

ಉಡುಪಿ: ಪ್ರೀತಿಯಿಂದ ಸಾಕಿದ್ದ ಹಸುವನ್ನು ಪಕ್ಕದ ಮನೆಯವನೇ ಕದ್ದು, ಹತ್ಯೆ ಮಾಡಿ, ಮಾಂಸ ಮಾರಾಟ ಮಾಡಿರುವ ಘಟನೆ ಉಡುಪಿಯ ನೇಜಾರಿನಲ್ಲಿ ನಡೆದಿದೆ. ಕಳ್ಳತನ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನೇಜಾರಿನ ಪ್ರಗತಿ ನಗರದ ವಾಸಿ ಯಮನ ಗಂಗಾಧರ ಹಸುವನ್ನು ಭಾನುವಾರದಂದು ಬೆಳಗ್ಗೆ ಮೇಯಲು ಬಿಡಲಾಗಿತ್ತು. ಮೇಯಲು ಹೋಗಿದ್ದ ಹಸುವನ್ನು ಅವರ ಪಕ್ಕದ ಮನೆಯ ಇಬ್ರಾಹಿಂ ಹೆಸರಿನ ವ್ಯಕ್ತಿ 11.45ರ ಹೊತ್ತಿಗೆ ಎಳೆದುಕೊಂಡು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಮನೆಯ ಟಾಯ್ಲೆಟ್ನಲ್ಲಿ ಗೋ ಹತ್ಯೆ ಮಾಡಿ ಮಾಂಸವನ್ನು ಮಾರಾಟ ಮಾಡಿದ್ದಾನೆ.
ಹಸುವನ್ನು ಬಲವಂತವಾಗಿ ಎಳೆದೊಯ್ಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದನ್ನಾಧರಿಸಿ ಗೋ ಮಾಲಿಕರು ದೂರು ನೀಡಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.