ಹಣದ ಆಸೆಗಾಗಿ ವೃದ್ಧನ ಜತೆ ಅಪ್ರಾಪ್ತ ವಯಸ್ಕಳ ಮದುವೆ ಮಾಡಿಸಲು ಮುಂದಾದ ತಂದೆ; ಮುಂದೆ ನಡೆದಿದ್ದು ಮಾತ್ರ...

Old Man Marriage
Published on

ನವದೆಹಲಿ: ಯಾವುದೇ ತಂದೆಯಾದರೂ ತನ್ನ ಮಗಳು ಮದುವೆಯಾಗುವ ಹುಡುಗನ ಬಗ್ಗೆ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸಿರುತ್ತಾರೆ. ತಮ್ಮ ಮನೆಗೆ ಅಳಿಯನಾಗಿ ಬರುವ ಗಂಡು ಹೀಗಿರಬೇಕು ಎಂದು ಯೋಚಿಸಿಯೇ ಮಗಳ ಮದುವೆಯನ್ನು ನಿಶ್ಚಯಿಸುತ್ತಾರೆ. ಆದರೆ, ಇಲ್ಲೊಬ್ಬ ಭೂಪ ತನ್ನ ಅಪ್ರಾಪ್ತ ವಯಸ್ಕ ಮಗಳನ್ನು 5 ಲಕ್ಷ ರೂಪಾಯಿ ಆಸೆಗೆ ವೃದ್ಧನೊಬ್ಬನಿಗೆ ಕೊಟ್ಟು ಮದುವೆ ಮಾಡಲು ಮುಂದಾಗಿದ್ದು, ಬಳಿಕ ಮದುವೆ ಮನೆಯಲ್ಲಿ ದೊಡ್ಡ ಹೈಡ್ರಾಮವೇ ನಡೆದು ಹೋಗಿದೆ.

ಘಟನೆಯು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದ್ದು, ವಿಚಾರ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಮದುವೆಯನ್ನು ನಿಲ್ಲಿಸಿ ವರ ಹಬೀಬ್​ ಖಾನ್​ (72)ನನ್ನು ವಶಕ್ಕೆ ಪಡೆದಿದ್ದಾರೆ. ದುಡ್ಡಿನ ಆಸೆಗೆ ಮಗಳನ್ನು ಮಾರಾಟ ಮಾಡಲು ಯತ್ನಿಸಿದ ತಂದೆ ಆಲಂ ಸೈಯದ್​​ ಪರಾರಿಯಾಗಿದ್ದು, ಪೊಲೀಸರು ಈತನಿಗಾಗಿ ಹುಡುಕಾಡುತ್ತಿದ್ದಾರೆ.

Muslim Man Marriage

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಬಾಲಕಿಯ ತಂದೆ ಆಲಂ ಸೈಯದ್​ ಐದು ಲಕ್ಷ ರೂ. ಹಣಕ್ಕೆ ತನ್ನ ಮಗಳನ್ನು ಹಬೀಬ್​ ಖಾನ್​ಗೆ ಮದುವೆ ಮಾಡಿಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾನೆ. ಬಳಿಕ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದ್ದು, ಕೂಡಲೇ ಮಧ್ಯಪ್ರವೇಶಿಸಿ ವರ ಹಬೀಬ್​ ಖಾನ್​ ಹಾಗೂ ಮದುವೆ ನಡೆಸಿಕೊಡಲು ಬಂದಿದ್ದ ನಿಕಾಹ್ ಖ್ವಾನ್​ನನ್ನು ವಶಕ್ಕೆ ಪಡೆಯಲಾಗಿದೆ.

ಪೊಲೀಸರು ಬರುತ್ತಿದ್ದಂತೆ ಬಾಲಕಿಯ ತಂದೆ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ. ಬಾಲ್ಯ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net