತ್ತಮವಾಗಿಯೇ ಸಾಗುತ್ತಿತ್ತು. ಆದರೆ ಲಾಕ್ಡೌನ್ ನಂತರದಲ್ಲಿ ಕ್ರಿಕೆಟ್ ಬ್ಯಾಟ್ ಕೇಳುವವರೇ ಇಲ್ಲದಂತಾಗಿ ಅವರ ಬದುಕು ಕೂಡ ಬರಿದಾಯಿತು. ಈ ವರ್ಷ ಐಪಿಎಲ್ ಕೂಡ ವಿದೇಶದಲ್ಲಿ ನಡೆಯುತ್ತಿರುವುದರಿಂದ ಅವರ ಬ್ಯಾಟ್ಗಳಿಗೆ ಬೇಡಿಕೆ ಇಲ್ಲದಂತಾಗಿದೆ. 2016ರಲ್ಲಿ ಟಿ20 ವಿಶ್ವಕಪ್ ಆಡಲು ಭಾರತಕ್ಕೆ ಬಂದಿದ್ದ ವೆಸ್ಟ್ ಇಂಡೀಸ್ ತಂಡದ ಎಲ್ಲ 16 ಆಟಗಾರರಿಗೆ ಅವರು ತಲಾ 1 ಬ್ಯಾಟ್ ಉಡುಗೊರೆಯಾಗಿ ನೀಡಿದ್ದರು. ಆ ಸಮಯದಲ್ಲಿ ವಿಂಡೀಸ್ ಕ್ರಿಕೆಟಿಗರು ಮತ್ತು ಮಂಡಳಿಯ ನಡುವೆ ವೇತನ ವಿವಾದ ನಡೆಯುತ್ತಿದ್ದ ಕಾರಣ ಅವರು ವಿಂಡೀಸ್ ಆಟಗಾರರಿಗೆ ಈ ಮೂಲಕ ನೆರವಾಗಿದ್ದರು.