

ಮುಂಬೈ: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಪ್ರಸಿದ್ಧ ಗಾದೆ ಮಾತಿದೆ. ಆದರೆ, ಕೆಲವೊಮ್ಮೆ ಜಗಳಗಳು ವಿಕೋಪಕ್ಕೆ ತಿರುಗಿ ಅಪರಾಧ ಪ್ರಕರಣಗಳೂ ನಡೆದು ಹೋಗುತ್ತವೆ.
ಇದೀಗ ಘಟನೆ ಒಂದರಲ್ಲಿ ವ್ಯಕ್ತಿಯೋರ್ವ ತನ್ನ ಹೆಂಡತಿಯ ಮೇಲಿನ ಸಿಟ್ಟಿನಿಂದ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ಕಾರ್ಜಟ್ ಪ್ರದೇಶದಲ್ಲಿರುವ ಅಲ್ಸುಂಡೆ ಎಂಬ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಕಾರು ಪಲ್ಟಿಯಾಗಿ ಹೆಡ್ಕಾನ್ಸ್ಟೇಬಲ್ ಮೃತ್ಯು
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಅಹ್ಮದ್ನಗರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿ ಗೋಕುಲ್ ಕ್ಷೀರಸಾಗರ್(38) ಪತ್ನಿಯೊಂದಿಗೆ ಜಗಳವಾಡಿ ತನ್ನ ಇಬ್ಬರು ಮಕ್ಕಳನ್ನೂ ಕರೆದುಕೊಂಡು ಮನೆಯಿಂದ ಹೊರ ಬಂದಿದ್ದಾನೆ. ಬಳಿಕ ಸಿಟ್ಟಿನಲ್ಲಿ ಊರಿನ ಮುಂಭಾಗ ಇರುವ ಬಾವಿಯೊಂದರಲ್ಲಿ ತನ್ನ ಇಬ್ಬರು ಮಕ್ಕಳನ್ನು ತಳ್ಳಿದ್ದಾನೆ.
ಮಕ್ಕಳನ್ನು ಬಾವಿಗೆ ತಳ್ಳಿರುವ ವಿಚಾರ ತಿಳಿದ ಪತ್ನಿ ಕೂಡಲೇ ಸ್ಥಳಕ್ಕೆ ತೆರಳಿ ಪೊಲೀಸರು ಹಾಗೂ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳ ತಂಡ ಮಕ್ಕಳಿಬ್ಬರ ಮೃತದೇಹಗಳನ್ನೂ ಬಾವಿಯಿಂದ ಹೊರತೆಗೆದಿದ್ದಾರೆ. ಗೋಕುಲ್ನ ಪತ್ನಿ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ(IPC Section) 302(ಕೊಲೆ)ರ ಅಡಿ FIR ದಾಖಲಿಸಿಕೊಳ್ಳಲಾಗಿದೆ ಎಂದು ಅಹ್ಮದ್ನಗರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.