

ಫ್ಲೋರಿಡಾ: ಚಿಕ್ಕಮಕ್ಕಳನ್ನು ಕಟ್ಟಿಕೊಂಡು ಪ್ರಯಾಣಿಸುವುದು ಅಷ್ಟು ಸುಲಭದ ಮಾತಲ್ಲ. ಕೆಲವೊಮ್ಮೆ ನಮ್ಮ ಮಾತು ಕೇಳುತ್ತವೆ ಮತ್ತು ಹಠ ಮಾಡುವ ಮೂಲಕ ತಾಳ್ಮೆಯನ್ನು ಪರೀಕ್ಷಿಸುತ್ತವೆ.
ಇದೀಗ ಇದೇ ರೀತಿಯ ಘಟನೆಯೊಂದು ನಡೆದಿದ್ದು ವಿಮಾನದಲ್ಲಿ ಸಹ ಪ್ರಯಾಣಿಕರೊಬ್ಬರು ತಾಳ್ಮೆಯನ್ನುಕಳೆದುಕೊಂಡು ಕೂಗಾಡಿರುವುದು ಕಂಡು ಬರುತ್ತದೆ.
ಸೌತ್ವೆಸ್ಟ್ ಏರ್ಲೈನ್ಸ್ ಮೂಲಕ ಫ್ಲೋರಿಡಾಗೆ ತೆರಳುವ ವೇಳೆ ಮಗು ಅಳುತ್ತಿದ್ದನ್ನು ಗಮನಿಸಿದ ಪ್ರಯಾಣಿಕರೊಬ್ಬರು ತಮ್ಮ ತಾಳ್ಮೆಯನ್ನು ಕಳೆದುಕೊಂಡು ಕೂಗಾಡಿದ್ಧಾರೆ.
ಹವಾಮಾನ ವೈಪಿರಿತ್ಯದಿಂದಾಗಿ ಪಾಮ್ ಬೀಚ್ನಲ್ಲಿ ವಿಮಾನವನ್ನು ಲ್ಯಾಂಡ್ ಮಾಡಲಾಗಿತ್ತು. ಈ ವೇಳೆ ಮಗು ಆಳಲು ಆರಂಭಿಸಿದೆ. ಪೋಷಕರು ಹಾಗೂ ಸುತ್ತಮುತ್ತಲಿನವರು ಎಷ್ಟೇ ಸಮಾಧಾನ ಮಾಡಿದ್ದರು ಮಗು ಅಳುವುದನ್ನು ನಿಲ್ಲಿಸಿಲ್ಲ.
ಮಗುವಿನ ಅಳುವಿನ ಶಬ್ದವನ್ನು ತಡೆಯಲಾಗದೆ ಸಹ ಪ್ರಯಣಿಕರೊಬ್ಬರು ಫ್ಲೈಟ್ ಅಟೆಂಡೆಂಟ್ನನ್ನು ಕರೆದು ದಯವಿಟ್ಟು ಮಗುವನ್ನು ಶಾಂತಗೊಳಿಸಿ ನಾನು ಹೆಡ್ಫೋನ್ಗಳನ್ನು ಹಾಕಿಕೊಂಡು ನಿದ್ರಿಸುತ್ತಿದೆ. ಮಗು ಏಕೆ ಅರಚುತ್ತಿದೆ ನೀವು ಶಾಂತ ಮಾಡುತ್ತಿರೋ ಇಲ್ಲ ನಾನು ಕಿರುಚಾಡಬೇಕೆ ಎಂದು ಹೇಳಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸಹ ಪ್ರಯಾಣಿಕರೊಬ್ಬರು ವ್ಯಕ್ತಿಯನ್ನು ಸಮಾಧಾನ ಪಡಿಸಲು ಯತ್ನಿಸುತ್ತಾರೆ. ಆದರೆ, ವ್ಯಕ್ತಿ ಸುಮ್ಮನಾಗದ ಕಾರಣ ಇತರೆ ಪ್ರಯಾಣಿಕರು ಆತನಿಗೆ ಬುದ್ದಿವಾದ ಹೇಳಲು ಶುರು ಮಾಡುತ್ತಾರೆ.
ವಿಮಾನದ ಕ್ಯಾಬಿನ್ ಕ್ರೂ ಸಿಬ್ಬಂದಿಯ ಎಚ್ಚರಿಕೆಯ ನಡುವೆಯೂ ವ್ಯಕ್ತಿ ಕೂಗಾಡುವುದನ್ನು ನಿಲ್ಲಿಸುವುದಿಲ್ಲ. ಇದಕ್ಕೆ ತಲೆ ಕೆಡಿಸಿಕೊಳ್ಳದ ವಿಮಾನದ ಸಿಬ್ಬಂದಿ ಆತನನ್ನು ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರ ಸಹಾಯದೊಂದಿಗೆ ವಿಮಾನದಿಂದ ಕೆಳಗಿಳಿಸಿದ್ದಾರೆ.
ಇನ್ನು ಘಟನೆ ಕುರಿತು ಪ್ರತಿಕ್ರಿಯಿಸಿರುವ ಸೌಥ್ವೆಸ್ಟ್ ಏರ್ಲೈನ್ಸ್ ಸಂಸ್ಥೆಯೂ ಸವಾಲಿನ ಪರಿಸ್ಥಿತಿಯಲ್ಲಿ ವೃತ್ತಿಪರತೆ ತೋರಿದ ತಮ್ಮ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ. ಇಂತಹ ಸಮಯದಲ್ಲಿ ಇತರೆ ಪ್ರಯಾಣಿಕರು ತಾಳ್ಮೆ ಕಳೆದುಕೊಳ್ಳದೆ ಸಹನೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳನ್ನು ಹೇಳಿದೆ.